ರಾಣೇಬೆನ್ನೂರ: ಮೈಕ್ರೋ ಫೈನಾನ್ಸ್‌ವರ ಕಿರುಕುಳಕ್ಕೆ ಬೇಸತ್ತು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಹೊರವಲಯದಲ್ಲಿರುವ ಅಡವಿ ಆಂಜನೇಯ ಬಡಾವಣೆಯಲ್ಲಿ ಸೋಮವಾರ ನಡೆದಿದೆ.
ಬಡಾವಣೆಯ ನಿವಾಸಿ ಮಾಲತೇಶ ನಾಗಪ್ಪ ಅರಸೀಕೆರಿ(೪೨) ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಈತ ಹೇರ್ ಕಟಿಂಗ್ ಅಂಗಡಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಅಂಗಡಿಯನ್ನು ಬಾಡಿಗೆ ಲೀಜ್ ಹಾಕಿಕೊಂಡು ಸಾಮಗ್ರಿಗಳನ್ನು ಖರೀದಿಸುವ ಉದ್ದೇಶದಿಂದ ಪತ್ನಿ ಗೀತಾ ಹಾಗೂ ಈತನ ಹೆಸರಿನಲ್ಲಿ ವಿವಿಧ ಮೈಕ್ರೋ ಫೈನಾನ್ಸ್ ಮತ್ತು ಸಂಘ-ಸಂಸ್ಥೆಗಳಲ್ಲಿ ೪ ಲಕ್ಷ ರೂ. ಸಾಲ ಮಾಡಿಕೊಂಡಿದ್ದರು. ಆದರೆ ಸಾಲ ನೀಡಿದ ಮೈಕ್ರೋ ಫೈನಾನ್ಸ್ ಅವರು ಮನೆಗೆ ಪದೇ ಪದೇ ಬಂದು ಸಾಲ ತುಂಬುವಂತೆ ಒತ್ತಡ ಹಾಕುತ್ತಿದ್ದರು. ಮೃತನು ಮನೆಯಲ್ಲಿ ಇಲ್ಲದಿದ್ದರೂ ಆತ ಸಂಜೆವರೆಗೂ ಮನೆಗೆ ಬಂದಾಗ ಹಣ ಕಟ್ಟಿಸಿಕೊಂಡು ಹೋಗುತ್ತಿದ್ದರು ಎಂದು ಪತ್ನಿ ಗೀತಾ ಅರಸೀಕೆರಿ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾರೆ. ಈ ಕುರಿತು ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿದೆ.