ಕಾರವಾರ: ಜಾತೀಯತೆಯ ಮೇಲೆ ಚುನಾವಣೆ ಮಾಡುವ ಬಿಜೆಪಿಗೆ ಕಣ್ಣು, ಕಿವಿ ಹೃದಯವೇ ಇಲ್ಲ. ಆದರೆ ಕಾಂಗ್ರೆಸ್‌ಗೆ ಎಲ್ಲ ಸಮುದಾಯಗಳೂ ಒಂದೇ. ಮಾನವೀಯತೆ ನೆಲೆಯಲ್ಲಿ ನಮ್ಮ ಪಕ್ಷ ನಿಂತಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.
ಕುಮಟಾದಲ್ಲಿ ಹಮ್ಮಿಕೊಂಡಿದ್ದ ಜನಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅವರು, ಆಪರೇಷನ್ ಕಮಲ ಮಾಡಿ ಬಿಜೆಪಿ ಹೇಗೋ ಸರ್ಕಾರವನ್ನು ಅಧಿಕಾರಕ್ಕೆ ತಂದಿದೆ. ನಮ್ಮದು ಡಬಲ್ ಎಂಜಿನ್ ಸರ್ಕಾರ ಎಂದು ಹೇಳಿಕೊಳ್ಳುತ್ತಾರೆ. ಆದರೆ ಜನರು ನೆಮ್ಮದಿಯಿಂದ ಬದುಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿದೆ. ಜನರಿಗೆ ಉದ್ಯೋಗ ಇಲ್ಲದೇ ಬೇರೆ ಬೇರೆ ಕಡೆ ವಲಸೆ ಹೋಗುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ನಿಮ್ಮ ಆದಾಯ ಡಬಲ್ ಮಾಡುತ್ತೇನೆ ಎಂದು ರೈತರಿಗೆ ಭರವಸೆ ನೀಡಿದ್ದರು. ಎಲ್ಲರ ಖಾತೆಗಳಿಗೆ ೧೫ ಲಕ್ಷ ಹಣ ಹಾಕುತ್ತೇವೆ ಎಂದಿದ್ದರು. ಆದರೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರಾ ಎಂದು ಬಿಜೆಪಿಯವರು ನೋಡಿಕೊಳ್ಳಲಿ ಎಂದು ಟೀಕಿಸಿದ್ದಾರೆ.


























