ಉಡುಪಿ: ಸೋಸಲೆ ವ್ಯಾಸರಾಜ ಮಠಾಧೀಶ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಮಂಗಳವಾರ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದರು.
ಅವರನ್ನು ಪರ್ಯಾಯ ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಯತಿಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರು ಸ್ವಾಗತಿಸಿ, ದೇವರ ದರ್ಶನ ಮಾಡಿಸಿದರು.
ಬಳಿಕ ಚಂದ್ರಶಾಲೆಯಲ್ಲಿ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಗೌರವಾರ್ಪಣೆ ಮಾಡಲಾಯಿತು.
ಪುತ್ತಿಗೆ ಶ್ರೀಪಾದರು ವಿಶ್ವ ಗೀತಾ ಪರ್ಯಾಯದಲ್ಲಿ ಭಗವದ್ಗೀತೆಯ ವ್ಯಾಪಕ ಪ್ರಚಾರ ಮಾಡುತ್ತಿರುವ ಬಗ್ಗೆ ಶ್ರೀ ವಿದ್ಯಾಶ್ರೀಶತೀರ್ಥ ಶ್ರೀಪಾದರು ಮುಕ್ತಕಂಠದಿಂದ ಶ್ಲಾಘಿಸಿದರು.
ಮತ್ತೊಮ್ಮೆ ಸಂಸ್ಥಾನ ಪೂಜೆ ಹಾಗೂ ಉಪನ್ಯಾಸ ನಡೆಸಲು ಆಗಮಿಸುವಂತೆ ಪರ್ಯಾಯ ಶ್ರೀಪಾದರು ಆಹ್ವಾನ ನೀಡಿದರು. ಪರ್ಯಾಯ ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ವಿದೇಶ ವ್ಯವಹಾರಗಳ ಕಾರ್ಯದರ್ಶಿ ಪ್ರಸನ್ನಾಚಾರ್ಯ ಮೊದಲಾದವರಿದ್ದರು.