ವಿಧಾನಸೌಧದ ಸಮೀಪ ನಾಯಿಗಳ ಹಾವಳಿ: ತಡೆಗೆ ಕ್ರಮ

ಮಂಗಳೂರು: ʻವಿಧಾನಸೌಧದಲ್ಲಿ ನಾಯಿಗಳ ಹಾವಳಿ ಮಿತಿ ಮೀರಿದ್ದು, ಇದನ್ನು ತಡೆಯುವ ನಿಟ್ಟಿನಲ್ಲಿ ಅಧಿಕಾರಿಗಳ ಸಭೆ ಶೀಘ್ರದಲ್ಲಿ ನಡೆಯಲಿದೆ’ ಎಂದು ವಿಧಾನಸಭಾ ಅಧ್ಯಕ್ಷ ಯು.ಟಿ. ಖಾದರ್ ತಿಳಿಸಿದ್ದಾರೆ.
ನಗರದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ವಿಧಾನಸೌಧ ಬಳಿ ಹಿಂದಿನಿಂದಲೂ ನಾಯಿಗಳ ಹಾವಳಿ ಇದೆ. ವಿಧಾನಸೌಧ ಬಳಿ ಇರುವ ನಾಯಿಗಳ ಬಗ್ಗೆ ಸಾರ್ವಜನಿಕರದು ಭಿನ್ನ ಅಭಿಪ್ರಾಯಗಳಿವೆ. ಕೆಲವರು ನಾಯಿಯಿಂದ ಯಾವುದೇ ಸಮಸ್ಯೆ ಇಲ್ಲವೆಂದರೆ, ಇನ್ನೂ ಕೆಲವರು ನಾಯಿಗಳಿಂದ ಸಮಸ್ಯೆ ಆಗುತ್ತದೆ ಎನ್ನುತ್ತಾರೆ. ಬೆಳಗಿನ ಸಮಯದಲ್ಲಿ ನಾಯಿಗಳು ವಾಕಿಂಗ್ ಬರುವವರಿಗೂ ತೊಂದರೆ ಕೊಡುತ್ತವೆ ಎಂಬ ಅಭಿಪ್ರಾಯವಿದೆ. ನಾಯಿಗಳು ಇಲ್ಲಿಯೇ ಬೀಡು ಬಿಟ್ಟಿದ್ದು, ಇವುಗಳ ಹಾವಳಿಯನ್ನು ತಡೆಯಲು ಮುಂದಾಗಬೇಕಾಗಿದೆ” ಎಂದರು.
“ಈ ನಿಟ್ಟಿನಲ್ಲಿ ಅಧಿಕಾರಿಗಳು ಶೀಘ್ರದಲ್ಲಿ ಸಭೆ ನಡೆಸಲಿದ್ದಾರೆ. ವಿಧಾನಸಭೆಯ ಚೀಫ್ ಸೆಕ್ರೆಟರಿ, ಪ್ರಾಣಿ ದಯಾ ಸಂಘದ ಸದಸ್ಯರು ಈ ಸಭೆಯಲ್ಲಿ ಇರಲಿದ್ದಾರೆ. ಈ ಸಭೆಯಲ್ಲಿ ವಿಧಾನಸೌಧದ ಬಳಿ ಇರುವ ನಾಯಿಗಳ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು” ಎಂದು ಸ್ಪೀಕರ್ ತಿಳಿಸಿದರು.
ಶಾಶ್ವತ ಲೈಟಿಂಗ್ ವ್ಯವಸ್ಥೆ…
ವಿಧಾನಸೌಧಕ್ಕೆ ಶಾಶ್ವತ ಲೈಟಿಂಗ್ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಇದೀಗ ಗಣರಾಜ್ಯೋತ್ಸವ, ಕನ್ನಡ ರಾಜ್ಯೋತ್ಸವ ಮುಂತಾದ ಸಂದರ್ಭದಲ್ಲಿ ತಾತ್ಕಾಲಿಕ ಲೈಟಿಂಗ್ ವ್ಯವಸ್ಥೆ ಮಾಡಲಾಗುತ್ತಿತ್ತು. ಈ ತಾತ್ಕಾಲಿಕ ವ್ಯವಸ್ಥೆಗಾಗಿ ಲಕ್ಷಾಂತರ ರೂ. ಖರ್ಚಾಗುತ್ತಿತ್ತು. ಇದೀಗ ಶಾಶ್ವತ ವ್ಯವಸ್ಥೆ ಮಾಡಿ, ಅದನ್ನು ನಿರ್ವಹಣೆಗೆ ಕೊಡಲು ನಿರ್ಧರಿಸಲಾಗಿದೆ. ಮುಂದೆ ಯಾವುದೇ ವಿಶೇಷ ಸಂದರ್ಭದಲ್ಲಿ ಮತ್ತು ಶನಿವಾರ, ಆದಿತ್ಯವಾರ ಸಂಜೆಯ ಬಳಿಕ ಲೈಟಿಂಗ್ ಮೂಲಕ ವಿಧಾನಸೌಧವನ್ನು ಆಕರ್ಷಣೆಗೊಳಿಸುವ ಪ್ರಯತ್ನ ಮಾಡಲಾಗುವುದು” ಎಂದು ಹೇಳಿದರು.
ಇರುವ ಸ್ಥಾನದಲ್ಲಿ ತೃಪ್ತಿ..
ಇತ್ತೀಚೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನರಿಂಗಾನ ಸಭೆಯಲ್ಲಿ ಖಾದರ್ ಅವರಿಗೆ ಸ್ಪೀಕರ್ ಸ್ಥಾನ ಇಷ್ಟವಿರಲಿಲ್ಲ ಎಂದು ನೀಡಿದ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, “ನಾನು ಎಲ್ಲಾ ಸ್ಥಾನದಲ್ಲಿ ತೃಪ್ತಿ ಪಡುವೆ. ಅಧಿಕಾರ ಇದ್ದರೂ, ಇಲ್ಲದಿದ್ದರೂ ತೃಪ್ತಿ ಪಡುವೆ. ನಾನು ಈಗ ಸ್ಪೀಕರ್. ನನಗೆ ನಾನೇ ಕಮಾಂಡ್” ಎಂದರು.