ಎಲ್ಲ ವಯೋಮಾನದವರಿಗೂ ಕಾಡುವ ಕೆಮ್ಮು!

೨೦೧೯ರಲ್ಲಿ ಯಾರಾದರೂ ಕೆಮ್ಮಿದರೆ ಅಥವಾ ಮೂರು ವಾರಗಳು ಅದಕ್ಕಿಂತ ಹೆಚ್ಚು ಕಾಲ ಕೆಮ್ಮು ಇದ್ದರೆ ಅವರು ಕೋವಿಡ್ ಎಂಬ ಸಾಂಕ್ರಾಮಿಕ ರೋಗಕ್ಕೆ ತುತ್ತಾಗಿದ್ದಾರೆಯೇ ಎಂದು ಜನರ ಮನಸ್ಸಿನಲ್ಲಿ ಭಯ ಉಂಟಾಗಿತ್ತು! ಇದರಿಂದ ಜನರು ಸಾರ್ವಜನಿಕ ಸ್ಥಳದಲ್ಲಿ ಕೆಮ್ಮು ಬಂದರೆ ತಡೆದಿಟ್ಟುಕೊಳ್ಳಲು ಪ್ರಯತ್ನಿಸುತ್ತಿದ್ದರು. ಎಲ್ಲಿ ನಮಗೆ ಕೆಮ್ಮು ಬಂದರೆ ನಮಗೆ ಕೋವಿಡ್ ಇದೆ ಎಂದು ಆಸ್ಪತ್ರೆಗೆ ತಳ್ಳುತ್ತಾರೆ ಎಂಬ ಭಯಕ್ಕೆ.
ಕೆಮ್ಮನ್ನು ತಡೆದಷ್ಟು ಕೆಮ್ಮು ಉಲ್ಬಣಗೊಳ್ಳುತ್ತದೆ. ಇದು ಕೆಲವು ತರಹ ಕಾಯಿಲೆಗಳಿಗೆ ದಾರಿ ಮಾಡಿಕೊಡುತ್ತದೆ. ಕೆಮ್ಮು ಅನೇಕ ಕಾರಣಗಳಿಂದ ಉಂಟಾಗಬಹುದು. ಹುಟ್ಟಿದ ಮಕ್ಕಳಲ್ಲಿ ಹಾಗೂ ವೃದ್ಧರಿಗೆ ಸಾಮಾನ್ಯವಾಗಿ ತುಂಬಾ ಕಾಡುವ ಕಿರಿಕಿರಿ ಕೆಮ್ಮು. ಪೋಷಕರು ತಮ್ಮ ಮಕ್ಕಳನ್ನು ಆರೋಗ್ಯ ರಕ್ಷಕರ ಬಳಿಗೆ ಕರೆತರಲು ಕೆಮ್ಮು ಸಾಮಾನ್ಯ ಕಾರಣಗಳಲ್ಲಿ ಒಂದಾಗಿದೆ. ಸಾಮಾನ್ಯವಾಗಿ ಗಂಟಲು ಮತ್ತು ವಾಯು ಮಾರ್ಗಗಳನ್ನು ಸೂಚಿಸಲು ಕೆಮ್ಮು ಒಂದು ಪ್ರಮುಖ ಮಾರ್ಗವಾಗಿದೆ. ಕೆಮ್ಮು ನಾಲ್ಕು ವಾರಗಳು ಅಥವಾ ಅದಕ್ಕಿಂತ ಹೆಚ್ಚು ವಾರ ಇರುತ್ತದೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ಹೆಚ್ಚು ಕೆಮ್ಮುವುದು ರೋಗ ಅಥವಾ ಅಸ್ವಸ್ಥತೆಯನ್ನು ತೋರ್ಪಡಿಸುತ್ತದೆ ಎಂದರ್ಥ. ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯದ್ದಿದ್ದಲ್ಲಿ ಕ್ಷಯದಂತಹ ರೋಗಕ್ಕೆ ತುತ್ತಾಗುವ ಪ್ರಮೇಯ ಬರಬಹುದು.
ಭಯಂಕರವಾಗಿ ಧ್ವನಿಸಬಹುದಾದ ಕೆಮ್ಮು, ಸ್ವರವಿಲ್ಲದ ಮಾತನಾಡಲಾಗದೆ ಬರುವ ಕೆಮ್ಮು, ಊಟ ಮಾಡುತ್ತಿರುವ ಸಮಯದಲ್ಲಿ ಬರುವ ಕೆಮ್ಮು, ನಿದ್ದೆ ಮಾಡುವ ಸಮಯದಲ್ಲಿ ಹೀಗೆ ವಿಧವಿಧವಾದ ಕೆಮ್ಮು ಜನರಿಗೆ ಕಾಡುತ್ತದೆ. ಒಣ ಕೆಮ್ಮು ಹೆಚ್ಚು ಲೋಳೆಯ ಉತ್ಪತ್ತಿಯೊಂದಿಗೆ ಮತ್ತು ಶೀತ ಜ್ವರ ಅಥವಾ ವೈರಲ್ ಸೋಂಕಿನೊಂದಿಗೆ ಇರುತ್ತದೆ. ನೋಯುತ್ತಿರುವ ಗಂಟಲು ತಲೆನೋವು ಅಥವಾ ಜ್ವರವಿಲ್ಲದೆ ಶ್ರವಿಸುವ ಮೂಗಿನ ಕೆಮ್ಮು. ಎದೆಯಿಂದ ಬರುವ ಅರ್ಧ ಕೆಮ್ಮು ಮತ್ತು ಸಾಮಾನ್ಯವಾಗಿ ಬಿಳಿ ಹಳದಿ ಅಥವಾ ಹಸಿರು ಬಣ್ಣದ ಲೋಳೆ ಅಥವಾ ಹಸಿರು ಬಣ್ಣದ ಲೋಳೆ ಅಥವಾ ಕಫವನ್ನು ಉಂಟುಮಾಡುತ್ತದೆ. ಇದು ಸೋಂಕಿನ ಚಿಹ್ನೆ ಆಗಿರಬಹುದು. ದೀರ್ಘಕಾಲದ ಅರ್ಧ ಕೆಮ್ಮು ಗಂಭೀರವಾದ ಎದೆ ಸೋಂಕಿಗೆ ಕಾರಣವಾಗಬಹುದು. ಮಕ್ಕಳಲ್ಲಿ ಈ ರೀತಿ ಕೆಮ್ಮು ಇದ್ದರೆ ಅಥವಾ ಉಸಿರಾಡುವಾಗ ಉಬ್ಬಸ್ಸು ಅಥವಾ ಸಿಳ್ಳೆ ಶಬ್ದವನ್ನು ಮಾಡಿದರೆ ಇದು ಹೆಚ್ಚಾಗಿ ಶ್ವಾಸಕೋಶದ ಕೆಳಗಿನ ವಾಯು ಮಾರ್ಗಗಳಲ್ಲಿನ ಸಮಸ್ಯೆಗಳಿಂದ ಉಂಟಾಗುತ್ತದೆ. ಇದರಿಂದ ಸೈನಸ್, ಅಸ್ತಮಾ, ಜ್ವರ, ವೈರಲ್ ಸೋಂಕುಗಳು, ನ್ಯೂಮೋನಿಯಾ ಹಾಗೂ ಕೆಲವೊಮ್ಮೆ ಶ್ವಾಸಕೋಶದ ಕ್ಯಾನ್ಸರ್ ಆಗುವ ಸಾಧ್ಯತೆ ಇದೆ. ಹಾಗಾಗಿ ಕೆಮ್ಮಿನ ಸೂಚನೆ ಪ್ರಾರಂಭದ ಹಂತ ಇರುವಾಗಲೇ ಚಿಕಿತ್ಸೆ ಪಡೆದುಕೊಳ್ಳುವುದು ಸೂಕ್ತ. ಸಾಧಾರಣವಾಗಿ ಕೆಮ್ಮಿಗೆ ಮನೆಯಲ್ಲಿಯೇ ಮನೆ ಮದ್ದು ಮಾಡಿಕೊಳ್ಳಬಹುದು.
ಸಾಂಬ್ರಾಣಿ ಎಲೆಯನ್ನು ಬಿಸಿ ಮಾಡಿ ಜಜ್ಜಿ ಅದರ ರಸವನ್ನು ಕುಡಿದರೆ ಕೆಮ್ಮು ವಾಸಿಯಾಗುತ್ತದೆ. ಶೀತ ಬಂದು ಮೂಗು ಕಟ್ಟುತ್ತಿದ್ದರೆ ಸಾಂಬ್ರಾಣಿ ಎಲೆಯನ್ನು ನೀರಿನಲ್ಲಿ ಬಿಸಿ ಮಾಡಿ ಆ ನೀರಿನ ಆವಿಯನ್ನು ಸೇವಿಸಿದಲ್ಲಿ ಶೀತ ಶಮನವಾಗುತ್ತದೆ. ಜೋರಾಗಿ ಆಗಾಗ ಕೆಮ್ಮು ಬರುತ್ತಿದ್ದಲ್ಲಿ ಈರುಳ್ಳಿಯಲ್ಲಿ ಬೆಲ್ಲ ಸೇರಿಸಿ ತಿಂದರೆ ಕಡಿಮೆಯಾಗುತ್ತದೆ. ಜೊತೆಗೆ ಈರುಳ್ಳಿಯನ್ನು ಬೆಲ್ಲದ ಜೊತೆ ಕಷಾಯ ಮಾಡಿ ಕುಡಿದರೂ ಕೆಮ್ಮು ವಾಸಿಯಾಗುತ್ತದೆ. ಕೆಮ್ಮು, ದಮ್ಮು ಇರುವಾಗ ಶುಂಠಿ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿದರೆ ಕಡಿಮೆಯಾಗುತ್ತದೆ. ಬಿಸಿ ಹಾಲಿನಲ್ಲಿ ಒಂದು ಚಮಚ ಅರಿಶಿನ ಪುಡಿ ಹಾಗೂ ಕಲ್ಲು ಸಕ್ಕರೆ ಸೇರಿಸಿ ಕುಡಿಯುವುದು ಉತ್ತಮ. ಕೆಮ್ಮಿನಿಂದ ಗಂಟಲು ನೋವು ಬಂದರೆ ರಕ್ತಚಂದನವನ್ನು ನೀರಿನಲ್ಲಿ ತೇಯ್ದು ಆ ಮಿಶ್ರಣವನ್ನು ಹಾಲಿನೊಂದಿಗೆ ಬೆರೆಸಿ ಅದಕ್ಕೆ ಬೆಲ್ಲವನ್ನು ಹಾಕಿ ಸೇವಿಸುವುದರಿಂದ ಗಂಟಲು ನೋವು ನಿವಾರಣೆ ಆಗುತ್ತದೆ. ಬಿಲ್ಲೆದೆಳೆ ತುಳಸಿ ದೊಡ್ಡ ಪಾತ್ರೆಯಲ್ಲಿ ಬಿಸಿ ಮಾಡಿ ರಸ ತೆಗೆದು ಜೇನು ಸೇರಿಸಿ ಮೂರು ದಿನ ಕುಡಿದರೆ ಕೆಮ್ಮು ಸಂಪೂರ್ಣವಾಗಿ ಕಡಿಮೆಯಾಗುತ್ತದೆ. ಅಸ್ತಮಾ ಅಥವಾ ದಮ್ಮು ಇರುವವರು ಆಡುಸೋಗೆ ಸೊಪ್ಪಿನ ರಸವನ್ನು ಜೇನಿನೊಂದಿಗೆ ಬೆರೆಸಿ ಸೇವಿಸಿದರೆ ಉತ್ತಮ.
ಸಾರ್ವಜನಿಕ ಸ್ಥಳಗಳಲ್ಲಿ ಕೆಮ್ಮು ಬಂದರೆ ಬಾಯಿಗೆ ಬಟ್ಟೆಯನ್ನು ಅಡ್ಡಗಟ್ಟಿ ಕೆಮ್ಮಬೇಕು, ತನ್ನ ಕೆಮ್ಮಿನ ಸೋಂಕು ಬೇರೆಯವರಿಗೆ ತಾಗದಂತೆ ಆಗಾಗ್ಗೆ ಶುಭ್ರ ಬಿಸಿ ನೀರಿನಲ್ಲಿ ಕೈ ಮತ್ತು ಬಾಯಿಯನ್ನು ತೊಳೆಯುತ್ತ ಇದ್ದಲ್ಲಿ ಒಳಿತು ಜೊತೆಗೆ ಆಗಾಗ ಕೆಮ್ಮು ಬರುವವರು ಎಲ್ಲಿಯೇ ಹೋದರೂ ತಮ್ಮ ಜೊತೆಯಲ್ಲಿ ಲವಂಗ, ಏಲಕ್ಕಿ ಹಾಗೂ ಬಿಸಿ ನೀರನ್ನು ತೆಗೆದುಕೊಂಡು ಹೋಗಬೇಕು, ಕೆಮ್ಮು ಬರುವ ಮುನ್ಸೂಚನೆ ಬಂದರೆ ತಕ್ಷಣ ಲವಂಗವನ್ನು ಬಾಯಲ್ಲಿಟ್ಟುಕೊಳ್ಳಿ ಅಥವಾ ಬಿಸಿ ನೀರನ್ನು ಕುಡಿಯಿರಿ. ಇನ್ನು ಮನೆಯ ಹಿತ್ತಲಿನ ಸುತ್ತಲಿನ ಸಸ್ಯದ ಎಲೆ ಕಾಂಡ ಬೇರುಗಳಲ್ಲಿ ಇರುವ ಶಕ್ತಿ ಅರಿತುಕೊಳ್ಳುವುದು ಸೂಕ್ತ. ಇದು ದೇಹದ ಉತ್ತಮ ಆರೋಗ್ಯಕ್ಕೆ ಒಳಿತು. ಭೂಮಿಯ ಪ್ರತಿ ಸಸ್ಯದಲ್ಲೂ ಜೀವ ಸಂಜೀವಿನಿಯಿದೆ ಎಂದು ನಮ್ಮ ಪೂರ್ವಜರ ನಾಣ್ಣುಡಿ. ಹಾಗಾಗಿ ಯಾವುದೇ ಕಾಯಿಲೆ ಬಂದರೂ ಸೂಕ್ತ ಸಮಯದಲ್ಲಿ ಸೂಕ್ತ ಚಿಕಿತ್ಸೆ ತೆಗೆದುಕೊಳ್ಳುವುದರಿಂದ ಮುಂಬರುವ ಸೋಂಕುಗಳಿಗೆ ವಿರಾಮ ಹಾಕಬಹುದು.

ಕೆಮ್ಮಿನ ಶಮನಕ್ಕೆ ಹೀಗೆ ಮಾಡಿ

ಈರುಳ್ಳಿಯಲ್ಲಿ ಬೆಲ್ಲ ಸೇರಿಸಿ ತಿನ್ನಿ
ಬಿಸಿ ಹಾಲಿನ ಜೊತೆ ಒಂದು ಚಮಚ ಅರಿಶಿನ ಪುಡಿ, ಕಲ್ಲು ಸಕ್ಕರೆ ಸೇರಿಸಿ ಕುಡಿಯಿರಿ
ಶುಂಠಿ ಪುಡಿಯನ್ನು ಜೇನುತುಪ್ಪದೊಂದಿಗೆ ಸೇವಿಸಿ
ಸಾಂಬ್ರಾಣಿ ಎಲೆಯನ್ನು ಬಿಸಿ ಮಾಡಿ ಜಜ್ಜಿ ಅದರ ರಸವನ್ನು ಕುಡಿಯಿರಿ