ರೇಖಾತ್ಮಕ ಚಿಂತನೆ ಭವಿಷ್ಯವನ್ನು ಸಾಕಾರಗೊಳಿಸದು

0
25

ಎಲ್ಲಿವರೆಗೆ ಭವಿಷ್ಯವು ನಮ್ಮ ಯಾವುದೇ ಕಲ್ಪನೆಗೆ ಎಟುಕದೆ ಅನಿರೀಕ್ಷಿತವಾಗಿ ಉಳಿಯುತ್ತದೆಯೋ ಅಲ್ಲಿವರೆಗೆ ಪ್ರತಿ ನಿರ್ಧಾರವು ಕೆಲವು ಮಟ್ಟದ ಅಪಾಯವನ್ನು ಒಳಗೊಂಡಿರುತ್ತದೆ. ಇದು ಸಾರ್ವತ್ರಿಕವಾಗಿ ಅಂಗೀಕರಿಸಲ್ಪಟ್ಟ ವಿಚಾರ. ಕೆಲವೊಂದು ಆಹಾರಗಳು ಹೃದಯಾಘಾತ ಮತ್ತು ಕ್ಯಾನ್ಸರ್‌ನ ಅಪಾಯವನ್ನು ಉಂಟುಮಾಡುತ್ತವೆ ಎಂಬುದು ನಾವು ಆಗಾಗ ಕೇಳಲ್ಪಡುತ್ತಿರುವ ಎಚ್ಚರಿಕೆ. ತಾರ್ಕಿಕವಾಗಿ ಇದರರ್ಥ: ಸಂಭವಿಸಬಹುದಾದ ಅಪಾಯವನ್ನು ಪ್ರಮಾಣೀಕರಿಸುವುದು ಮತ್ತು ಇಂತಹ ಆಹಾರಗಳ ಸೇವನೆಯ ಪ್ರಮಾಣವನ್ನು ಕಡಿಮೆಗೊಳಿಸುವುದು. ಆದರೆ ಜೀವನವನ್ನು ಪ್ರಮಾಣೀಕರಿಸಲು ಸಾಧ್ಯವಿಲ್ಲ.
ಅಪಾಯವು ಯಾಂತ್ರಿಕವಾಗಿದೆ. ಅಂದರೆ, ಇದರ ಹಿಂದೆ ಯಾವುದೇ ಬುದ್ಧಿವಂತಿಕೆಯಿಲ್ಲ ಆದರೆ ನಿರ್ದಿಷ್ಟ ಅಂಶಗಳು ಮಾತ್ರವೇ ನಿರ್ದಿಷ್ಟ ಫಲಿತಾಂಶಕ್ಕೆ ಕಾರಣವಾಗುತ್ತವೆ. ಜೀವನದ ಸುಪ್ತ ಅಥವಾ ರಹಸ್ಯ ಆಯಾಮದಲ್ಲಿ ಬ್ರಹ್ಮಾಂಡದ ಅನಂತ ಬುದ್ಧಿವಂತಿಕೆ' ಎಂಬುದೊಂದಿದೆ ಎಂದು ತಿಳಿದುಕೊಳ್ಳುವ ಮೂಲಕ ಊಹನೆಯ ಅನಿರೀಕ್ಷಿತ ಅಪಾಯಗಳನ್ನು ಮೀರಿ ಹೋಗಬಹುದು. ನಿಮಗೆ ಅರಿವಾಗಿರುವ ಈ 'ಅನಂತ ಬುದ್ಧಿವಂತಿಕೆ'ಯ ಮಟ್ಟದಲ್ಲಿ ನಿಮ್ಮ ಆಯ್ಕೆಗಳು ಯಾವಾಗಲೂ ಬೆಂಬಲಿಸಲ್ಪಡುತ್ತವೆ. ಭವಿಷ್ಯದ ಅಪಾಯಗಳನ್ನು ಮುಂಗಾಣುವ ಅಂಶವು ನೀವು ಕೈಗೊಳ್ಳುತ್ತಿರುವ ನಿರ್ಧಾರ ಅಥವಾ ಕ್ರಮವು ಸಮಂಜಸವಾಗಿದೆಯೇ ಎಂಬುದನ್ನು ಈ ಕೆಲವೊಂದು ಅಂಶಗಳ ಹಿನ್ನೆಲೆಯಲ್ಲಿ ತೂಗಿನೋಡುವುದರಲ್ಲಿದೆ: ಈ ಆಯ್ಕೆಯು ನನಗೆ ಸರಿಯಾಗಿದೆಯೇ? ಈ ಆಯ್ಕೆಯು ನನ್ನನ್ನು ಎಲ್ಲಿಗೆ ಮುನ್ನಡೆಸುತ್ತಿದೆ ಎಂಬುದರ ಕುರಿತು ನನಗೆ ಆಸಕ್ತಿಯಿದೆಯೇ? ಈ ಆಯ್ಕೆಯಲ್ಲಿ ಒಳಗೊಂಡಿರುವ ಜನರನ್ನು ನಾನು ಇಷ್ಟಪಡುತ್ತೇನೆಯೇ? ಈ ಆಯ್ಕೆಯು ನನ್ನ ಕುಟುಂಬದ ಹಿತಾಸಕ್ತಿಗೆ ಪೂರಕವಾಗಿದೆಯೇ? ನನ್ನ ಜೀವನದ ಈ ಹಂತದಲ್ಲಿ ಈ ಆಯ್ಕೆಯು ಅರ್ಥಪೂರ್ಣವಾಗಿದೆಯೇ? ಈ ಆಯ್ಕೆಯಲ್ಲಿ ನಾನು ನೈತಿಕವಾಗಿ ಸಮರ್ಥನೆಯನ್ನು ಹೊಂದಿದ್ದೇನೆಯೇ? ಈ ಆಯ್ಕೆಯು ನನಗೆ ಇನ್ನೂ ಬೆಳೆಯಲು ಸಹಾಯ ಮಾಡುತ್ತದೆಯೇ? ನಾನು ಹೆಚ್ಚು ಸೃಜನಾತ್ಮಕವಾಗಿರಲು ಮತ್ತು ನಾನು ಏನು ಮಾಡಲಿದ್ದೇನೆ ಎಂಬುದರ ಕುರಿತು ಸ್ಫೂರ್ತಿ ಹೊಂದಲು ನನಗೆ ಈ ಆಯ್ಕೆಯಲ್ಲಿ ಅವಕಾಶವಿದೆಯೇ? ಈ ವಿಷಯಗಳು ತಪ್ಪಾದಾಗ ನಮ್ಮ ಆಯ್ಕೆಗಳು ಕಾರ್ಯರೂಪಕ್ಕೆ ಬರುವುದಿಲ್ಲ. ಅಪಾಯಗಳು ಪ್ರಸ್ತುತವಾಗಬಹುದು ಆದರೆ ಅವು ಬದುಕಿನಲ್ಲಿ ನಿರ್ಣಾಯಕವಲ್ಲ. ಅರಿವಿನ ಆಳವಾದ ಮಟ್ಟದಲ್ಲಿ ತಮ್ಮ ಆಯ್ಕೆಗಳನ್ನು ನಿರ್ಣಯಿಸಬಲ್ಲವರು 'ಬ್ರಹ್ಮಾಂಡದ ಅನಂತ ಬುದ್ಧಿವಂತಿಕೆ'ಯೊಂದಿಗೆ ತಮ್ಮನ್ನು ತಾವು ಜೋಡಿಸಿಕೊಳ್ಳುತ್ತಾರೆ ಮತ್ತು ಯಶಸ್ಸಿಗೆ ಹೆಚ್ಚಿನ ಅವಕಾಶವನ್ನು ಹೊಂದಿರುತ್ತಾರೆ. ಮೊತ್ತಮೊದಲು ನೀವು ಸರಿಯಾದ ಆಯ್ಕೆಯನ್ನು ಮಾಡಿದ್ದೀರಾ ಎಂಬುದೇ ತಿಳಿದಿಲ್ಲದಿದ್ದಾಗ ಅದನ್ನು ಕೈಬಿಡುವುದು ಕಷ್ಟ. ಸಂದೇಹವು ನಮ್ಮನ್ನು ಭೂತಕಾಲಕ್ಕೆ ಕಟ್ಟಿಹಾಕುತ್ತದೆ. ಬದ್ಧತೆಯ ಕೊರತೆಯಿಂದಾಗಿ ಅನೇಕ ವೈವಾಹಿಕ ಸಂಬಂಧಗಳು ವಿಚ್ಛೇದನದಲ್ಲಿ ಕೊನೆಗೊಳ್ಳುತ್ತವೆ. ಸಂದೇಹದ ಮನಃಸ್ಥಿತಿಯಲ್ಲಿರುವಾಗ ನಿರ್ಧಾರ ತೆಗೆದುಕೊಳ್ಳದಿರುವುದು ಮುಖ್ಯ. ಒಂದು ಬಾರಿ ಕ್ರಿಯೆ ಆರಂಭವಾಯಿತೆಂದರೆ ಬ್ರಹ್ಮಾಂಡವು ಅದನ್ನು ಬೆಂಬಲಿಸುತ್ತದೆ ಮತ್ತು ಒಮ್ಮೆ ಒಂದು ನಿರ್ಧಾರ ಒಂದು ದಿಕ್ಕಿನಲ್ಲಿ ಚಾಲನೆಯಲ್ಲಿರಿಸಿದರೆ ಅದನ್ನು ಮತ್ತೆ ಹಿಮ್ಮುಖಗೊಳಿಸುವುದು ಕಷ್ಟ. ಸಂದೇಹಗಳು ಮುಂದುವರಿದರೆ ನಿಶ್ಚಲತೆಯಿಂದ ಹೊರಬರಬೇಕು. ಹೆಚ್ಚಿನ ಜನರು ಮುಂದಿನ ಆಯ್ಕೆಗೆ ಧುಮುಕುವ ಮೂಲಕ ಮತ್ತೆ ಅದೇ ತಪ್ಪನ್ನು ಮರುಕಳಿಸುವ ಮೂಲಕ ಜೀವನದ ಪ್ರಗತಿಯನ್ನು ಹಿಡಿದಿಟ್ಟುಕೊಳ್ಳುತ್ತಾರೆ. ಅತಿಯಾದ ಲೆಕ್ಕಾಚಾರ ಮಾಡುವ ಮೂಲಕ ಅನಿಯಂತ್ರಿತ ಆಯ್ಕೆಗಳನ್ನು ಮಾಡುವ ಮೂಲಕ ಬೇರೆ ಮನೆ, ಬೇರೆ ಉದ್ಯೋಗ, ಬೇರೆ ಸಂಬಂಧಗಳನ್ನು ಅರಸುತ್ತಾ ಸಾಗಿ ಮತ್ತೆ ಮತ್ತೆ ವೈಫಲ್ಯಕ್ಕೆ ತುತ್ತಾಗುತ್ತಾರೆ. ಇದು ಕ್ರಮೇಣ ಹತಾಶೆಗೆ ದಾರಿಮಾಡುತ್ತದೆ. ನಾವು ಊಹಿಸಲು ಸಾಧ್ಯವಾಗುವುದಕ್ಕಿಂತ ಹೆಚ್ಚೇ ಅವಕಾಶಗಳನ್ನು ಬ್ರಹ್ಮಾಂಡವು ಹೊಂದಿದೆ ಏಕೆಂದರೆ, ನಮ್ಮ ಸುಪ್ತ ಆಕಾಂಕ್ಷೆಗಳ ಕುರಿತಂತೆ ಅದು ಚೆನ್ನಾಗಿ ತಿಳಿದುಕೊಂಡಿದೆ ಕೂಡಾ. ಈ ರಹಸ್ಯ ನಮ್ಮ ಅರಿವಿನ ಆಳವಾದ ಮಟ್ಟದಲ್ಲಿ ನಮಗೆ ತಿಳಿದಿರುತ್ತದೆ ಆದರೆ ನಮ್ಮ ಅನುಮಾನಪ್ರವೃತ್ತಿ ಅದನ್ನು ನಮಗೆ ಸಂಪರ್ಕಿಸಲು ಬಿಡುವುದಿಲ್ಲ. ಹೀಗಾಗಿಯೇ ಹೆಚ್ಚಿನ ಸಂದರ್ಭಗಳಲ್ಲಿ ನಮ್ಮ ನಿರ್ಧಾರವು ಬಾಹ್ಯ ಅಂಶಗಳನ್ನೇ ಆಧರಿಸಿರುತ್ತದೆ. ಅನುಮಾನಗಳನ್ನು ಹೋಗಲಾಡಿಸಲು ಯಾವುದೇ ಸಿದ್ಧಸೂತ್ರವಿಲ್ಲ. ಏಕೆಂದರೆ, ನಮ್ಮೊಳಗಿರುವತನ್ನನ್ನು’ ಕಂಡುಹಿಡಿಯುವುದು ವೈಯಕ್ತಿಕ ವಿಚಾರ. ಅರಿವನ್ನು ವಿಸ್ತರಿಸಲು ಬದ್ಧರಾದಾಗ ಮಾತ್ರವೇ ಇದು ಸಾಧ್ಯ.
ವಾಸ್ತವದಲ್ಲಿ ತಪ್ಪು ತಿರುವುಗಳು ಎಂಬುದಿಲ್ಲ; ಕೇವಲ ಹೊಸ ತಿರುವುಗಳಷ್ಟೇ ಇರುವುದು. ಆದರೆ ಅಹಂ' ವ್ಯಕ್ತಿತ್ವವು ವಿಷಯಗಳಿಗೆ ಸಂಪರ್ಕಿಸಲು ಇಷ್ಟಪಡುತ್ತದೆ. ನಿನ್ನೆಯ ಮೂರನೇ ಸ್ಥಾನಕ್ಕಿಂತ ಇಂದಿನ ಎರಡನೇ ಸ್ಥಾನ ಉತ್ತಮ ಮತ್ತು ನಾಳೆ ಪ್ರಥಮ ಸ್ಥಾನದಲ್ಲಿರಲು ಬಯಸುತ್ತೇನೆ ಎಂಬ ರೀತಿಯ ರೇಖಾತ್ಮಕ ಚಿಂತನೆಯು (ಲೀನಿಯರ್ ಥಿಂಕಿಂಗ್) ಭವಿಷ್ಯದ ಅಸ್ಪಷ್ಟ ಪರಿಕಲ್ಪನೆಯನ್ನು ಪ್ರತಿನಿಧಿಸುತ್ತದೆ. ನಿಜವಾದ ವಿದ್ಯಮಾನಗಳು ಬಹು ಆಯಾಮಗಳಲ್ಲಿ ಸಂಭವಿಸುತ್ತವೆ.ನಿಮಗೆ ಏನಾಗುತ್ತದೆ’ ಎಂಬುದು ನೀವು ಹೇಗೆ ಯೋಚಿಸುತ್ತೀರಿ? ಹೇಗೆ ಅನುಭವಿಸುತ್ತೀರಿ? ಹೇಗೆ ಇತರರೊಂದಿಗೆ ಸಂಬಂಧ ಹೊಂದಿದ್ದೀರಿ? ನಿರ್ದಿಷ್ಟ ಸನ್ನಿವೇಶದಲ್ಲಿ ಹೇಗೆ ವರ್ತಿಸುತ್ತೀರಿ? ನಿಮ್ಮ ಸುತ್ತಲಿನ ಪರಿಸರಕ್ಕೆ ಹೇಗೆ ಹೊಂದಿಕೊಳ್ಳುತ್ತೀರಿ? ಹೇಗೆ ಭವಿಷ್ಯವನ್ನು ಅಥವಾ ನಿಮ್ಮನ್ನು ಗ್ರಹಿಸುತ್ತೀರಿ? ಎಂಬ ಅಂಶಗಳನ್ನು ಅವಲಂಬಿಸಿದೆ. ನೀವು ವಿಕಸನಗೊಳ್ಳಲು ಈ ಎಲ್ಲಾ ಆಯಾಮಗಳೂ ವಿಕಸನಗೊಳ್ಳಬೇಕು.
ನೀವು ನಿರೀಕ್ಷಿಸಿದ್ದನ್ನು ಅಥವಾ ಬಯಸಿದ್ದನ್ನು ಪಡೆಯದಿದ್ದರೆ `ನಾನು ಎಲ್ಲಿ ನೋಡಬೇಕು’ ಎಂದು ನಿಮ್ಮನ್ನು ನೀವು ಕೇಳಿಕೊಳ್ಳಿ. ಇದು ಅತ್ಯಂತ ಸ್ವತಂತ್ರ ಮನೋಭಾವ. ಯಾವುದೇ ಆಯಾಮದಲ್ಲಿ ಅಥವಾ ಜೀವನದ ಪ್ರತಿಯೊಂದು ಘಟನೆಯು ಎರಡು ವಿಷಯಗಳಲ್ಲಿ ಒಂದನ್ನು ಮಾತ್ರವೇ ಉಂಟುಮಾಡಬಹುದು: ಒಂದೋ ಅದು ನಿಮಗೆ ಒಳ್ಳೆಯದನ್ನು ಸೃಷ್ಟಿಸಬಹುದು ಅಥವಾ ನಿಮಗೆ ಒಳ್ಳೆಯದನ್ನು ಸೃಷ್ಟಿಸಲು ನೀವು ಎಲ್ಲಿ ನೋಡಬೇಕು ಎಂಬ ಸಂದೇಶವನ್ನು ತರಬಹುದು. ವಿಕಸನವು ಸಮಾನ ಗೆಲುವಿನ ಸಾಧ್ಯತೆ ಹೊಂದಿದೆ ಎಂಬುದು ಕುರುಡು ಆಶಾವಾದವಲ್ಲ. ಇದನ್ನು ದೇಹದ ಕಾರ್ಯಕ್ಷಮತೆಯ ಹಿನ್ನೆಲೆಯಲ್ಲಿ ನೋಡಿ. ಜೀವಕೋಶದಲ್ಲಿ ಏನಾದರೂ ಸಂಭವಿಸುವುದು ಅದರ ಆರೋಗ್ಯಕರ ಕಾರ್ಯಾಚರಣೆಯ ಭಾಗವಾಗಿದೆ ಅಥವಾ ಸಮಸ್ಯೆಯ ತಿದ್ದುಪಡಿ ನಡೆಯಬೇಕು ಎಂಬುದರ ಸಂಕೇತವಾಗಿರುತ್ತದೆ.
ದೇಹದ ಶಕ್ತಿಯು ಬೇಕಾಬಿಟ್ಟಿ ಅಥವಾ ಹುಚ್ಚುಚ್ಚಾಗಿ ವ್ಯಯಿಸಲ್ಪಡುವುದಿಲ್ಲ! ಜೀವನವು ಈ ರೀತಿಯಲ್ಲಿ ತನ್ನನ್ನು ಸ್ವಯಂ ಸರಿಪಡಿಸಿಕೊಳ್ಳುತ್ತದೆ. ಪ್ರಜ್ಞೆಯ ಆಧಾರವಾಗಿರುವ ಕಾರ್ಯವ್ಯವಸ್ಥೆ ಬದಲಾಗುವುದಿಲ್ಲ. ಅದು ಈ ಕೆಲವೊಂದು ತತ್ವಗಳನ್ನು ಅನುಸರಿಸುತ್ತದೆ: ನಿಮ್ಮ ಆಸೆಗಳಿಗೆ ಹೊಂದಿಕೊಳ್ಳಲು; ಎಲ್ಲವನ್ನೂ ಸಮತೋಲನದಲ್ಲಿಡಲು; ನಿಮ್ಮ ವೈಯಕ್ತಿಕ ಜೀವನವನ್ನು ಬ್ರಹ್ಮಾಂಡದೊಂದಿಗೆ ಸಮನ್ವಯಗೊಳಿಸಲು; ನೀವು ಏನು ಮಾಡುತ್ತಿದ್ದೀರಿ ಎಂಬುದರ ಕುರಿತು ನಿಮಗೆ ಅರಿವು ಮೂಡಿಸಲು; ನಿಮ್ಮ ಕ್ರಿಯೆಯ ಪರಿಣಾಮಗಳನ್ನು ನಿಮಗೆ ತೋರಿಸಲು; ನಿಮ್ಮ ಜೀವನವನ್ನು ಸಾಧ್ಯವಾದಷ್ಟು ನೈಜವಾಗಿಸಲು. ನೀವು ಇಚ್ಛಾಸ್ವಾತಂತ್ರö್ಯವನ್ನು ಹೊಂದಿರುವುದರಿಂದ ಈ ತತ್ವಗಳನ್ನು ಸಂಪೂರ್ಣವಾಗಿ ನಿರ್ಲಕ್ಷಿಸಬಹುದು ಮತ್ತು ಒಂದಲ್ಲ ಹಲವು ಬಾರಿ ಇದನ್ನೇ ಮಾಡುತ್ತೇವೆ ಕೂಡಾ. ಆದರೆ ನೀವು ಅವುಗಳನ್ನು ದಿಕ್ಕು ತಪ್ಪಿಸಲು ಸಾಧ್ಯವಿಲ್ಲ. ಏಕೆಂದರೆ, ಜೀವನ ಅವುಗಳ ಮೇಲೆಯೇ ಅವಲಂಬಿತವಾಗಿದೆ. ಅವು ಅಸ್ತಿತ್ವದ ಮೂಲ ನೆಲೆ. ಒಮ್ಮೆ ನೀವು ಈ ಸತ್ಯವನ್ನು ಹೀರಿಕೊಂಡರೆ ನಿಮ್ಮ ದಾರಿಯಲ್ಲಿ ಬರುವ ಯಾವುದೇ ಸಾಧ್ಯತೆಯೊಂದಿಗೆ ನೀವೇ ಹೊಂದಾಣಿಕೆ ಮಾಡಿಕೊಳ್ಳಬಹುದು ಮತ್ತು ಇದು ಶತಕೋಟಿ ವರ್ಷಗಳಿಂದ ಜೀವಂತವಿರುವ ಮನೋಭಾವವೂ ಹೌದು.

Previous articleಗಾಯಕನಾಗುವೆ, ಇಲ್ಲವೇ ದನಕಾಯುವೆ ಎಂದ ತಿಗಡೇಸಿ
Next articleದೇಹಗಂಟುಗಳನ್ನು ಗೌಟ್ಸ್‌ಗಳಾಗಿಸುವ ಯೂರಿಕ್ ಆಮ್ಲ