ಸುಪ್ರೀಂ ಕೋರ್ಟ್‌ನ ನಿರ್ದೇಶನ ಜಾರಿಗೆ ತರಲು ಆರೋಗ್ಯ ಇಲಾಖೆ ಆದೇಶ
ಬೆಂಗಳೂರು: ರೋಗಿಯು ಘನತೆಯಿಂದ ಸಾಯುವ ಹಕ್ಕಿಗಾಗಿ ಸುಪ್ರೀಂ ಕೋರ್ಟ್‌ನ ನಿರ್ದೇಶನವನ್ನು ಜಾರಿಗೆ ತರಲು ಐತಿಹಾಸಿಕ ಆದೇಶವನ್ನು ಹೊರಡಿಸಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿದ್ದು, ಚೇತರಿಕೆಯೇ ಕಾಣದೆ ಜೀವನಪೂರ್ತಿ ಸಂಕಷ್ಟ ಅನುಭವಿಸುವ ಸ್ಥಿತಿಯಲ್ಲಿರುವವರಿಗೆ ಈ ಅವಕಾಶ ಕಲ್ಪಿಸಲಾಗಿದೆ. ದಯಾಮರಣಕ್ಕೆ ಅವಕಾಶ ನೀಡುವುದನ್ನು ನಿರ್ಧರಿಸಲು ಇಬ್ಬರು ವೈದ್ಯರನ್ನೊಳಗೊಂಡ ಎರಡು ಮಂಡಳಿಗಳ ಸ್ಥಾಪನೆ ಮಾಡುವ ಬಗ್ಗೆಯೂ ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಇದೀಗ ಮಾರಕ ರೋಗದಿಂದ ಬಳಲುತ್ತಿರುವವರಿಗೆ ಸಾಯುವ ಹಕ್ಕನ್ನು ನೀಡುವ ಮೂಲಕ ಕರ್ನಾಟಕ ಆರೋಗ್ಯ ಇಲಾಖೆ ಸುಪ್ರೀಂ ಕೋರ್ಟ್‌ನ ನಿರ್ದೇಶನ ಜಾರಿ ಮಾಡಿದಂತಾಗಿದೆ. ಗಂಭೀರವಾದ ಮತ್ತು ಮಾರಣಾಂತಿಕ ಖಾಯಿಲೆಯಿಂದ ಬಳಲುತ್ತಿರುವವರ ಕುಟುಂಬಸ್ಥರ ಮನವಿ ಮೇರೆಗೆ ವೈದ್ಯರ ತಂಡ ಕಾರ್ಯ ನಿರ್ವಹಿಸಬೇಕು. ಇದಕ್ಕಾಗಿ ಎರಡು ಪ್ರೈಮರಿ ಹಾಗೂ ಸೆಕೆಂಡರಿ ಎಂಬ ಎರಡು ವೈದ್ಯರ ಬೋರ್ಡ್ಗಳನ್ನು ಸ್ಥಾಪಿಸಲಾಗುತ್ತಿದೆ. ಪ್ರೈಮರಿ ಬೋರ್ಡ್ನಲ್ಲಿ ಮೂವರು ವೈದ್ಯರು ಇರುತ್ತಾರೆ. ಸೆಕೆಂಡರಿ ಬೋರ್ಡ್ನಲ್ಲಿ ಕೂಡ ಮೂವರು ವೈದ್ಯರು ಇರಲಿದ್ದಾರೆ. ಈ ಪೈಕಿ ಒಬ್ಬರು ಸರ್ಕಾರಿ ವೈದ್ಯರು ಇರುತ್ತಾರೆ. ರೋಗಿಯ ಕುಟುಂಬಸ್ಥರು ಮಾಡಿದ ಮನವಿಯನ್ನು ಮೊದಲು ಪ್ರೈಮರಿ ಬೋರ್ಡ್ ಪರಿಶೀಲನೆ ನಡೆಸಿ ವರದಿ ನೀಡುತ್ತದೆ. ಆ ವರದಿಯನ್ನು ಸೆಕೆಂಡರಿ ಬೋರ್ಡ್ ಪರಿಶೀಲನೆ ನಡೆಸುತ್ತದೆ. ಬಳಿಕ ಕೋರ್ಟ್ಗೆ ವರದಿಯ ಪ್ರತಿ ನೀಡಲಾಗುತ್ತದೆ. ಕೋರ್ಟ್ ಅನುಮತಿ ನೀಡಿದ ಬಳಿಕ ರೋಗಿಯ ಲೈಫ್ ಸಪೋರ್ಟ್ ಸಿಸ್ಟಮ್ ಅನ್ನು ವೈದ್ಯರು ತೆಗೆಯಲಾಗುತ್ತದೆ. ಚಿಕಿತ್ಸೆಯ ಸಂದರ್ಭದಲ್ಲಿ ಚೇತರಿಕೆ ಸಾಧ್ಯವಿಲ್ಲದ ಸ್ಥಿತಿಗೆ ತಲುಪಿದರೆ ಆ ಸ್ಥಿತಿಯಲ್ಲಿ ಬದುಕಲು ಇಷ್ಟ ಇಲ್ಲದವರು ತಾವು ಚಿಕಿತ್ಸೆಗೆ ಒಳಪಡುವ ಮೊದಲೇ ಈ ರೀತಿಯ ಉಯಿಲು ಬರೆಯಬಹುದು. ಇಂತಹ ಉಯಿಲು ಇದ್ದರೆ ಅದನ್ನು ಜಾರಿಮಾಡುವುದು ವೈದ್ಯರು ಹಾಗೂ ಬಂಧುಗಳ ಕರ್ತವ್ಯವಾಗುತ್ತದೆ. ರೋಗಿಯ ಕೃತಕ ಉಸಿರಾಟ ಅಥವಾ ಜೀವರಕ್ಷಕ ವೈದ್ಯಕೀಯ ಚಿಕಿತ್ಸೆಗೆ ತಡೆ ನೀಡಲು ಇದರಿಂದ ವೈದ್ಯರಿಗೆ ಅವಕಾಶ ಇರುತ್ತದೆ. ಬದುಕುವುದಿಲ್ಲ ಎಂದು ಗೊತ್ತಿದ್ದೂ ಅನಗತ್ಯವಾದ ದುಬಾರಿ ವೆಚ್ಚದ ಚಿಕಿತ್ಸೆ ನೀಡುವುದನ್ನು ತಪ್ಪಿಸಲು ಇದರಿಂದ ಸಾಧ್ಯವಾಗುತ್ತದೆ ಎಂದು ತಿಳಿಸಿದ್ದಾರೆ. ನಾವು ಅಡ್ವಾನ್ಸ್ ಮೆಡಿಕಲ್ ಡೈರೆಕ್ಟಿವ್ (AMD) ಅಥವಾ ಲಿವಿಂಗ್ ವಿಲ್ ಅನ್ನು ಸಹ ಹೊರತಂದಿದ್ದೇವೆ, ಇದರಲ್ಲಿ ರೋಗಿಯು ಭವಿಷ್ಯದಲ್ಲಿ ತಮ್ಮ ವೈದ್ಯಕೀಯ ಚಿಕಿತ್ಸೆಯ ಬಗ್ಗೆ ತಮ್ಮ ಇಚ್ಛೆಯದಾಖಲಿಸಬಹುದು. ಆರೋಗ್ಯ ಇಲಾಖೆಯ ಈ ನಿರ್ಧಾರದಿಂದ ಅನೇಕ ಕುಟುಂಬಗಳು ಮತ್ತು ವ್ಯಕ್ತಿಗಳಿಗೆ ಹೆಚ್ಚಿನ ಪರಿಹಾರ ಮತ್ತು ಗೌರವ ತರುತ್ತದೆ. ಕರ್ನಾಟಕವು ಪ್ರಗತಿಪರ ರಾಜ್ಯವಾಗಿದೆ ಮತ್ತು ಹೆಚ್ಚು ಮತ್ತು ನ್ಯಾಯಯುತ ಸಮಾಜಕ್ಕಾಗಿ ಉದಾರ ಮತ್ತು ಸಮಾನ ಮೌಲ್ಯಗಳನ್ನು ಎತ್ತಿ ಹಿಡಿಯುವಲ್ಲಿ ನಾವು ಯಾವಾಗಲೂ ಮುಂಚೂಣಿಯಲ್ಲಿದ್ದೇವೆ ಎಂದಿದ್ದಾರೆ.