ಚಿತ್ರ: ನೋಡಿದವರು ಏನಂತಾರೆ
ನಿರ್ದೇಶನ: ಕುಲದೀಪ್ ಕಾರಿಯಪ್ಪ
ನಿರ್ಮಾಣ: ನಾಗೇಶ್ ಗೋಪಾಲ್
ತಾರಾಗಣ: ನವೀನ್ ಶಂಕರ್, ಅಪೂರ್ವ ಭಾರದ್ವಾಜ್, ಸೋನು ಗೌಡ ಇತರರು
ರೇಟಿಂಗ್ಸ್: 3.5
- ಗಣೇಶ್ ರಾಣೆಬೆನ್ನೂರು
ಎಲ್ಲರೂ ಬೆಂಗಳೂರು ಚೆನ್ನ ಎನ್ನುತ್ತಾರೆ. ಹೊರನೋಟಕ್ಕೆ ಕಾಣಸಿಗುವ ಅಂದ-ಚೆಂದ, ಇಲ್ಲಿ ಜೀವಿಸುವವರಿಗೆ ಸಿಗುತ್ತಿದೆಯಾ ಎಂಬ ಪ್ರಶ್ನೆ ಆಗಾಗ ಮೂಡುವಂತೆ ಮಾಡುವುದು ನೋಡಿದವರು ಏನಂತಾರೆ ಚಿತ್ರದ ಒಂದು ಭಾಗ.
ಜೀವನದಲ್ಲಿ ಎಲ್ಲವೂ ಇದೆ… ಆದರೆ ಇನ್ನೇನೋ ಬೇಕು ಎಂದು ತುಡಿಯುವ ಮನ. ಅದರ ಹುಡುಕಾಟದಲ್ಲಿರುವಾಗಲೇ ಕಾಡುವ ಹತ್ತಾರು ಪ್ರಶ್ನೆಗಳು. ಜೀವನ ಸಾಕು ಎಂಬ ಹತಾಶೆ. ಎಲ್ಲವನ್ನೂ ತೊರೆದು ಬುದ್ಧನ ದಾರಿ ಹಿಡಿಯಲು ಹೋಗುವ ಸಿದ್ಧಾರ್ಥನಿಗೆ ಹಾದಿ ಮಧ್ಯೆ ಸಿಗುವ ಕುರಿಗಾಹಿ, ಸಿದ್ಧಾರ್ಥನ ಆಲೋಚನಾ ಲಹರಿಯನ್ನು ಬದಲಾಯಿಸುತ್ತಾನೆ. ಅಲ್ಲಿಂದ ಕಥೆ ಮತ್ತೊಂದು ಮಜಲಿಗೆ ಹೊರಳಿಕೊಳ್ಳುತ್ತದೆ.
ಬಾಲ್ಯದ ನೆನಪು, ಅದನ್ನು ಮರಳಿ ಪಡೆಯಲು ಹಪಹಪಿಸುವ ಮನ… ಆಗ ಅದರ ಹುಡುಕಾಟ ಶುರು… ಈ ಮಧ್ಯೆ ಸಿದ್ಧಾರ್ಥನ ಬಾಳಿನಲ್ಲಿ ಘಟಿಸಿದ ಪ್ರೀತಿ, ಅದರ ವೈಫಲ್ಯ, ಬಳಿಕ ಮಿಂಚಿನ ರೀತಿ ಬಂದು ಹೋಗುವ ಹುಡುಗಿ… ಎಲ್ಲವೂ ಜೀವನದ ಒಂದೊಂದು ದಿಕ್ಕುಗಳನ್ನು ಪರಿಚಯಿಸುತ್ತವೆ.
ಕೊನೆಗೆ ಸಿದ್ಧಾರ್ಥ ಅಂದುಕೊಂಡಂತೆ ಮಾಡುತ್ತಾನ ಎಂಬುದೇ ಸಿನಿಮಾದ ಕುತೂಹಲಕಾರಿ ಅಂಶ.
ನವೀನ್ ಶಂಕರ್ ಪಾತ್ರವನ್ನು ಜೀವಿಸಿದ ಪರಿಗೆ ಮೆಚ್ಚುಗೆ ವ್ಯಕ್ತವಾಗಲೇಬೇಕು. ಅಪೂರ್ವ ಹಾಗೂ ಸೋನು ಸಿಕ್ಕ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡಿದ್ದಾರೆ. ನಿರ್ದೇಶಕ ಕುಲದೀಪ್ ಕಾರ್ಯಪ್ಪ ತಾವು ಅಂದುಕೊಂಡಂತೆ ಸಿನಿಮಾ ಮಾಡಿದ್ದಾರೆ.