ಬಡವರ ಜೀವ ಎಷ್ಟು ಅಗ್ಗವಾಗಿದೆ ನೋಡಿ…!?

0
31

ಮುಂಡಗೋಡಿನ ನಾಲ್ಕು ವರ್ಷದ ಮಗು ಮಯೂರಿ ಮಂಗಳವಾರ ಮುಂಜಾನೆ ಎಂದಿನಂತೆ ಲವಲವಿಕೆಯಿಂದ ಅಂಗನವಾಡಿಗೆ ಹೋಗಿದ್ದಳು. ಬಂದದ್ದು ಹೆಣವಾಗಿ!
ಅಂಗನವಾಡಿ ಪಕ್ಕದಲ್ಲಿಯೇ ಮೂತ್ರ ವಿಸರ್ಜನೆಗಾಗಿ ಹೋಗಿದ್ದ ಈ ಮಗುವಿಗೆ ಯಾವುದೋ ವಿಷ ಜಂತು ಕಡಿದು ಬಲಿ ಪಡೆಯಿತು. ಹೆತ್ತವರ ಆಕ್ರಂದನ-ಆಕ್ರೋಶ ಮುಗಿಲು ಮುಟ್ಟಿತು. ಮುಂಡಗೋಡು ಜನ ಮಮ್ಮಲ ಮರುಗಿದರು.
ಭಟ್ಕಳಕ್ಕೆ ಪ್ರವಾಸಕ್ಕೆಂದು ಬಂದಿದ್ದ ದೂರದ ಗಾಣದಾಳದ ವಿದ್ಯಾರ್ಥಿಯೊಬ್ಬ ಮೂತ್ರ ವಿಸರ್ಜನೆಗೆಂದು ಹೋದವ ತೆರೆದ ಬಾವಿಯಲ್ಲಿ ಬಿದ್ದು ಸಾವನ್ನಪ್ಪಿದ. ಅದು ಸಂಜೆಯ ಹೊತ್ತು. ಪಂಚಾಯತದ ಎದುರೇ ಬಾವಿಯಲ್ಲಿ ಕಸ-ಸೊಪ್ಪು ತುಂಬಿತ್ತು. ಬಾವಿ ಇದೆ ಎಂದು ಗೊತ್ತು ಆಗುತ್ತಿರಲಿಲ್ಲ. ನತದೃಷ್ಟ ಬಾಲಕ ದುರ್ಗಪ್ಪ ಹರಿಜನ ಅಲ್ಲಿಯೇ ಮುಳುಗಿ ಹೋದ!
ಹುಬ್ಬಳ್ಳಿಯ ಉಣಕಲ್ಲಿನ ಅಜ್ಜವ್ವ ಕಾಲೋನಿಯಲ್ಲಿ ಸಿಲಿಂಡರ್‌ಗೆ ಬೆಂಕಿ ತಗುಲಿ ಸ್ಫೋಟಗೊಂಡು ಎಂಟು ಅಯ್ಯಪ್ಪ ಮಾಲಾಧಾರಿಗಳು ಸುಟ್ಟು ಕರಕಲಾದರು. ದೇವರನ್ನು ನಂಬಿ ಪೂಜೆಗೈಯುತ್ತಿದ್ದ ಮಾಲಾಧಾರಿಗಳು ಆಯಾ ಕುಟುಂಬಗಳ ಆಸರೆಯಾಗಿದ್ದವರು! ಅಯ್ಯಪ್ಪನೂ ಕಾಯದಂತಾದ!!
ಈ ಮೂರು ಘಟನೆಗಳಷ್ಟೇ ಅಲ್ಲ. ಇದರೊಟ್ಟಿಗೆ ಅತ್ಯಂತ ಕರಾಳ ಹಾಗೂ ಅಮಾನುಷ ಘಟನೆ ಕಳೆದೊಂದು ತಿಂಗಳಿಂದ ರಾಜ್ಯದ ರಾಯಚೂರು, ಕೊಪ್ಪಳ, ಬೆಳಗಾವಿ ಮತ್ತಿತರ ಕಡೆಗಳಲ್ಲಿ ಸಂಭವಿಸುತ್ತಿರುವ ಬಾಣಂತಿಯರ ಸರಣಿ ಸಾವುಗಳದ್ದು.
ಮಗು ಹೆತ್ತು ಆ ತಾಯಿ ಸಾವನ್ನಪ್ಪಿದರೆ ಆ ದಾರುಣ ಮನಕಲಕುವ ಸ್ಥಿತಿ ಎಂಥವರ ಹೃದಯವನ್ನೂ ತಲ್ಲಣಗೊಳಿಸುತ್ತದಲ್ಲವೇ?
ಈ ನವೆಂಬರ್-ಡಿಸೆಂಬರ್ ತಿಂಗಳಲ್ಲಿ ನಡೆದ ಇಂತಹ ಹತ್ತಾರು ಘಟನೆಗಳಿಗೆ ಆಕಸ್ಮಿಕ' ಎಂದು ವಿಷಾದ ವ್ಯಕ್ತಪಡಿಸಬಹುದು. ಆದರೆ ಹಾಗಲ್ಲ, ಈ ಎಲ್ಲವೂ ನಮ್ಮ ವ್ಯವಸ್ಥೆಯ-ಆಡಳಿತದ ದೋಷ ಮತ್ತು ಅಪಹಾಸ್ಯವನ್ನು ಬಿಂಬಿಸುತ್ತವೆ. ಅಷ್ಟೇ ಅಲ್ಲ. ಸರ್ಕಾರಿ ಯೋಜನೆಗಳ ದುರ್ವಿನಿಯೋಗ ಮತ್ತು ಭ್ರಷ್ಟತೆಯ ಕ್ರೂರ ಮುಖ ತೆರೆದಿಡುತ್ತಿವೆ. ಇಷ್ಟಕ್ಕೂ ಒಮ್ಮೆ ನೋಡಿ. ಈ ನಾಲ್ಕು ದುರಂತಗಳು ಮಾತ್ರವಲ್ಲ. ಇಂತಹ ಎಲ್ಲ ಘಟನೆಗಳಲ್ಲಿ ಸತ್ತವರು, ಹಾನಿಗೊಳಗಾದವರು ಕಡು ಬಡವರು ಮತ್ತು ಸಮಾಜದ ಕಟ್ಟ ಕಡೆಯ ಜನ. ಅಂಗನವಾಡಿಗೆ ತೆರಳಿದ್ದ ಮಯೂರಿ, ತನ್ನ ಕೇಂದ್ರ ಬಿಟ್ಟು ಪಕ್ಕದ ಹೊರಾಂಗಣದಲ್ಲಿ ಮೂತ್ರ ವಿಸರ್ಜನೆಗೆ ಹೋಗಬೇಕಾದ ಅನಿವಾರ್ಯ ಪ್ರಮೇಯ ಯಾಕೆ ಬಂತು?. ಸರ್ಕಾರದ ಘೋಷಣೆ-ಪ್ರತಿ ಅಂಗನವಾಡಿಗೂ ಶೌಚಾಲಯ, ನೀರು, ಬಿಸಿಯೂಟ ಮತ್ತು ಅದಕ್ಕೊಂದು ಅಡುಗೆ ಮನೆ. ಇವು ಮುಂಡಗೋಡು ಮಾರಿಕಾಂಬಾ ನಗರದ ಅಂಗನವಾಡಿಯಲ್ಲೂ ಇದ್ದಿದ್ದರೆ ಮಯೂರಿ ವಿಷ ಜಂತುವಿಗೆ ಬಲಿಯಾಗುವ ದಾರುಣ ಸ್ಥಿತಿ ಬರುತ್ತಿತ್ತೇ? ಸರ್ಕಾರ ಘೋಷಿಸಿದಂತೆ ಗ್ರಾಮೀಣ ಭಾಗದ ೨೪,೦೪೦ ಶಾಲೆಗಳ ಪೈಕಿ ೧೩,೩೭೪ ಪ್ರಾಥಮಿಕ ಶಾಲೆಗಳಲ್ಲಿ ಶೌಚಾಲಯ ಇಲ್ಲ. ಕುಡಿಯುವ ನೀರಿನ ವ್ಯವಸ್ಥೆ ೧೬,೧೦೬ ಶಾಲೆಗಳಲ್ಲಿ ಇಲ್ಲ. ಗ್ರಾಮಾಂತರ ಪ್ರದೇಶದಲ್ಲಿ ೫೩,೯೦೧ ಅಂಗನವಾಡಿಗಳಿವೆ. ೩೧,೦೫೭ ಅಂಗನವಾಡಿ ಕೇಂದ್ರಗಳಿಗೆ ಶೌಚಾಲಯವೂ ಇಲ್ಲ. ಕುಡಿಯುವ ನೀರೂ ಇಲ್ಲ. ಹಾಗಂತ ಸರ್ಕಾರ ೫೦ ಕೋಟಿಗೂ ಅಧಿಕ ಹಣವನ್ನು ಇದಕ್ಕಾಗಿಯೇ ಮೀಸಲಿಟ್ಟಿದೆ. ಮೊನ್ನೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲಿ ಸರ್ಕಾರವೇ ಈ ಅಂಕಿಸಂಖ್ಯೆಗಳನ್ನು ಒದಗಿಸಿದೆ. ವರ್ಷದ ಹಿಂದೆಯೇ ೨೯,೨೬೫ ಅಂಗನವಾಡಿಗಳಿಗೆ ನೀರು-ಶೌಚಾಲಯಗಳ ನಿರ್ಮಾಣದ ಕಾರ್ಯಾದೇಶ ನೀಡಲಾಗಿದೆಯಂತೆ... ಎಂತಹ ದುಸ್ಥಿತಿ ನೋಡಿ. ಪುಟ್ಟ ಮಕ್ಕಳು... ಅವರಿಗೆ ಮಲ ಮೂತ್ರ ನಿಗ್ರಹಿಸಲು ಸಾಧ್ಯವೇ? ಉತ್ತಮ ಪರಿಸರ, ಸ್ವಚ್ಛತೆ ಬಗ್ಗೆ ಉದ್ದುದ್ದ ಭಾಷಣ ಮಾಡುವ ಮಂತ್ರಿ ಮಹೋದಯರು, ಅಧಿಕಾರಿಗಳು ಇಂತಹ ಪ್ರಾಥಮಿಕ ಮತ್ತು ಸೂಕ್ಷ್ಮ ಸಂಗತಿಯನ್ನೂ ಅರ್ಥ ಮಾಡಿಕೊಳ್ಳದ ಕೆಟ್ಟ ಮನಸ್ಥಿತಿಗೆ ಬಂದು ಬಿಟ್ಟಿದ್ದಾರೆ. ಅಥವಾ ಈ ಬಡ ಅಂಗನವಾಡಿ ಮಕ್ಕಳ ಶೌಚಾಲಯದ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ನುಂಗಿ ನೀರು ಕುಡಿದಿದ್ದಾರೆ ಎನ್ನಬಹುದೇನೋ? ನೋಡಿ. ಮಯೂರಿಯನ್ನು ಪೋಷಕರು ತಕ್ಷಣ ತಾಲ್ಲೂಕು ಆಸ್ಪತ್ರೆಗೆ ಕರೆದೊಯ್ದರೆ ಪ್ರಾಥಮಿಕ ಚಿಕಿತ್ಸೆ-ಔಷಧಿ ಇರಲಿಲ್ಲ. ಹುಬ್ಬಳ್ಳಿಗೆ ಕರೆದೊಯ್ಯುವ ಮಾರ್ಗಮಧ್ಯೆಯೇ ಮಗುವಿನ ಪ್ರಾಣ ಹೋಯಿತು. ತಾಲ್ಲೂಕು ಆಸ್ಪತ್ರೆಯಲ್ಲೇ ವಿಷ ಜಂತು ಕಡಿತಕ್ಕೆ ಔಷಧಿ ಇಲ್ಲದ ಭಯಾನಕ ಸ್ಥಿತಿ ನಮ್ಮ ಆರೋಗ್ಯ ಇಲಾಖೆಯದ್ದು! ಹಾಗಂತ ನಗರಕ್ಕಿಂತ ತಾಲ್ಲೂಕು, ಗ್ರಾಮೀಣ ಪಿಎಚ್‌ಸಿಗಳಲ್ಲಿ ವಿಷ ಜಂತುಗಳ ಔಷಧಿ ಸದಾ ಲಭ್ಯ ಇರಬೇಕು. ಹಾವು-ಚೇಳು-ನಾಯಿ ಕಡಿತ ಇತ್ಯಾದಿಗಳಿಗೆ ಆಸ್ಪತ್ರೆಗಳಲ್ಲಿ ಔಷಧಿ ಇರಬೇಕಾದುದು ಕಡ್ಡಾಯ. ಇವು ಲಭ್ಯವಿಲ್ಲ, ಇದಕ್ಕಾಗಿ ಜನ, ಜಾನುವಾರು ಸತ್ತಿರುವ ದೂರುಗಳು ಇಂದು ನಿನ್ನೆಯವೇನಲ್ಲ.ಅಭಿವೃದ್ಧಿ ಶೀಲ ರಾಜ್ಯ’ ಎನಿಸಿಕೊಳ್ಳುವ ಆಡಳಿತಗಾರರು ಈ ಅಂಶದ ಬಗ್ಗೆ ಆಲೋಚಿಸುವುದು ಯಾವಾಗ?
ಹಾಗಿದ್ದೂ ರೇಬಿಸ್, ವಿಷ ಜಂತುಗಳು ಕಚ್ಚಿದರೆ ಔಷಧಿಗಳ ಪೂರೈಕೆಗೆ ಸರ್ಕಾರ ವ್ಯಯಿಸಿರುವುದು ಹತ್ತಾರು ಕೋಟಿ. ಎಲ್ಲಿ ಹೋಯಿತು ಈ ಹಣವೆಲ್ಲ?
ಭಟ್ಕಳಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬಾಲಕ ಮೂತ್ರ ವಿಸರ್ಜನೆಗೆ ಪಂಚಾಯತದ ಪಕ್ಕದಲ್ಲಿಯೇ ಹೋಗಿದ್ದ. ತೆರೆದ ಬಾವಿ ಕಸ ಕಡ್ಡಿ-ಹುಲ್ಲುಗಳಿಂದ ತುಂಬಿತ್ತು. ಗಾಣದಾಳದ ಬಾಲಕನಿಗೇನು ಗೊತ್ತು, ಇಲ್ಲಿ ಬಾವಿ ಇದೆ ಎಂದು? ಸಹಜವಾಗಿ ಹೋದ… ಸೀದಾ ಆಳಕ್ಕೆ ಬಿದ್ದ. ಪಾಪ ಅವನನ್ನು ಕರೆದುಕೊಂಡು ಬಂದ ಶಿಕ್ಷಕರು ಯಾರನ್ನು ದೂಷಿಸಬೇಕು? ಪುರಸಭೆ, ಪಂಚಾಯತ ಹಾಗೂ ತಾಲ್ಲೂಕು ಆಡಳಿತ ಈ ಹಾಳು ಬಾವಿಯನ್ನು ಮುಚ್ಚಿಸಲು ಸಾಧ್ಯವಿಲ್ಲದಷ್ಟು ಬರಗೆಟ್ಟಿದೆಯೇ? ಹೋಗಲಿ, ಸಾರ್ವಜನಿಕ ಶೌಚಾಲಯ-ಮೂತ್ರಾಲಯಗಳನ್ನು ಕೂಡ ಭಟ್ಕಳದ ಪುರಸಭೆ ಕಲ್ಪಿಸಿಲ್ಲ. ನಿತ್ಯ ಆಗಮಿಸುವ ಪ್ರವಾಸಿಗರು ಎಲ್ಲಿಗೆ ಹೋಗಬೇಕು? ಇದು ಕೇವಲ ವಿದ್ಯಾರ್ಥಿಯೊಬ್ಬನ ಸಮಸ್ಯೆಯಲ್ಲ. ಎಲ್ಲ ಪ್ರವಾಸಿಗರು ಮತ್ತು ಸ್ಥಳೀಯ ನೈರ್ಮಲ್ಯದ ಪ್ರಶ್ನೆ.
ಶೌಚಾಲಯಗಳು ಸ್ಥಳೀಯಾಡಳಿತದ ಪ್ರಾಥಮಿಕ ಕರ್ತವ್ಯ ಎಂಬುದು ಪುರಸಭೆ ಅಧಿಕಾರಿಗಳಿಗೆ ಇಲ್ಲದಾಗಿದೆ.
ಇದಕ್ಕೆ ನಾಲ್ಕು ದಿನ ಮೊದಲು ಮುರುಡೇಶ್ವರ ಪ್ರವಾಸಕ್ಕೆಂದು ಬಂದಿದ್ದ ಮೂವರು ವಿದ್ಯಾರ್ಥಿಗಳು ಸಾವನ್ನಪ್ಪಿದರು. ಸಮುದ್ರಕ್ಕಿಳಿದವರನ್ನು ರಕ್ಷಿಸಲಾಗಲಿಲ್ಲ. ಪ್ರವಾಸಕ್ಕೆ ಕರೆದೊಯ್ದು ಸರಿಯಾಗಿ ನಿರ್ವಹಿಸಲಿಲ್ಲ ಎಂದು ಶಿಕ್ಷಕರನ್ನು ಅಮಾನತು ಮಾಡಿ ರಾಜ್ಯದ ಶೈಕ್ಷಣಿಕ ಶಾಲಾ ಪ್ರವಾಸ ಯೋಜನೆಯನ್ನು ರದ್ದುಗೊಳಿಸಲಾಯಿತು! ಇದು ಪರಿಹಾರವೇ?
ಎಂತಹ ದುರವಸ್ಥೆ ನೋಡಿ. ಮುರುಡೇಶ್ವರ, ಗೋಕರ್ಣ, ಕಾರವಾರ, ಮಲ್ಪೆ, ಉಡುಪಿ, ಮಂಗಳೂರುಗಳಲ್ಲಿ ಪ್ರವಾಸಿಗರ ರಕ್ಷಣೆಗಾಗಿ ರಕ್ಷಣಾ ಪಡೆಯಿದೆ. ಪ್ರವಾಸಿಗರ ರಕ್ಷಣೆಗಾಗಿ ತರಬೇತಿ ಪಡೆದ ಯುವಕರಿದ್ದಾರೆ. ನೂರಾರು ಮಂದಿಯನ್ನು ಇವರು ರಕ್ಷಿಸಿದ್ದಾರೆ. ದುರಂತವೆಂದರೆ ಈ ಪಡೆಗಳಿಗೆ ಜೀವ ರಕ್ಷಕ ಕವಚಗಳಿಲ್ಲ. ಬೋಟ್‌ಗಳಿಲ್ಲ. ಸಾಮಾನ್ಯ ಸವಲತ್ತುಗಳೂ ಇಲ್ಲ. ಪಾಪ. ತಮ್ಮ ಕರ್ತವ್ಯವೆಂದು ಚಡ್ಡಿ ಬನಿಯನ್‌ಗಳಲ್ಲೇ ಸಮುದ್ರಕ್ಕೆ ಧುಮುಕಿ ಅಂತೂ ಅಪಾಯಕ್ಕೆ ಸಿಲುಕಿದವರನ್ನು ರಕ್ಷಿಸಿಕೊಂಡು ಬರುತ್ತಿದ್ದಾರೆ. ಶೈಕ್ಷಣಿಕ ಪ್ರವಾಸವನ್ನು ರದ್ದು ಪಡಿಸಿದರೆ ನೆಗಡಿ ಬಂದಾಗ ಮೂಗು ಕತ್ತರಿಸಿದಂತಾಯಿತು.. ಉಳಿದ ಪ್ರವಾಸಿಗರ ರಕ್ಷಣೆಯ ಸ್ಥಿತಿ ಏನು? ಇಷ್ಟು ಕಲ್ಪನೆಯೂ ಸರ್ಕಾರಕ್ಕೆ ಇಲ್ಲವೇ? ಪ್ರವಾಸೋದ್ಯಮ ಇಲಾಖೆ ಹತ್ತಾರು ಸಾರೆ ಅವರ ಅಹವಾಲುಗಳನ್ನು ಆಲಿಸಿದೆ. ಇಂತಹ ದುರಂತಗಳು ನಡೆದಾಗಲೆಲ್ಲ ರಕ್ಷಣಾ ತಂಡಕ್ಕೆ ಸವಲತ್ತು ನೀಡುತ್ತೇವೆ, ತಕ್ಷಣ ಕ್ರಮ ತೆಗೆದುಕೊಳ್ಳುತ್ತೇವೆ ಎನ್ನುತ್ತಾರೆ. ಆದರೆ ಅದೇ ಕೆಂಪು ಪಟ್ಟಿ, ಕರಾಳ ಮುಖ, ಕ್ರೂರ ಮನಸ್ಸುಗಳು… ಕಡತಗಳು ಅತ್ತಿತ್ತ ಅಲೆದಾಡುತ್ತವೆ ಅಷ್ಟೇ!
ಹುಬ್ಬಳ್ಳಿಯಲ್ಲಿ ಎಂಟು ಜೀವಗಳ ಬಲಿ ಪಡೆದ ಮಾಲಾಧಾರಿಗಳ ದುರಂತ ಅತ್ಯಂತ ಭಯಾನಕ. ಅವರನ್ನು ನಾವೇನು ಮಾಲೆ ಹಾಕಿ ಎಂದಿದ್ದೆವಾ, ಪೂಜೆ ಮಾಡಿ ಎಂದಿದ್ದೆವಾ' ಎಂದೆಲ್ಲ ಉಡಾಫೆಯಾಗಿ ಮಾತನಾಡಬಹುದು. ಆದರೆ, ಜನರ ಮನಸ್ಸು, ಅವರ ಭಕ್ತಿ ಭಾವನೆ ಹೇಗೇಗೋ ವ್ಯಕ್ತವಾಗುತ್ತವೆ. ಅದಕ್ಕೆ ತಕ್ಕಂತೆ ಶಾಂತಿ-ನೆಮ್ಮದಿ ದೊರೆಯುವ ನಿರೀಕ್ಷೆಯಲ್ಲಿ ಜನಸಾಮಾನ್ಯರಿದ್ದಾರೆ. ಉಳ್ಳವರು, ಮೇಲ್ವರ್ಗದವರು ದೇವಸ್ಥಾನ ಕಟ್ಟಿ, ಲಕ್ಷಾಂತರ ವೆಚ್ಚ ಮಾಡಿ ಪೂಜೆ-ಪುನಸ್ಕಾರ-ಬಲಿ-ಹರಕೆ ತೀರಿಸಬಹುದು. ಜನ ಸಾಮಾನ್ಯರಿಗೆ ಇರುವುದು ಅಯ್ಯಪ್ಪ, ಹುಲಿಯಮ್ಮ, ಹನುಮಾನ್, ದುರ್ಗಮ್ಮನಂಥವರ ಪೂಜೆ-ಆರಾಧನೆಗಳೇ. ನಿಷ್ಠೆಯಿಂದ ಮಾಲೆ ಹಾಕಿಕೊಂಡು ಅಯ್ಯಪ್ಪ ಭಕ್ತರು ಎರಡು ತಿಂಗಳು ನಿಯಮ ಆಚರಿಸುವುದು ಇದೇ ಕಾರಣಕ್ಕೇ. ಎಲ್ಲ ವ್ರತಾಚರಣೆಗಳನ್ನೂ ಮಾಡುತ್ತಾರೆ. ಅಂತಹ ಲಕ್ಷಾಂತರ ಮಂದಿ ಅಯ್ಯಪ್ಪ ಮಾಲಾಧಾರಿಗಳು ರಾಜ್ಯದಲ್ಲಿದ್ದಾರೆ. ಇಂಥವರ ಆರೋಗ್ಯ ತಪಾಸಣೆ ನಡೆಸುವ ಒಂದು ಸಾಮಾನ್ಯ ಕೆಲಸವನ್ನು ಸರ್ಕಾರವನ್ನು ಮಾಡಿಸಿ, ಅವರಿಗಾಗಿ ಸೌಲಭ್ಯ, ಯೋಜನೆ ರೂಪಿಸಿದರೆ ಇಂತಹ ಹತ್ತಾರು ದುರಂತಗಳನ್ನು ತಡೆಯಬಹುದು. ಸರ್ಕಾರಕ್ಕೆ ಏಕೆ ಬೇಕು ಈ ರೀತಿಯ ಪೂಜೆ ಪುನಸ್ಕಾರಗಳಿಗೆ ಸೌಲಭ್ಯ ಕಲ್ಪಿಸುವುದು ಎನ್ನುವ ನಿಷ್ಕಾಳಜಿ ಮತ್ತು ಉಡಾಫೆ ಮಾತು ಬೇಕಿಲ್ಲ. ಏಕೆಂದರೆ ಮುಜರಾಯಿ ಇಲಾಖೆಯ ಕಾರ್ಯವ್ಯಾಪ್ತಿಯಲ್ಲಿ ಪ್ರತಿ ಭಕ್ತಂಗಣ ಇದ್ದೇ ಇರುತ್ತದೆ. ಅಲ್ಲದೇ ಸರ್ಕಾರವಿರುವುದೇ ಜನತೆಯ ಕಲ್ಯಾಣಕ್ಕಾಗಿ. ಅಯ್ಯಪ್ಪ ಮಾಲಾಧಾರಿಗಳಿರಲಿ ಅಥವಾ ಇತರ ವ್ರತಾಚರಣೆ ಮಾಡುವವರೇ ಆಗಿರಲಿ. ಅವರೆಲ್ಲ ಬಡ ಜನಸಾಮಾನ್ಯರು. ತಮ್ಮ ಇತಿಮಿತಿಗಳೊಂದಿಗೆ ಭಕ್ತಿ ಭಾವದೊಂದಿಗೆ ಬದುಕುವವರು. ಇಷ್ಟಕ್ಕೂ ರಾಜ್ಯದಲ್ಲಿ ಕನಿಷ್ಠ ಒಂದು ಲಕ್ಷ ಜನ ಅಯ್ಯಪ್ಪ ಮಾಲಾಧಾರಿಗಳಿದ್ದರೆ, ಅವರ ಯೋಗಕ್ಷೇಮದ ಜವಾಬ್ದಾರಿ ಸರ್ಕಾರದ್ದಾಗಿದೆ. ಅಯ್ಯಪ್ಪ ಮಾಲಾಧಾರಿಗಳಿಂದ ಬರುವ ತೆರಿಗೆ, ಆದಾಯವನ್ನು ಲೆಕ್ಕ ಹಾಕಿ. ಇದರ ಕನಿಷ್ಠ ಶೇ. ೨೫ರಷ್ಟು ಭಾಗವನ್ನು ಇವರಿಗೆ ಸೌಲಭ್ಯಕ್ಕಾಗಿ ವ್ಯಯಿಸಲು ಆಗುವುದಿಲ್ಲವೇ? ಗುಡಿ-ಗುಂಡಾರ, ಇಗರ್ಜಿ-ಮಸೀದಿ, ಮಠ-ಮಾನ್ಯಗಳಿಗೆ ಉದಾರವಾಗಿ ಅನುದಾನ ನೀಡುವ ಸರ್ಕಾರ, ಅಯ್ಯಪ್ಪ ಮಾಲಾಧಾರಿಗಳ ಆರೋಗ್ಯ ಮತ್ತು ಸುರಕ್ಷೆಗೆ ಸೌಲಭ್ಯ ಕಲ್ಪಿಸುವುದು ತಪ್ಪಲ್ಲ. ಇದು ಕನಿಷ್ಠ ನಿರೀಕ್ಷೆ ಕೂಡ಼. ಬಾಣಂತಿಯರ ಸಾವು ಇಡೀ ರಾಜ್ಯವನ್ನು ತಲ್ಲಣಗೊಳಿಸಿದೆ. ಆರೋಗ್ಯ ವ್ಯವಸ್ಥೆಯ ಬಗ್ಗೆ ಆತಂಕ ಉಂಟು ಮಾಡಿದೆ. ಅದರೊಟ್ಟಿಗೆ ಔಷಧಿ, ಶಸ್ತ್ರಚಿಕಿತ್ಸಾ ಉಪಕರಣಗಳು, ಪ್ರಯೋಗಾಲಯಗಳು, ಎಲ್ಲವುಗಳ ಮೇಲೆವ್ಯವಹಾರ’ದ ಕರಿನೆರಳು ಗೋಚರಿಸಿದೆ. ಕಳಪೆ ಔಷಧಿ ಪೂರೈಸಿದ ಕಂಪನಿಗಳ ಮೇಲೆ ಕ್ರಮ ಕೈಗಳ್ಳಲಾಗದ ದುರ್ಬಲ ಕಾನೂನು, ಮೆಡಿಕಲ್ ಲಾಬಿ, ಖಾಸಗಿ ಆಸ್ಪತ್ರೆಗಳ ಲಾಬಿ ಎಲ್ಲವೂ ಸೇರಿ ಬಡ ತಾಯಂದಿರ ಜೀವವನ್ನು ಪಡೆದುಕೊಂಡಿರುವುದು ಭ್ರಷ್ಟ ವ್ಯವಸ್ಥೆಯ ಕನ್ನಡಿ.
ಖಾಸಗಿ ಆಸ್ಪತ್ರೆಗಳು ಕೋಟ್ಯಂತರ ರೂಪಾಯಿ ಲಾಭಗಳಿಸಿ ಸರ್ಕಾರದ ಸೌಲಭ್ಯ ಪಡೆಯುತ್ತಿದ್ದರೆ, ಸರ್ಕಾರಿ ಆಸ್ಪತ್ರೆಗಳು ಜನರ ಜೀವ ತೆಗೆಯುವ ತಾಣಗಳಾಗಿ ಮಾರ್ಪಟ್ಟಿರುವುದು ಭಯಾನಕ ದೃಶ್ಯ. ಈ ನಡುವೆ, ಕೇಂದ್ರ ರಾಜ್ಯ ಸರ್ಕಾರಗಳ ಆರೋಗ್ಯ ವಿಮೆ, ಆಯುಷ್ಮಾನ, ಉಚಿತ ಚಿಕಿತ್ಸೆ, ಬಿಪಿಎಲ್ ಕಾರ್ಡ್ ಯೋಜನೆ ಎಲ್ಲವೂ ಯಾವ ಬಡ ಕುಟುಂಬಗಳಿಗೂ ಸಿಕ್ಕಿಲ್ಲ ಎನ್ನುವುದು ಸ್ಪಷ್ಟವಾದಂತಾಗಿದೆ!
ಮಂಗಳವಾರದ ಹೊಸ ವರ್ಷದ ಸಂಭ್ರಮದಲ್ಲಿರುವ ದಿನ ಬೆಳಗಾವಿಯಲ್ಲೊಂದು ಕರಾಳ ಘಟನೆ ಜರುಗಿತು. ಹತ್ತೊಂಬತ್ತರ ಹರೆಯದ ಚೊಚ್ಚಲು ಮಗು ನಿರೀಕ್ಷೆಯಲ್ಲಿದ್ದ ತಾಯಿಯೊಬ್ಬಳು, ಪ್ರಸಿದ್ಧ ಖಾಸಗಿ ಆಸ್ಪತ್ರೆಗೆ ಹೋದರೆ ಹಣ ಇಲ್ಲ ಎಂಬ ಕಾರಣಕ್ಕೆ ಮರಳಿಸಿದರು. ಪಾಪ. ಬೆಳಗಾವಿ ವೈದ್ಯಕೀಯ ಕಾಲೇಜಿಗೆ ಹೋದರೆ `ವೈದ್ಯರು ಮತ್ತು ಔಷಧಿ ಇಲ್ಲ’ ಎಂದು ಹುಬ್ಬಳ್ಳಿ ಕೆಎಂಸಿಗೆ ಕಳಿಸಿದರು. ಹುಬ್ಬಳ್ಳಿ ತಲುಪುವಷ್ಟರಲ್ಲಿ ಮಹಿಳೆಯ ನಾಡಿ-ಹೃದಯ ನಿಂತು ಹೋಯಿತು. ಹೆಂಡತಿ ಸತ್ತ ಸುದ್ದಿ ಕೇಳಿ ಗಂಡ ಆತ್ಮಹತ್ಯೆಗೆ ಯತ್ನಿಸಿದ!.
ಹೇಗಿದೆ ನೋಡಿ ಖಾಸಗಿ ಆಸ್ಪತ್ರೆಗಳ ದುಡ್ಡಿನ ಮದ? ಅದೇ ವೇಳೆ ನಮ್ಮ ಸರ್ಕಾರಿ ಆಸ್ಪತ್ರೆಗಳ ದುರವಸ್ಥೆ? ನಮ್ಮ ಆರೋಗ್ಯ ಇಲಾಖೆ ಸ್ಥಿತಿ ಇದು!
ನಿಜ. ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಸಿಸೇರಿಯನ್ ದೊಡ್ಡ ದಂಧೆಯಾಗಿದೆ. ಸರ್ಕಾರಿ ಅಂಕಿ ಸಂಖ್ಯೆಯೇ ಹೇಳುವಂತೆ ಖಾಸಗಿಯಲ್ಲಿ ಸಿಸೇರಿಯನ್ ಪ್ರಮಾಣ ಶೇ. ೬೦ಕ್ಕೂ ಹೆಚ್ಚು. ಅದೇ ಸರ್ಕಾರಿ ಆಸ್ಪತ್ರೆಯಲ್ಲಿ ಶೇ. ೭೦ರಷ್ಟು ಸಹಜ ಹೆರಿಗೆಯಾಗುತ್ತಿವೆ. ಇದು ಖಾಸಗಿಯವರ ಇನ್ನೊಂದು ಮುಖ. ಆದರೆ ಸರ್ಕಾರಕ್ಕೆ ಕಾಳಜಿ-ಕಳಕಳಿ ಇರಬೇಕಾದದ್ದು ಸರ್ಕಾರಿ ಆಸ್ಪತ್ರೆಗಳ ಬಲವರ್ದನೆ ಮತ್ತು ಅಲ್ಲಿಗೆ ಬರುವ ಬಡ ರೋಗಿಗಳ ಬಗ್ಗೆ.
ಮನುಷ್ಯತ್ವ ಸತ್ತು ಹೋಗಿರುವ ಈ ಸನ್ನಿವೇಶದಲ್ಲಿ ಆಳುವ ಪ್ರಭುಗಳು ಮತ್ತು ಸರ್ಕಾರ ಕೂಡ ನಿಷ್ಕರುಣಿಯಾದರೆ ಇಂತಹ ಸಾವು ನೋವು ಸಂಭವಿಸುತ್ತವೆ. ಬದುಕಿನ ರಕ್ಷಣೆ ಇಲ್ಲದ ಜನಸಾಮಾನ್ಯರ ಬಾಳು ಅರಾಜಕತೆಯಾದೀತಲ್ಲವೇ?
ಕೊನೆಯದಾಗಿ, ಮುಂಡಗೋಡಿನ ಮಯೂರಿ ಸಾವಿನ ಘಟನೆಯಿಂದ ಹಿಡಿದು ಬಾಣಂತಿಯರ ಸಾವಿನವರೆಗೂ ಕಂಡದ್ದು-ಅನುಭವಿಸಿದ್ದು, ಸಾವನ್ನಪ್ಪಿದವರೆಲ್ಲರೂ ದಿನದ ತುತ್ತಿನ ಚೀಲ ತುಂಬಿಕೊಳ್ಳಲು, ನಿತ್ಯವೂ ರಟ್ಟೆ ಕಸುವು ಹಾಕಲೇಬೇಕಾದಂಥ ಬಡವರು-ಶ್ರಮಿಕರು. ಅಂದರೆ ಬಡವರ ಜೀವ ಎಷ್ಟು ಅಗ್ಗವಾಗಿದೆ ನೋಡಿ…!?

Previous articleರಿಯಾಯಿತಿ ದರಗಳಲ್ಲಿ ಕನ್ನಡ ಪುಸ್ತಕಗಳ ಮಾರಾಟ
Next articleಉಪನ್ಯಾಸಕರಿಲ್ಲದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು