ರಾಜ್ಯ ಸರ್ಕಾರ ಕೆಸಿಇಟಿ, ಜೆಇಇ, ನೀಟ್ ಪರೀಕ್ಷೆಗೆ ಸರ್ಕಾರಿ ಕಾಲೇಜು ವಿದ್ಯಾರ್ಥಿಗಳು ಹಾಜರಾಗಲು ಉಚಿತ ತರಬೇತಿಯನ್ನು ಏರ್ಪಡಿಸಿದ್ದರೂ ವಿದ್ಯಾರ್ಥಿಗಳು ಹಾಜರಾಗುತ್ತಿಲ್ಲ. ಅಂಗೈ ಹುಣ್ಣಿಗೆ ಕನ್ನಡಿ ಬೇಕಿಲ್ಲ. ಶಿಕ್ಷಣ ಮಟ್ಟ ಉತ್ತಮವಾಗಿಲ್ಲ ಎಂದ ಮೇಲೆ ವಿದ್ಯಾರ್ಥಿಗಳು ತಮ್ಮ ಸಮಯವನ್ನು ಹಾಳು ಮಾಡಿಕೊಳ್ಳಲು ಬಯಸುವುದಿಲ್ಲ. ತರಬೇತಿಗೆ ಆಯ್ಕೆಯಾಗಬೇಕು ಎಂದರೆ ಪ್ರವೇಶ ಪರೀಕ್ಷೆ ತೆಗೆದುಕೊಳ್ಳಬೇಕು. ೨೬ ಸಾವಿರ ಜನ ಆಯ್ಕೆಯಾಗಿದ್ದರು. ಅದರಲ್ಲಿ ೧೮ ಸಾವಿರ ಜನ ಮಾತ್ರ ತರಬೇತಿಗೆ ಹಾಜರಾದರು. ಕಾಲೇಜು ಆರಂಭಕ್ಕೆ ಮುನ್ನ ೧ ಗಂಟೆ ಮೊದಲು ವಿಶೇಷ ತರಬೇತಿ ತರಗತಿಗಳು ನಡೆಯುತ್ತವೆ. ರಾಜ್ಯದಲ್ಲಿ ೭೪ ಸರ್ಕಾರಿ ಕಾಲೇಜುಗಳಿದ್ದು ಎಲ್ಲ ಕಡೆ ತರಬೇತಿ ನೀಡಲಾಗುತ್ತಿದೆ.
ಸರ್ಕಾರಿ ಕಾಲೇಜುಗಳ ಶಿಕ್ಷಣ ಮಟ್ಟ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಸಾಲದು ಎಂಬ ಭಾವನೆ ಪೋಷಕರಲ್ಲಿ ಬೆಳೆದಿದೆ. ಇದಕ್ಕಾಗಿ ಅವರು ಸಾಲಸೋಲ ಮಾಡಿ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಲು ಬಯಸುತ್ತಾರೆ. ಖಾಸಗಿ ಸಂಸ್ಥೆಗಳಲ್ಲಿ ಕುದುರೆಯನ್ನು ರೇಸ್‌ಗೆ ತಯಾರು ಮಾಡುವ ಹಾಗೆ ಮಕ್ಕಳಿಗೆ ತರಬೇತಿ ನೀಡುತ್ತಾರೆ. ಪ್ರಶ್ನಪತ್ರಿಕೆ ಕೈಗೆ ಸಿಗುತ್ತಿದ್ದಂತೆ ಮಕ್ಕಳು ಶರವೇಗದಲ್ಲಿ ಉತ್ತರ ಬರೆಯಲು ಆರಂಭಿಸುತ್ತಾರೆ. ಇದಕ್ಕೆ ತರಬೇತಿ ಅಗತ್ಯ. ರಾಷ್ಟ್ರೀಯ ಮಟ್ಟದಲ್ಲಿ ಪ್ರಶ್ನಪತ್ರಿಕೆಗಳನ್ನು ಸಿದ್ಧಪಡಿಸುವಾಗ ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮಗಳನ್ನು ಅನುಸರಿಸುವುದು ಸಾಮಾನ್ಯ. ಇದರಿಂದ ರಾಜ್ಯ ಪಠ್ಯಕ್ರಮದಲ್ಲಿ ಓದಿದರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ತೆಗೆದುಕೊಳ್ಳುವುದು ಕಷ್ಟವಾಗುತ್ತದೆ. ಈ ದೃಷ್ಟಿಯಿಂದ ಅಗತ್ಯ. ಆದರೆ ಪಠ್ಯಕ್ರಮದ ಶಿಕ್ಷಣ ಮಟ್ಟವೇ ಕಡಿಮೆ ಇದ್ದಾಗ ವಿದ್ಯಾರ್ಥಿಗಳಿಂದ ಹೆಚ್ಚಿನ ಸಾಧನೆ ಅಪೇಕ್ಷಿಸುವುದು ಸರಿಯಲ್ಲ. ೭ನೇ ತರಗತಿಯಲ್ಲಿ ಕೇಂದ್ರೀಯ ಪಠ್ಯಕ್ರಮದಲ್ಲಿ ಕಲಿಯುವ ವಿಷಯ ರಾಜ್ಯ ಪಠ್ಯಕ್ರಮದಲ್ಲಿ ಎಸ್‌ಎಸ್‌ಎಲ್‌ಸಿ ಬಂದರೆ ವಿದ್ಯಾರ್ಥಿಯ ಜ್ಞಾನ ಮಟ್ಟ ಉತ್ತಮಗೊಳ್ಳುವುದು ಕಷ್ಟ. ಕೆಲವು ಖಾಸಗಿ ಶಿಕ್ಷಣ ಸಂಸ್ಥೆಗಳು ದೆಹಲಿಯ ಪಠ್ಯಕ್ರಮಗಳನ್ನು ಅನುಸರಿಸುತ್ತಿವೆ. ಇದರಿಂದ ಖಾಸಗಿ ಸಂಸ್ಥೆಗಳಲ್ಲಿ ಓದಿದ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸುವುದು ಕಷ್ಟವಾಗುವುದಿಲ್ಲ. ಪ್ರಾಥಮಿಕ ಹಂತದಲ್ಲೇ ಶಿಕ್ಷಣ ಮಟ್ಟದಲ್ಲಿ ಅಂತರ ಇರುವಾಗ ರಾಜ್ಯ ಪಠ್ಯಕ್ರಮದ ವಿದ್ಯಾರ್ಥಿ ಇತರರೊಂದಿಗೆ ಸ್ಪರ್ಧಿಸುವುದು ಕಷ್ಟ. ಇದನ್ನು ಸರಿಪಡಿಸಲು ಸರ್ಕಾರದ ಮಟ್ಟದಲ್ಲಿ ಯಾವುದೇ ರೀತಿಯ ಪ್ರಯತ್ನ ನಡೆಯುತ್ತಿಲ್ಲ. ಹಳ್ಳಿಯಲ್ಲಿ ಹುಟ್ಟಿದ ಬಾಲಕ ಮತ್ತು ನಗರದಲ್ಲಿ ಹುಟ್ಟಿದ ಬಾಲಕ ಒಂದೇ ರೀತಿ ಶಿಕ್ಷಣ ಪಡೆದರೂ ಶಿಕ್ಷಣ ಮಟ್ಟ ಬದಲಾಗಿ ಹಳ್ಳಿಯ ಬಾಲಕ ಉಳಿದವರೊಂದಿಗೆ ರಾಷ್ಟ್ರೀಯ ಮಟ್ಟದಲ್ಲಿ ಪೈಪೋಟಿ ಎದುರಿಸುವುದು ಕಷ್ಟ. ಇದರ ಬಗ್ಗೆ ಹಲವು ಬಾರಿ ಚರ್ಚೆ ನಡೆದಿದೆ. ಪರಿಣಾಮ ಶೂನ್ಯ. ಇಂದಿನ ಇಂಟರ್‌ನೆಟ್ ಕಾಲದಲ್ಲಿ ಶಿಕ್ಷಕರಿಗೆ ಉತ್ತಮ ತರಬೇತಿ ನೀಡಿದರೆ ಗ್ರಾಮೀಣ ಭಾಗದಿಂದಲೂ ಉತ್ತಮ ವಿದ್ಯಾರ್ಥಿಗಳನ್ನು ಕಾಣಬಹುದು. ಸರ್ಕಾರಿ ಶಿಕ್ಷಣ ಸಂಸ್ಥೆಗಳ ಶಿಕ್ಷಣ ಮಟ್ಟ ಉತ್ತಮಪಡಿಸಲು ಹಲವು ಪ್ರಯೋಗಗಳು ನಡೆದಿದ್ದರೂ ಫಲಕಾರಿಯಾಗಿಲ್ಲ. ಈಗ ವಿಶೇಷ ತರಬೇತಿಗೆ ಸರ್ಕಾರ ೭ ಕೋಟಿ ರೂ. ವೆಚ್ಚ ಮಾಡಿದೆ. ಆದರೂ ಪ್ರಯೋಜನವಾಗಿಲ್ಲ. ಹಿಂದೆ ಸರ್ಕಾರಿ ಶಾಲೆ – ಕಾಲೇಜುಗಳಲ್ಲಿ ವಿದ್ವತ್ತು ಇರುವ ಶಿಕ್ಷಕರಿದ್ದರು. ಅವರು ತಮ್ಮದೇ ಆದ ಗ್ರಂಥಗಳನ್ನು ರಚಿಸುವ ಸಾಮರ್ಥ್ಯ ಪಡೆದಿದ್ದರು. ಈಗ ಸರ್ಕಾರಿ ಕೆಲಸಕ್ಕೆ ವಿದ್ವತ್ತು ಇರುವ ಶಿಕ್ಷಕರು ಬರುತ್ತಿಲ್ಲ. ಖಾಸಗಿ ಶಿಕ್ಷಣ ಸಂಸ್ಥೆಗಳು ಇಂಥವರ ಸೇವೆಯನ್ನು ಬಳಸಿಕೊಳ್ಳುತ್ತಿವೆ. ಪೋಷಕರು ಸಾಲಸೋಲ ಮಾಡಿ ತಮ್ಮ ಮಕ್ಕಳಿಗೆ ಉತ್ತಮ ತರಬೇತಿ ಕೊಡಿಸಿ ಎಂಜಿನಿಯರಿಂಗ್ ಮತ್ತು ಮೆಡಿಕಲ್ ಕಾಲೇಜುಗಳಲ್ಲಿ ಸೀಟು ಪಡೆಯಲು ಹಂಬಲಿಸುತ್ತಾರೆ. ಹೀಗಾಗಿ ಸರ್ಕಾರಿ ತರಬೇತಿಗೆ ಬೇಡಿಕೆ ಇಳಿಮುಖಗೊಳ್ಳುತ್ತಿದೆ. ಸರ್ಕಾರಿ ಶಾಲೆ ಮತ್ತು ಕಾಲೇಜುಗಳಲ್ಲಿ ಕೆಲಸ ಮಾಡುವ ಶಿಕ್ಷಕರಿಗೆ ಸಂಬಳ ಮತ್ತಿತರ ಭತ್ಯೆ ಆಕರ್ಷಕವಾಗಿಯೇ ಇದೆ. ಆದರೆ ಶೈಕ್ಷಣಿಕ ವಾತಾವರಣ ಕಂಡು ಬರುತ್ತಿಲ್ಲ. ಪ್ರತಿ ವರ್ಷ ಶಿಕ್ಷಕರ ಜ್ಞಾನ ಮಟ್ಟ ಅಳೆಯುವ ಕೆಲಸ ನಡೆಯುತ್ತಿಲ್ಲ. ಕೆಲಸಕ್ಕೆ ಸೇರಿದಾಗ ಕಲಿತ ವಿಷಯವನ್ನು ಅಭಿವೃದ್ಧಿಪಡಿಸಿಕೊಳ್ಳಲು ಸರ್ಕಾರಿ ಶಿಕ್ಷಕರು ಪ್ರಯತ್ನಿಸುವುದೇ ಇಲ್ಲ. ಸರ್ಕಾರ ಕೂಡ ಒತ್ತಾಯಿಸುವುದಿಲ್ಲ. ಬೇಸಿಗೆ ರಜೆಯಲ್ಲಿ ಶಿಕ್ಷಕರಿಗೆ ಹೆಚ್ಚಿನ ತರಬೇತಿ ನಡೆಯಬೇಕಿತ್ತು. ಈಗ ಇದು ಕಣ್ಮರೆಯಾಗಿದೆ. ಶಿಕ್ಷಣ ಪದ್ಧತಿ ಕೂಡ ಮಹತ್ತರ ಬದಲಾವಣೆ ಪಡೆದುಕೊಂಡಿದೆ. ಸರ್ಕಾರಿ- ಖಾಸಗಿ ಶಾಲೆ-ಕಾಲೇಜುಗಳಲ್ಲಿ ಬೋಧನಾ ಕ್ರಮದಲ್ಲಿ ಅಜಗಜಾಂತರ ವ್ಯತ್ಯಾಸ ಕಂಡು ಬಂದಿದೆ. ಶಿಕ್ಷಣ ತಜ್ಞರು ಶಿಕ್ಷಣ ಮಟ್ಟವನ್ನು ಪರಿಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸುವಂತಿರಬೇಕು. ಶಿಕ್ಷಕರ ಬೋಧನಾ ಮಟ್ಟವನ್ನು ಪರಿಶೀಲಿಸುವ ಕೆಲಸ ಆಗಾಗ್ಗೆ ನಡೆಯಬೇಕು. ಪ್ರತಿ ವಿಷಯಕ್ಕೂ ಒಬ್ಬರು ಇನ್‌ಸ್ಪೆಕ್ಟರ್ ಇರುತ್ತಿದ್ದರು. ಅವರ ವರದಿಯ ಮೇಲೆ ಶಿಕ್ಷಕರ ಭವಿಷ್ಯ ಇರುತ್ತಿತ್ತು. ಈಗ ಯಾವುದೇ ಮೌಲ್ಯಮಾಪನ ವ್ಯವಸ್ಥೆ ಇಲ್ಲ.