ಭದ್ರಾ ಮೇಲ್ದಂಡೆ ಯೋಜನೆ ಕಳೆದ ೨೫ ವರ್ಷಗಳ ಕನಸು. ಒಣಪ್ರದೇಶಗಳಿಗೆ ನೀರುಣಿಸುವ ಮಹತ್ವಾಕಾಂಕ್ಷೆ ಯೋಜನೆ. ಇದಕ್ಕೆ ಕೇಂದ್ರದಿಂದ ೫೩೦೦ ಕೋಟಿ ರೂ. ಬರಬೇಕು. ಆದರೂ ಕೇಂದ್ರ ಇದಕ್ಕೆ ಕತ್ತರಿ ಹಾಕುವ ಸಂಭವವಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಆತಂಕ ವ್ಯಕ್ತಪಡಿಸಿರುವುದು ಸಹಜವಾಗಿದೆ. ಇದು ಚಿತ್ರದುರ್ಗ, ಚಿಕ್ಕಮಗಳೂರು, ತುಮಕೂರು, ದಾವಣಗೆರೆ ಜಿಲ್ಲೆಗಳ ಒಟ್ಟು ೨.೨೫ ಲಕ್ಷ ಹೆಕ್ಟೇರ್ ಭೂಮಿಗೆ ನೀರುಣಿಸಲಿದೆ. ಅಲ್ಲದೆ ೩೭೫ ಕೆರೆಗಳನ್ನು ತುಂಬಿಸಲಾಗುವುದು. ಹಿಂದೆ ಕೇಂದ್ರ ಸರ್ಕಾರ ಬಜೆಟ್‌ನಲ್ಲಿ ಇದನ್ನು ರಾಷ್ಟ್ರೀಯ ಯೋಜನೆಯಾಗಿ ಪರಿಗಣಿಸುವುದಾಗಿ ವಾಗ್ದಾನ ನೀಡಿತ್ತು. ಅನಂತರ ಚುನಾವಣೆ ಕಾಲದಲ್ಲಿ ೩೫೦೦ ಕೋಟಿ ರೂ. ನೀಡುವುದಾಗಿ ಜನರಿಗೆ ಭರವಸೆ ನೀಡಿ ಮತ ಪಡೆಯಲಾಯಿತು. ಗೋವಿಂದ ಕಾರಜೋಳ ಸಂಸದರಾಗಿ ಆಯ್ಕೆಗೊಂಡವರು. ಹಿಂದೆ ಅವರೇ ರಾಜ್ಯದಲ್ಲಿ ನೀರಾವರಿ ಸಚಿವರಾಗಿದ್ದರು. ಕೇಂದ್ರದ ಧೋರಣೆ ವಿರೋಧಿಸಿ ಕಾಂಗ್ರೆಸ್ ಶಾಸಕರು ದೆಹಲಿಗೆ ಹೋಗಿ ಪ್ರತಿಭಟಿಸಿದ್ದರು. ಇದುವರೆಗೆ ಹಣವಂತೂ ಬಿಡುಗಡೆಯಾಗಿಲ್ಲ. ಇದಕ್ಕೆ ಕಾರಣವೇನು ಎಂಬುದನ್ನು ಯಾರೂ ಹೇಳುತ್ತಿಲ್ಲ. ಹಣಕಾಸು ಸಚಿವರು ಕರ್ನಾಟಕವನ್ನು ಪ್ರತಿನಿಧಿಸುತ್ತಿದ್ದರೂ ಈ ಯೋಜನೆ ಬಗ್ಗೆ ಚಕಾರ ಎತ್ತಿಲ್ಲ. ಈಗ ನಾಲೆ, ಸುರಂಗ ಎಲ್ಲವೂ ಆಗಿದೆ. ಕಾಮಗಾರಿ ಕೈಗೊಂಡ ಗುತ್ತಿಗೆದಾರರಿಗೆ ಪಾವತಿ ಮಾಡಲು ಹಣವಿಲ್ಲ. ನಮ್ಮ ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಸಚಿವರು ಮತ್ತು ಸಂಸದರು ಮುತುವರ್ಜಿ ವಹಿಸಿ ಅನುದಾನ ಸಿಗುವಂತೆ ಮಾಡಬೇಕಿತ್ತು. ನೀರಾವರಿ ಯೋಜನೆಗಳಲ್ಲಿ ಪಕ್ಷ ರಾಜಕೀಯ ನುಸುಳಬಾರದು. ಇದು ಏತ ನೀರಾವರಿ ಯೋಜನೆಯಾಗಿರುವುದರಿಂದ ವಿದ್ಯುತ್ ಪೂರೈಕೆಗೂ ಈಗಲೇ ವ್ಯವಸ್ಥೆ ಮಾಡಿಕೊಳ್ಳುವುದು ಅಗತ್ಯ. ರಾಜಾಸ್ತಾನ ಹೊರತುಪಡಿಸಿದರೆ ಕರ್ನಾಟಕವೇ ಅತಿ ಹೆಚ್ಚು ಒಣ ಪ್ರದೇಶವನ್ನು ಹೊಂದಿದೆ. ಚಿತ್ರದುರ್ಗ, ದಾವಣಗೆರೆ ಅತ್ಯಂತ ಕಡಿಮೆ ಮಳೆ ಪಡೆಯುವ ಜಿಲ್ಲೆಗಳಲ್ಲಿ ಸೇರಿವೆ. ಅದರಲ್ಲೂ ಕುಡಿಯುವ ನೀರು ಸಿಗುವುದೇ ಕಷ್ಟ. ಹನಿ ನೀರಾವರಿಗೆ ಉತ್ತಮ ಅವಕಾಶಗಳಿವೆ. ಇದಕ್ಕೆ ಕಾದಿಟ್ಟ ಅರಣ್ಯ ಪ್ರದೇಶದಲ್ಲಿ ೧೮೦೦ ಎಕರೆ ಬಳಸಿಕೊಳ್ಳಲಾಗಿದೆ. ಮೊದಲ ಹಂತದಲ್ಲಿ ೧೭.೪೦ ಟಿಎಂಸಿ ಎರಡನೇ ಹಂತದಲ್ಲಿ ೩೦ ಟಿಎಂಸಿ ನೀರು ಬಳಕೆಯಾಗಲಿದೆ. ತುಂಗಾದಿಂದ ಭದ್ರಾಗೆ ನೀರನ್ನು ಪಂಪ್ ಮಾಡಬೇಕು. ಆಮೇಲೆ ಭದ್ರಾ ನೀರನ್ನು ಸುರಂಗದ ಮೂಲಕ ಹರಿಸಬೇಕು. ಈಗ ಎಲ್ಲವೂ ಸಿದ್ಧವಾಗಿದೆ. ಕೇಂದ್ರದ ಅನುದಾನ ಮಾತ್ರ ಇನ್ನೂ ಬಂದಿಲ್ಲ.
ಅನುದಾನ ಬಾರದೇ ಇರುವುದಕ್ಕೆ ಕಾರಣ ತಿಳಿದುಬಂದಿಲ್ಲ. ನಾಲ್ಕು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ಬಹಳ ಕಡಿಮೆ. ಕೆರೆಕಟ್ಟೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಇವುಗಳನ್ನು ಭರ್ತಿ ಮಾಡಿದರೆ ಹನಿ ನೀರಾವರಿ, ತೋಟದ ಬೆಳೆಗಳಿಗೆ ಅನುಕೂಲ. ಅಲ್ಲದೆ ಕುಡಿಯುವ ನೀರಿನ ಸಮಸ್ಯೆ ಕೂಡ ಬಗೆಹರಿಯುತ್ತದೆ. ಹಿರಿಯೂರು ಬಳಿ ವಾಣಿವಿಲಾಸ ಜಲಾಶಯವಿದೆ. ಇದಕ್ಕೆ ನೀರನ್ನು ತಂದರೂ ಮಳೆ ಆಶ್ರಯದ ಪ್ರದೇಶಗಳಿಗೆ ನೀರುಣಿಸುವುದು ಸುಲಭ. ಇಂಥ ಯೋಜನೆ ರಾಜಕೀಯ ಜಂಜಾಟಕ್ಕೆ ಸಿಲುಕಬಾರದು. ಜನ ತಮ್ಮ ಅನುಕೂಲಕ್ಕೆ ಮತ ಚಲಾಯಿಸುತ್ತಾರೆ. ಅದಕ್ಕೂ ನೀರಾವರಿ ಯೋಜನೆಗಳಿಗೂ ಸಂಬಂಧ ಕಲ್ಪಿಸಬಾರದು. ನೀರಾವರಿ ಯೋಜನೆಗಳು ದೇಶದ ಆಸ್ತಿ. ಮುಂದಿನ ಜನಾಂಗವನ್ನೂ ಕಾಪಾಡುವ ದೀರ್ಘಕಾಲಿಕ ಯೋಜನೆಗಳು. ಅವುಗಳನ್ನು ಮುಂದೂಡುತ್ತ ಹೋದಲ್ಲಿ ಒಟ್ಟು ವೆಚ್ಚ ಅಧಿಕಗೊಳ್ಳುತ್ತ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ನೀರಾವರಿ, ವಿದ್ಯುತ್, ರಾಷ್ಟ್ರೀಯ ಹೆದ್ದಾರಿ, ಮೂಲಭೂತ ಸವಲತ್ತು ಅಭಿವೃದ್ಧಿ ಯೋಜನೆಗಳಿಗೆ ಎಂದೂ ಆರ್ಥಿಕ ಕೊರತೆ ಬರಬಾರದು. ಇವುಗಳೆಲ್ಲ ಬಜೆಟ್‌ನಲ್ಲಿ ಮೂಲ ಬಂಡವಾಳ ಹೂಡಿಕೆಯಾಗಿ ನಮೂದಾಗಿರುತ್ತದೆ. ಇವುಗಳಿಗೆ ಮೊದಲು ಅನುದಾನ ಒದಗಿಸಿ ಉಳಿದ ಹಣದಲ್ಲಿ ಯೋಜನೇತರ ವೆಚ್ಚಕ್ಕೆ ಅನುದಾನ ಒದಗಿಸಬಹುದು. ಈಗ ಯೋಜನೇತರ ವೆಚ್ಚವೇ ಅಧಿಕಗೊಳ್ಳುತ್ತಿದೆ. ಹೀಗಾಗಿ ಮೂಲ ಬಂಡವಾಳ ಹೂಡಿಕೆಗೆ ಹಣದ ಕೊರತೆ ಕಂಡು ಬರುತ್ತಿದೆ. ನೀರಿನ ಸಂಪನ್ಮೂಲ ಪ್ರತಿ ವರ್ಷ ಕಡಿಮೆಯಾಗುತ್ತ ಹೋಗುತ್ತದೆಯೇ ಹೊರತು ಅಧಿಕಗೊಳ್ಳುವುದಿಲ್ಲ. ಅದರಿಂದ ನೀರನ್ನು ಕಾಪಿಡುವುದು ಎಲ್ಲರ ಕರ್ತವ್ಯ. ಸುದೈವದಿಂದ ಕರ್ನಾಟಕಕ್ಕೆ ನೀರಿನ ಸಂಪನ್ಮೂಲ ಸಾಕಷ್ಟಿದೆ. ಅದನ್ನು ರಕ್ಷಿಸುವುದು ಎಲ್ಲರ ಕರ್ತವ್ಯ. ಪಶ್ಚಿಮಾಭಿಮುಖವಾಗಿ ಹರಿಯುವ ನದಿಗಳನ್ನು ಸಂಪೂರ್ಣವಾಗಿ ಸದುಪಯೋಗ ಮಾಡಿಕೊಳ್ಳುವುದಕ್ಕೆ ಸಾಧ್ಯವಾಗಿಲ್ಲ. ಪರಿಸರಕ್ಕೆ ಧಕ್ಕೆಯಾಗದಂತೆ ನದಿಗಳನ್ನು ಬಳಕೆ ಮಾಡಿಕೊಳ್ಳುವುದು ಇಂದಿನ ಸವಾಲಾಗಿದೆ. ಅದರಲ್ಲೂ ಅಂತಾರಾಜ್ಯಗಳ ನದಿಗಳ ನೀರಿನ ಪಾಲನ್ನು ಬಳಸಿಕೊಳ್ಳುವುದು ಸಾಹಸವೇ ಆಗಿದೆ. ಇದಕ್ಕೆ ರಾಜಕೀಯ ಇಚ್ಛಾಶಕ್ತಿ ಬೇಕು. ನಮ್ಮ ಜನಪ್ರತಿನಿಧಿಗಳು ಒಗ್ಗಟ್ಟಿನಿಂದ ಕೆಲಸ ಮಾಡುವುದು ಮುಖ್ಯ. ಭದ್ರಾ ಮೇಲ್ದಂಡೆ ಯೋಜನೆಯ ಇಂದಿನ ಅಗತ್ಯ ಜನಪ್ರತಿನಿಧಿಗಳ ಒಗ್ಗಟ್ಟಿನ ರಾಜಕೀಯ ಇಚ್ಛಾಶಕ್ತಿ. ಪ್ರಜ್ಞಾವಂತ ಜನಪ್ರತಿನಿಧಿಗಳು ಇದನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತಾರೆ. ರಾಜ್ಯದ ಹಿತ ಬಂದಾಗ ಪಕ್ಷ ರಾಜಕಾರಣವನ್ನು ಮುಂದೂಡುವುದು ಅಗತ್ಯ. ಇದು ಎಲ್ಲ ಇಲಾಖೆಗಳಲ್ಲೂ ಕಂಡು ಬರುತ್ತಿರುವ ದೃಶ್ಯ. ಕೇಂದ್ರ-ರಾಜ್ಯಗಳ ನಡುವೆ ಸಾಮರಸ್ಯ ಮೂಡಿದರೆ ಸಮಸ್ಯೆಗಳು ಮಂಜಿನಂತೆ ಕರಗಿ ಹೋಗುವುದರಲ್ಲಿ ಸಂದೇಹವಿಲ್ಲ. ಅಭಿವೃದ್ಧಿ ಕಾರ್ಯಗಳಿಗೆ ರಾಜಕೀಯ ಅಡ್ಡ ಬರಬಾರದು.