ಕಾಲ್ತುಳಿತ ಸಂಭವಿಸಿದ್ದು ಎಲ್ಲಿ, ಹೇಗೆ?

0
17

ಪ್ರಯಾಗ್‌ರಾಜ್: ೧೪೪ ವರ್ಷದ ನಂತರ ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ವಿಶ್ವದ ಅತಿ ದೊಡ್ಡ ಧಾರ್ಮಿಕ ಮೇಳ ಮಹಾಕುಂಭದಲ್ಲಿ ಬುಧವಾರ ಬೆಳಗ್ಗೆ ಭೀಕರ ಕಾಲ್ತುಳಿತ ನಡೆದು ೩೦ ಭಕ್ತಾಧಿಗಳು ಮೃತಪಟ್ಟಿದ್ದು ೬೦ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.
ಆದರೆ ಪ್ರಯಾಗ್‌ರಾಜ್‌ನಲ್ಲಿ ನಿಜಕ್ಕೂ ಆಗಿದ್ದೇನು? ಕಾಲ್ತುಳಿತ ಸಹಜ ಜನಸಂದಣಿಯಿಂದ ನಡೆದದ್ದೇ ಅಥವಾ ಬೇರೆಯದ್ದೇ ಕಾರಣ ಇದೆಯಾ? ಉಳಿದೆಲ್ಲ ಘಾಟ್‌ಗಳಲ್ಲಿ ಅತ್ಯಂತ ಶಾಂತ ರೀತಿಯಲ್ಲಿ ಶಾಹಿ ಸ್ನಾನ ನಡೆದರೂ, `ಅಖಾಡ ಮಾರ್ಗ’ ಎಂದು ಕರೆಯಲ್ಪಡುವ ಸ್ಥಳದಲ್ಲೇ ಕಾಲ್ತುಳಿತ ಉಂಟಾಗಿದ್ದೇಕೆ ಎಂಬ ಪ್ರಶ್ನೆಗಳೆದ್ದಿವೆ. ಇದೆಲ್ಲದರ ಮಧ್ಯೆ ರಾಜಕೀಯ ಆರೋಪ-ಪ್ರತ್ಯಾರೋಪಗಳೂ ಮುಂದುವರಿದಿವೆ.

ಎಲ್ಲಿ?: ಯತಿಗಳು, ನಾಗಾ ಸಾಧುಗಳು ಶಾಹಿ ಸ್ನಾನಕ್ಕೆಂದು ಸಂಗಮಕ್ಕೆ ಮೆರವಣಿಗೆಯಲ್ಲಿ ಹೋಗಲು ಬಳಸುವ ‘ಅಖಾಡ ಮಾರ್ಗ’ಕ್ಕೆ ಸಮೀಪವಿರುವ ೯,೯೦೦ ಎಕರೆ ಪ್ರದೇಶದಲ್ಲಿ ಕಾಲ್ತುಳಿದ ಸಂಭವಿಸಿದೆ.

ಯಾವಾಗ, ಏಕೆ?: ಶಾಹಿ ಸ್ನಾನಕ್ಕೆ ಪವಿತ್ರ ದಿನವೆಂದು ಪರಿಗಣಿಸಲಾಗಿರುವ ಮೌನಿ ಅಮಾವಾಸ್ಯೆಯ ಬುಧವಾರ ಮಧ್ಯರಾತ್ರಿ ೧ರಿಂದ ೨ ಗಂಟೆಯ ಮಧ್ಯೆ ಘಟನೆ ಸಂಭವಿಸಿದೆ. ಈ ಸಮಯದಲ್ಲಿ ಸ್ನಾನಕ್ಕೆಂದು ಲಕ್ಷಾಂತರ ಭಕ್ತರು ಡೌಡಾಯಿಸಿದ್ದಕ್ಕೆ ದುರಂತ ಘಟಿಸಿದೆ.

ದುರಂತಕ್ಕೇನು ಕಾರಣ?: ಯತಿಗಳ ಪವಿತ್ರ ಸ್ನಾನದ ಸಮಯದಲ್ಲಿ ಜನಸಂದಣಿಯನ್ನು ನಿರ್ವಹಿಸಲು ಹಾಕಲಾದ ಬ್ಯಾರಿಕೇಡ್‌ಗಳನ್ನು ಹಲವಾರು ಭಕ್ತರು ಜಿಗಿಯಲು ಪ್ರಯತ್ನಿಸಿದಾಗ ಕಾಲ್ತುಳಿತ ಸಂಭವಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವೇಳೆ ಉಸಿರುಗಟ್ಟುವಿಕೆಯಿಂದ ತಳ್ಳಾಟ, ನೂಕಾಟ ಶುರುವಾಗಿ ತಪ್ಪಿಸಿಕೊಳ್ಳುವ ಧಾವಂತದಲ್ಲಿ ಅಲ್ಲೇ ಮಲಗಿದ್ದವರ ಮೇಲೆ ಹತ್ತಿಕೊಂಡಿ ಹೋಗಿದ್ದಾರೆ ಎನ್ನಲಾಗಿದೆ.

ಬುಧವಾರ ತ್ರಿವೇಣಿ ಸಂಗಮದಲ್ಲಿ ಮಿಂದೆದ್ದ ೫.೭ ಕೋಟಿ ಭಕ್ತಾದಿಗಳು
ಮೌನಿ ಅಮಾವಾಸ್ಯೆಯ ಪ್ರಯುಕ್ತ ಬುಧವಾರ ೫ ಕೋಟಿಗೂ ಹೆಚ್ಚು ಜನ ಶಾಹಿ ಸ್ನಾನ ಮಾಡಿದ್ದಾರೆ. ಅಖಾಡ ಮಾರ್ಗ ಹೊರತುಪಡಿಸಿ ಉಳಿದೆಲ್ಲ ಘಾಟ್‌ಗಳಲ್ಲೂ ಲಕ್ಷಾಂತರ ಸಂಖ್ಯೆಯ ಜನ ಯಾವ ಅಡೆತಡೆಯೂ ಇಲ್ಲದೆ ಸ್ನಾನ ಮಾಡಿದ್ದಾರೆ. ಅಖಾಡ್ ಮಾರ್ಗದ ಘಾಟ್‌ನಲ್ಲೂ ಕೆಲವೇ ಗಂಟೆಗಳಲ್ಲಿ ಮತ್ತೆ ಶಾಹಿ ಸ್ನಾನ ಪ್ರಾರಂಭವಾಯಿತು.

Previous articleಮಹಾಕುಂಭಮೇಳದಲ್ಲಿ ಕಾಲ್ತುಳಿತ: ಮೃತರ ಪ್ರಾರ್ಥಿವ ಶರೀರ ಅಂಬ್ಯುಲೆನ್ಸ್ ಮೂಲಕ ಬೆಳಗಾವಿಗೆ
Next articleಹಿಂದೂ ವಿವಾಹ ಪವಿತ್ರವಾದ್ದು ವರ್ಷದಲ್ಲಿ ವಿಚ್ಛೇದನ ಅಸಾಧ್ಯ