ಪಂಚಮಸಾಲಿ ಹೋರಾಟದಲ್ಲಿ ರಾಜಕೀಯ

0
23

ಬೆಳಗಾವಿ: ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಬಿಜೆಪಿ ನಾಯಕರು ವಿನಾಕಾರಣ ರಾಜಕೀಯ ಮಾಡುತ್ತಿದ್ದಾರೆ. ಮಾತುಕತೆಗೆ ಮುಖ್ಯಮಂತ್ರಿಗಳು ಮುಖಂಡರುಗಳನ್ನು ಕರೆತರುವಂತೆ ನನಗೇ ಸೂಚಿಸಿದ್ದರು. ಸಿ.ಸಿ. ಪಾಟೀಲ್ ಸೇರಿದಂತೆ ಹಲವು ನಾಯಕರಿಗೆ ನಾನೇ ಖುದ್ದು ಕರೆ ಮಾಡಿದರೂ ಯಾರು ಸಭೆಗೆ ಬರಲಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳಕರ್ ಆರೋಪಿಸಿದರು.
ಪಂಚಮಸಾಲಿ ಮೀಸಲಾತಿ ವಿಚಾರವಾಗಿ ಮಂಗಳವಾರದ ಪ್ರತಿಭಟನೆ ತೀವ್ರ ಸ್ವರೂಪ ಪಡೆದ ಕುರಿತು ಬೆಳಗಾವಿಯಲ್ಲಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮೀಸಲಾತಿ ಹೋರಾಟ ರಾಜಕೀಯ ಆಗುತ್ತಿದೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ ಅಂತ ಬರಬಾರದು ಎಂದರು. ಮೀಸಲಾತಿ ವಿಚಾರವಾಗಿ ಬಿಜೆಪಿಯವರಿಗೆ ಈ ಪ್ರೀತಿ ಮೊದಲೇ ಯಾಕಿರಲಿಲ್ಲ. ಅವರ ಸರ್ಕಾರ ಇದ್ದಾಗ ೨ಎ ಮೀಸಲಾತಿಯನ್ನು ಯಾಕೆ ಕೊಡಲಿಲ್ಲ. ಆಗ ಮೀಸಲಾತಿ ಕೊಡದೇ ಮೂಗಿಗೆ ತುಪ್ಪ ಸವರುವ ಕೆಲಸ ಮಾಡಿದರು ಎಂದು ಸಚಿವರು ಕಿಡಿಕಾರಿದರು.
ಕಾನೂನನ್ನು ಯಾರೂ ಕೈಗೆತ್ತಿಕೊಳ್ಳಬಾರದು. ಮಾತುಕತೆಗೆ ಮುಖ್ಯಮಂತ್ರಿಗಳು ಸಮಯ ಕೊಟ್ಟಿದ್ದರು. ನಾನೇ ಫೋನ್ ಮಾಡಿದ್ದಲ್ಲದೆ ಸ್ವತಃ ಹೋಗಿ ಕರೆದು ಬಂದಿದ್ದೆ. ಸಮಾಜದ ೧೦ ಜನ ಮುಖಂಡರನ್ನು ಕರೆದುಕೊಂಡು ಬರಲು ಸಿಎಂ ಸೂಚಿಸಿದ್ದರು. ಈ ಸಂಬಂಧ ಸಿ.ಸಿ. ಪಾಟೀಲ್ ಅವರಿಗೆ ನಾನೇ ಫೋನ್ ಮಾಡಿ ಕರೆದೆ. ಅವರು ಯಾರೂ ಬರುತ್ತಿಲ್ಲ ಎಂದರು.

Previous articleಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ
Next articleಉದ್ದೇಶಪೂರ್ವಕವಾಗಿ ಲಾಠಿಚಾರ್ಜ್ ಮಾಡ್ತಾರಾ?