ಕಾಡು ಮಳೆಯಲ್ಲೊಂದು ದಿವ್ಯಾನುಭೂತಿ

ಚಿತ್ರ: ಕಾಡು ಮಳೆ
ನಿರ್ದೇಶನ, ನಿರ್ಮಾಣ: ಸಮರ್ಥ ಮಂಜುನಾಥ್
ತಾರಾಗಣ: ಹರ್ಷನ್, ಸಂಗೀತಾ, ಕಾರ್ತಿಕ್ ಭಟ್, ಗಿಲ್ಲಿ ಮಂಜು ಮತ್ತಿತರರು

ರೇಟಿಂಗ್ಸ್: 3.5

  • ಜಿ.ಆರ್.ಬಿ
    ಮಳೆ ಎಂದರೆ ಒಬ್ಬೊಬ್ಬರಿಗೆ ಒಂದೊಂದು ರೀತಿಯ ನೆನಪು, ಅನುಭವ. ಅದೇ ರೀತಿ ಕಾಡು ಎಂದಾಕ್ಷಣ ಅವರವರ ಅನುಭವ, ಅನುಭಾವ ಭಿನ್ನ-ವಿಭಿನ್ನ…

ಸದ್ಯ ‘ಕಾಡು ಮಳೆ’ ವಿಷಯಕ್ಕೆ ಬರುವುದಾದರೆ… ಇದೊಂದು ಸ್ಥಳ. ಹೆಸರಿನಷ್ಟೇ ಅನುಭವ ಸೊಗಸು. ಅದು ಆರಂಭದಲ್ಲಿ ಮಾತ್ರ. ಮುಂದೆಲ್ಲ ವಿಚಿತ್ರ, ವಿಕ್ಷಿಪ್ತ ಘಟನೆಗಳ ಗುಚ್ಛ. ಇದು ಮಾಮೂಲಿ ಧಾಟಿಯ ಸಿನಿಮಾವಲ್ಲ ಎಂಬುದು ಸಿನಿಮಾ ಶುರುವಾದ ಕೆಲವೇ ನಿಮಿಷಗಳಲ್ಲಿ ಅರಿವಾಗುತ್ತದೆ. ಹಾಗೆಯೇ ಇಲ್ಲೇನೋ ಒಂದು ವಿಶೇಷತೆ ಇದೆ ಎಂದೆನಿಸಲು ತುಂಬಾ ಹೊತ್ತು ಕಾಯಬೇಕಿಲ್ಲ. ಅವೆಲ್ಲವನ್ನೂ ಕೆಲವೇ ನಿಮಿಷಗಳಲ್ಲಿ ಮೊಗೆದುಕೊಡುವ ನಿರ್ದೇಶಕ ಸಮರ್ಥ್, ಕೊನೆಯವರೆಗೂ ಒಂದಷ್ಟು ಆತಂಕ, ತಲ್ಲಣ ಸೃಷ್ಟಿಸುವಲ್ಲಿ ಗೆದ್ದಿದ್ದಾರೆ. ಚಿತ್ರಕಥೆಯಲ್ಲಿ ಹಿಡಿತ, ಮೇಕಿಂಗ್‌ನಲ್ಲಿ ಅದ್ಧೂರಿತನ, ತಾಂತ್ರಿಕತೆ ಹೆಚ್ಚು ಒತ್ತು ಕೊಟ್ಟು ಮಾಡಿರುವ ಸಿನಿಮಾ ಇದು ಎಂಬುದಕ್ಕೆ ಕೆಲವು ದೃಶ್ಯಗಳೇ ಸಾಕ್ಷೀಕರಿಸುತ್ತದೆ.
ಇಲ್ಲಿ ಹಾಡು, ಡಾನ್ಸ್‌ಗಳಿಲ್ಲ. ಸಾಹಸವೂ ಇಲ್ಲ. ಆದರೆ ಸಾಹಸಮಯ, ರೋಚಕತೆ ಎನಿಸುವಂಥ ಹಲವಾರು ದೃಶ್ಯಗಳಿವೆ. ನಿಗೂಢತೆ ಕಾಡಿನ ತುಂಬೆಲ್ಲ ಕಾಡುವಷ್ಟು ತುಂಬಿದೆ.

ಹುಡುಗಿಯೊಬ್ಬಳು ಸೇತುವೆಯಿಂದ ನದಿಗೆ ಬೀಳುತ್ತಾಳೆ. ಅಲ್ಲಿಂದ ಆಕೆ ಕಾಡುಮಳೆ ಎಂಬ ಸ್ಥಳಕ್ಕೆ ಹೋಗಿ ಸೇರುತ್ತಾಳೆ. ಅಸಲಿ ಕಥೆ ಅಲ್ಲಿಂದ ಶುರುವಾಗುತ್ತದೆ. ಅಲ್ಲಿ ನಡೆಯುವ ಒಂದಷ್ಟು ಘಟನೆಗಳು, ಆಕೆಗೆ ಉದ್ಭವಿಸುವ ಭ್ರಮೆ ಮತ್ತು ವಾಸ್ತವ ನಡುವಿನ ಹಲವಾರು ಪ್ರಶ್ನೆಗಳು ಸಿನಿಮಾವನ್ನು ನೋಡಿಸಿಕೊಂಡು ಹೋಗುವಂತೆ ಮಾಡುತ್ತದೆ.

ವಿಜ್ಞಾನ ಮತ್ತು ಆಧ್ಯಾತ್ಮದ ಅಮಶಗಳು ಮಿಳಿತಗೊಂಡಿರುವ ಈ ಸಿನಿಮಾ ಬುದ್ಧಿವಂತಿಕೆಗೆ ಸವಾಲೊಡ್ಡುವಂತಿದೆ. ಹಾಗೆಯೇ ಇದು ತಾಳ್ಮೆಯನ್ನು ಬೇಡುವ ಸಿನಿಮಾ. ಅಷ್ಟೇ ಕಾಡುವಂತ ಗುಣವಿರುವ ಸಿನಿಮಾ..! ಸಿನಿಮಾದುದ್ದಕ್ಕೂ ಸಂಗೀತಾ ಗಮನ ಸೆಳೆಯುತ್ತಾರೆ. ಹರ್ಷನ್, ಕಾರ್ತಿಕ್, ಗಿಲ್ಲಿ ಮಂಜು ಪಾತ್ರಕ್ಕೆ ತಕ್ಕಂತೆ ನಟಿಸಿದ್ದಾರೆ. ತಂತ್ರಜ್ಞರ ಕೆಲಸ ಚಿತ್ರಕ್ಕೆ ಪೂರಕವಾಗಿದೆ.