ಪ್ರಸಕ್ತ ವರ್ಷ 50 ಹೊಸ ನಮೋ ಭಾರತ್

ಹುಬ್ಬಳ್ಳಿ: ಕಡಿಮೆ ಅಂತರದ ಎರಡು ನಗರಗಳ ನಡುವೆ ಅತ್ಯಂತ ವೇಗವಾಗಿ ಸಂಚರಿಸುವ 50 ಹೊಸ ನಮೋ ಭಾರತ್' ರೈಲುಗಳು ಪ್ರಸಕ್ತ ವರ್ಷ ಹಳಿಗೆ ಇಳಿಯಲಿವೆ. ಈ ಪೈಕಿಬೆಂಗಳೂರು-ಮೈಸೂರು’ ಸಹ ಸೇರಿದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಸೋಮವಾರ ವರ್ಚುವಲ್ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ಪ್ರಕಟಿಸಿದರು. ಇದರೊಂದಿಗೆ ದೇಶದಲ್ಲಿ ನಮೋ ಭಾರತ್' ರೈಲ್ವೆ ಯುಗಕ್ಕೆ ಈ ವರ್ಷ ನಾಂದಿ ಹಾಡಿದಂತಾಗಿದೆ. ಇದುವರೆಗೆ ಅಹಮದಾಬಾದ್ ಮತ್ತು ಭುಜ್ ನಡುವೆ ಮಾತ್ರ ಈ ರೈಲು ಸಂಚರಿಸುತ್ತಿತ್ತು. ರೈಲ್ವೆಗೆ ಈ ವರ್ಷ ದೊರೆಯುತ್ತಿರುವ ಬಜೆಟ್‌ನ ಸಮಗ್ರ ವಿವರಗಳನ್ನು ನೀಡಿ, ಕರ್ನಾಟಕದ ನೈಋತ್ಯ ರೈಲ್ವೆ ವಲಯದ ಯೋಜನೆಗಳನ್ನು ಸಚಿವರು ವಿವರಿಸಿದರು. ನಮೋ ಭಾರತ್ ರೈಲುಗಳು ದೇಶದ ಕಡಿಮೆ ಅಂತರದ ನಗರಗಳ ನಡುವೆ ವೇಗವಾದ ಸಂಪರ್ಕ ಸಾಧನಗಳಾಗುವಂತೆ ರೂಪುಗೊಂಡಿವೆ. ಪ್ರಾಯೋಗಿಕವಾಗಿ ಅಹಮದಾಬಾದ್ ಮತ್ತು ಭುಜ್ ನಡುವೆ ಆರಂಭವಾಗಿದ್ದ ಈ ರೈಲು, ಅತ್ಯಲ್ಪ ಅವಧಿಯಲ್ಲಿ ಬಹುಬೇಡಿಕೆಯ ಸಂಚಾರ ಸಾಧನವಾಗಿ ಹೊರಹೊಮ್ಮಿದೆ.
`೨೦೦ರಿಂದ ೨೫೦ ಕಿಮೀ ಅಂತರದ ನಗರಗಳ ನಡುವೆ ಮುಂದಿನ ದಿನಗಳ ನಡುವೆ ಇವು ಸಂಚರಿಸಲಿವೆ. ಈ ರೈಲುಗಳಲ್ಲಿ ಹವಾ ನಿಯಂತ್ರಣ ಕೋಚ್‌ಗಳ ಜೊತೆಗೆ, ಸಾಮಾನ್ಯ ಕೋಚ್‌ಗಳು ಕೂಡ ಇರಲಿವೆ. ನಮೋ ಭಾರತ್ ರೈಲು ಗಂಟೆಗೆ ೧೪೦ ಕಿಮೀ ವೇಗದಲ್ಲಿ ಓಡುತ್ತದೆ’ ಎಂದು ತಿಳಿಸಿದರು.
ಮೊದಲ ರೈಲು ರಾಜಧಾನಿ ಮತ್ತು ಸಾಂಸ್ಕೃತಿಕ ರಾಜಧಾನಿ ನಡುವೆ ಸಂಚರಿಸಲಿದೆ ಎಂದ ಅವರು, ದಾವಣಗೆರೆ-ಹುಬ್ಬಳ್ಳಿ; ಬೆಳಗಾವಿ-ಕೊಲ್ಹಾಪುರ ಮೊದಲಾದ ನಗರಗಳ ನಡುವೆಯೂ ಇದೇ ವರ್ಷ ನಮೋ ಭಾರತ್ ಶುರುವಾಗುವ ಸೂಚನೆಯನ್ನು ನೀಡಿದರು.
ಇದಲ್ಲದೇ, ದೇಶದಲ್ಲಿ ಈ ವರ್ಷ ೧೦೦ ಅಮೃತ ಭಾರತ ಹಾಗೂ ೨೦೦ ವಂದೇ ಭಾರತ್ ರೈಲುಗಳು ಸಂಚರಿಸಲಿವೆ. ಇವುಗಳ ಲಾಭ ಕೂಡ ಕರ್ನಾಟಕಕ್ಕೆ ದೊರೆಯಲಿದ್ದು, ನೈಋತ್ಯ ವಲಯದ ಪ್ರಧಾನ ವ್ಯವಸ್ಥಾಪಕರು ಹಾಗೂ ವಿಭಾಗೀಯ ನಿಯಂತ್ರಣಾಧಿಕಾರಿಗಳು ಅಂತಿಮ ರೂಪು ರೇಷೆಗಳನ್ನು ಸಿದ್ಧಪಡಿಸುತ್ತಿದ್ದಾರೆ ಎಂದರು.