ಕೋಲಾರ: ಮಾಜಿ ಸ್ಪೀಕರ್ ರಮೇಶ್‌ಕುಮಾರ್‌ಗೆ ಸೇರಿದ ಶ್ರೀನಿವಾಸಪುರ ತಾಲ್ಲೂಕು ಅಡ್ಡಗಲ್ ಸಮೀಪದ ಜಿನಗಲಕುಂಟೆ ಅರಣ್ಯ ಪ್ರದೇಶದ ಹೊಸಹುಡ್ಯ ಸ.ನಂ ೧ ಮತ್ತು ೨ರ ಅರಣ್ಯ ಜಮೀನು ಒತ್ತುವರಿ ಸರ್ವೆ ವಿಚಾರದಲ್ಲಿ ಮಂಗಳವಾರ ರಾಜ್ಯ ಹೈಕೋರ್ಟ್ ಜನವರಿ ೧೫ರ ಡೆಡ್‌ಲೈನ್ ನೀಡಿದೆ.
ಸದರಿ ಜಮೀನಿನ ಜಂಟಿ ಸರ್ವೆ ವಿಚಾರದಲ್ಲಿ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಡಿಸೆಂಬರ್ ೭, ೧೯ ಮತ್ತು ೨೬ರಂದು ಹೊರಡಿಸಿದ್ದ ಆದೇಶಗಳ ಸಿಂಧುತ್ವ ಪ್ರಶ್ನಿಸಿ ವಕೀಲ ಕುಂದಿಟಿವಾರಿಪಲ್ಲಿ ಶಿವಾರೆಡ್ಡಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರು ಜನವರಿ ೧೫ರಂದು ಜಮೀನಿನ ಜಂಟಿ ಸರ್ವೆ ನಡೆಸಬೇಕು ಮತ್ತು ಜನವರಿ ೩೦ರೊಳಗೆ ಅದನ್ನು ಹೈಕೋರ್ಟ್‌ಗೆ ಸಲ್ಲಿಸಬೇಕು ಎಂದು ಕಟ್ಟಪ್ಪಣೆ ಮಾಡಿ ವಿಚಾರಣೆಯ ಮುಂದಿನ ದಿನಾಂಕವನ್ನು ಫೆಬ್ರವರಿ ೬ಕ್ಕೆ ಮುಂದೂಡಿದೆ.
ನಮ್ಮ ಭೂಮಿ ಒತ್ತುವರಿ ಆಗಿದೆ ಎಂದು ಅರಣ್ಯ ಇಲಾಖೆ ೨೦೧೦ರಲ್ಲಿ ನೀಡಿದ್ದ ನೋಟೀಸಿನ ವಿರುದ್ಧ ರಮೇಶ್‌ಕುಮಾರ್ ಸಲ್ಲಿಸಿದ್ದ ಅರ್ಜಿಯ ಆಧಾರದ ಮೇಲೆ ನ್ಯಾಯಾಲಯವು ೨೦೧೪ರಲ್ಲಿ ಆದೇಶ ಹೊರಡಿಸಿ ರಮೇಶ್‌ಕುಮಾರ್ ಉಪಸ್ಥಿತಿಯಲ್ಲೇ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಭೂದಾಖಲೆಗಳ ಇಲಾಖೆ ಉಪನಿರ್ದೇಶಕರು ಜಂಟಿ ಸರ್ವೆ ನಡೆಸಿ ವರದಿ ಸಲ್ಲಿಸುವಂತೆ ಆದೇಶಿಸಿತ್ತು.
ಈ ಪ್ರಕಾರ ಡಿಎಫ್‌ಒ ಏಡುಕೊಂಡಲು ನವೆಂಬರ್ ೭ರಂದು ಜಂಟಿ ಸರ್ವೆಗೆ ಮೊದಲ ದಿನಾಂಕ ಗೊತ್ತು ಮಾಡಿದ್ದರು. ಅದರ ಹಿಂದಿನ ದಿನ ಭೂದಾಖಲೆಗಳ ಉಪನಿರ್ದೇಶಕರು ತಾಂತ್ರಿಕ ಸಮಸ್ಯೆ ಮುಂದೊಡ್ಡಿ ಜಂಟಿ ಸರ್ವೆ ನಡೆಸಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಇದಾದ ನಂತರ ಡಿ೨೦ರಂದು ಮತ್ತೊಮ್ಮೆ ಜಂಟಿ ಸರ್ವೆಗೆ ಡಿಎಫ್‌ಒ ದಿನಾಂಕ ನಿಗಧಿಪಡಿಸಿದ್ದರು. ಆದರೆ ಡಿ.೧೭ರಂದು ಆದೇಶ ಹೊರಡಿಸಿದ ಕಂದಾಯ ಇಲಾಖೆ ಬೆಂಗಳೂರು ವಿಭಾಗದ ಪ್ರಾದೇಶಿಕ ಆಯುಕ್ತರು ಈ ರೀತಿಯ ಸರ್ವೆಗೆ ನೋಟೀಸು ಹೊರಡಿಸುವ ಅಧಿಕಾರ ಡಿಎಫ್‌ಒಗೆ ಇಲ್ಲ. ಹಾಗಾಗಿ ಕಂದಾಯ ಇಲಾಖೆಯ ಯಾವುದೇ ಸಿಬ್ಬಂದಿ ಭಾಗವಹಿಸಬಾರದು ಎಂದು ಸೂಚಿಸಿದ್ದರು.
ಅಲ್ಲದೇ ಜಂಟಿ ಸರ್ವೆ ನಡೆಸಲು ಕೋಲಾರ ಉಪವಿಭಾಗಾಧಿಕಾರಿ, ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ ಹಾಗೂ ಭೂದಾಖಲೆಗಳ ಉಪನಿರ್ದೇಶಕರ ಹೊಸ ಸಮಿತಿ ರಚಿಸಿ ಈ ಮೂವರು ನಡೆಸಿದ ಜಂಟಿ ಸರ್ವೆ ವರದಿಯನ್ನು ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆ ಉಪಸಂರಕ್ಷಣಾಧಿಕಾರಿ ಪರಿಶೀಲಿಸಿ ಸಲ್ಲಿಸುವಂತೆ ಸೂಚಿಸಿದ್ದರು.
ಕಳೆದ ವಾರ ಮತ್ತೊಂದು ಆದೇಶ ಹೊರಡಿಸಿ ಜಂಟಿ ಸರ್ವೆಯನ್ನು ಜಿಲ್ಲಾ ಅರಣ್ಯ ಉಪಸಂರಕ್ಷಣಾಧಿಕಾರಿ, ಜಿಲ್ಲಾಧಿಕಾರಿ ಹಾಗೂ ಭೂದಾಖಲೆಗಳ ಉಪನಿರ್ದೇಶಕರೇ ಜನವರಿ ೧೫ರಂದು ನಡೆಸುವಂತೆ ಪ್ರಾದೇಶಿಕ ಆಯುಕ್ತರು ತಿಳಿಸಿದ್ದರು.
ಆರ್‌ಸಿಎಸ್ ಹೊರಡಿಸಿರುವ ಆದೇಶಗಳು ಹೈಕೋರ್ಟ್ ತೀರ್ಪಿನ ಉಲ್ಲಂಘನೆ ಆಗಿದೆ ಮತ್ತು ಅರ್ಜಿದಾರ ರಮೇಶ್‌ಕುಮಾರ್ ಸಹ ಪದೇಪದೇ ಜಂಟಿ ಸರ್ವೆಗೆ ಬಾರದೇ ದೂರ ಉಳಿಯುತ್ತಿದ್ದಾರೆ ಎಂದು ವಕೀಲ ಕೆ.ವಿ.ಶಿವಾರೆಡ್ಡಿ ಹೈಕೋರ್ಟ್‌ಗೆ ದೂರು ಸಲ್ಲಿಸಿದ್ದರು.
ಮಂಗಳವಾರ ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಎರಡೂ ಕಡೆಯ ವಾದ ಆಲಿಸಿದರು. ಹೈಕೋರ್ಟ್ ನಿರ್ದೇಶನ ನೀಡಿ ೧೪ ವರ್ಷ ಕಳೆದರೂ ಇದುವರೆಗೆ ಜಂಟಿ ಸರ್ವೆ ಕಾರ್ಯ ಆಗದೇ ಇರುವುದು ಸೋಜಿಗದ ಸಂಗತಿ. ಅಲ್ಲದೇ ಇದೇ ಪ್ರಕರಣದಲ್ಲಿ ತಮಗೆ ಅಧಿಕಾರ ಇಲ್ಲದಿದ್ದರೂ ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಆದೇಶ ಹೊರಡಿಸಿರುವುದು ಅಸಿಂಧು ಎಂದು ಅಭಿಪ್ರಾಯಪಟ್ಟರು.
ಪ್ರಾದೇಶಿಕ ಆಯುಕ್ತರ ಆದೇಶಗಳನ್ನೆಲ್ಲ ರದ್ದು ಮಾಡಿದ ನ್ಯಾಯಾಲಯವು ಜನವರಿ ೧೫ರಂದು ಜಂಟಿ ಸರ್ವೆಯನ್ನು ೨೦೧೪ರಲ್ಲಿ ಹೈಕೋರ್ಟ್ ನೀಡಿದ್ದ ನಿರ್ದೇಶನದಂತೆಯೇ ನಡೆಸಬೇಕು. ಅಂದು ಮೂಲ ಅರ್ಜಿದಾರ ರಮೇಶ್‌ಕುಮಾರ್ ಹಾಜರಿರುವಂತೆ ಜಿಲ್ಲಾಧಿಕಾರಿಗಳು ನೋಟೀಸು ನೀಡಿ ಖಚಿತಪಡಿಸಿಕೊಳ್ಳಬೇಕು ಎಂದು ಸೂಚಿಸಿದೆ.
ಜನವರಿ ೧೫ರಂದು ನಡೆಯುವ ಜಂಟಿ ಸರ್ವೆಯಲ್ಲಿ ರಮೇಶ್‌ಕುಮಾರ್ ಅಥವಾ ಅವರ ಪ್ರತಿನಿಧಿ ಹಾಜರಾಗಬೇಕು. ಅವರು ಹಾಜರಾಗದಿದ್ದರೂ ಕಡ್ಡಾಯವಾಗಿ ಜಂಟಿ ಸರ್ವೆಯನ್ನು ಅರಣ್ಯ ಇಲಾಖೆ ಡಿಎಫ್‌ಒ, ಜಿಲ್ಲಾಧಿಕಾರಿ ಹಾಗೂ ಭೂದಾಖಲೆಗಳ ಇಲಾಖೆ ಉಪನಿರ್ದೇಶಕರು ನಡೆಸಿ ಜನವರಿ ೩೦ರೊಳಗೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ನ್ಯಾಯಾಲಯವು ತಿಳಿಸಿತು.
ಜಂಟಿ ಸರ್ವೆ ವೇಳೆ ರಮೇಶ್‌ಕುಮಾರ್ ಅಥವಾ ಅವರ ಪ್ರತಿನಿಧಿ ಹಾಜರಾಗದೇ ಇದ್ದಲ್ಲಿ ಅಧಿಕಾರಿಗಳು ನೀಡುವ ಜಂಟಿ ಸರ್ವೆ ವರದಿ ಕುರಿತು ತಕರಾರು ಸಲ್ಲಿಸಲು ಭವಿಷ್ಯದಲ್ಲಿ ಅವಕಾಶ ಇರುವುದಿಲ್ಲ ಎಂಬ ಕಟ್ಟಪ್ಪಣೆಯನ್ನೂ ನ್ಯಾಯಾಧೀಶರು ನೀಡಿದ್ದಾರೆ.
ಹಾಗಾಗಿ ಜಂಟಿ ಸರ್ವೆ ಕಾರ್ಯ ಜನವರಿ ೧೫ರಂದು ೨೦೧೪ರ ಹೈಕೋರ್ಟಿನ ಆದೇಶದ ಪ್ರಕಾರವೇ ನಡೆಯುವುದು ನಿಶ್ಚಿತ ಎಂಬಂತಾಗಿದೆ.