ಚಿತ್ರದುರ್ಗ: ಎಐಸಿಸಿ ಅಧ್ಯಕ್ಷ, ನಾಲ್ಕು ಬಾರಿ ಸಿಎಂ ಪದವಿ ಜತೆಗೆ ಕರ್ನಾಟಕ ಏಕೀಕರಣದ ರುವಾರಿ ಹೆಗ್ಗಳಿಕೆ ಹೊಂದಿರುವ ಎಸ್.ನಿಜಲಿಂಗಪ್ಪ ಅವರ ಮನೆ ಸರ್ಕಾರದ ವಶಕ್ಕೆ ಒಪ್ಪಿಸುವ ಹಗ್ಗಜಗ್ಗಾಟಕ್ಕೆ ಗುರುವಾರ ತೆರೆಬಿದ್ದಿದೆ.
ಎಸ್ಸೆನ್ ಪುತ್ರ ಕಿರಣ್‌ಶಂಕರ್, ರಾಜ್ಯ ಸರ್ಕಾರಕ್ಕೆ ಮಾರಾಟ ಮಾಡುವ ನೋಂದಣಿ ಕಾರ್ಯವನ್ನು ಉಪ ನೋಂದಣಿ ಕಚೇರಿಯಲ್ಲಿ ಗುರುವಾರ ಮಧ್ಯಾಹ್ನ ಅಧಿಕಾರಿ ತಿಪ್ಪೇರುದ್ರಪ್ಪ ಸಮ್ಮುಖದಲ್ಲಿ ನಡೆಸಿದರು. ಸರ್ಕಾರದ ಪರವಾಗಿ ತಹಸೀಲ್ದಾರ್ ನಾಗವೇಣಿ ಹಾಜರಿದ್ದು ಪ್ರಕ್ರಿಯೆ ಪೂರ್ಣಗೊಳಿಸಿದರು. ಈ ಮೂಲಕ ೧೪ ವರ್ಷಗಳ ಗಜಪ್ರಸವಕ್ಕೆ ತೆರೆ ಎಳೆಯಲಾಯಿತು. ತನ್ನ ಹೆಸರಿಗೆ ತಾತಾ ನಿಜಲಿಂಗಪ್ಪ ವಿಲ್ ಬರೆದಿದ್ದರಿಂದ ವಿನಯ್, ವಿದೇಶದಿಂದ ಪದೇ ಪದೆ ರಾಜ್ಯಕ್ಕೆ ಬರಲು ಸಾಧ್ಯವಾಗುವುದಿಲ್ಲವೆಂಬ ಕಾರಣಕ್ಕೆ ಮಾರಾಟದ (ಜಿಪಿಎ) ಹಕ್ಕನ್ನು ತನ್ನ ತಂದೆ ಕಿರಣ್‌ಶಂಕರ್ ಅವರಿಗೆ ನೀಡಿದ್ದರು. ಮಗನ ಪರವಾಗಿ ಸರ್ಕಾರಕ್ಕೆ ಮನೆ ಮಾರಾಟ ಪ್ರಕ್ರಿಯೆ ಯನ್ನು ಮುಗಿಸುವ ಮೂಲಕ ನಿರುಮ್ಮಳಗೊಂಡರು.