ಮಂಡ್ಯ: ೮೭ನೇ ಅಖಿಲ ಕರ್ನಾಟಕ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಸ್ಯಾಹಾರದ ಜೊತೆಗೆ ಮಾಂಸಾಹಾರವು ದೊರೆಯುವಂತಾಗಬೇಕು. ಆ ಮೂಲಕ ಮಂಡ್ಯ ನೆಲದ ಆಹಾರ ಸಂಸ್ಕೃತಿಯನ್ನು ಗೌರವಿಸುವ ಕೆಲಸವನ್ನು ಮಂಡ್ಯ ಜಿಲ್ಲಾಡಳಿತ, ರಾಜ್ಯ ಸರ್ಕಾರ ಹಾಗೂ ಕನ್ನಡ ಸಾಹಿತ್ಯ ಪರಿಷತ್ತು ಗೌರವಿಸಬೇಕು ಎಂದು ವಿವಿಧ ಪ್ರಗತಿಪರ ಸಂಘಟನೆಗಳು ಒಕ್ಕೊರಲ ತೀರ್ಮಾನಕ್ಕೆ ಬಂದಿವೆ.
ಭಾನುವಾರ ಸಂಜೆ ನಗರದ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಕಾವೇರಿ ಉದ್ಯಾನವನದಲ್ಲಿ ಸಭೆ ಸೇರಿದ ಹಲವು ಸಂಘಟನೆಗಳ ಮುಖಂಡರು ಮಾಂಸಾಹಾರ ಬೇಕು ಎಂಬುದು ಕೇವಲ ಆಹಾರಕ್ಕಾಗಿಯಲ್ಲ, ಬಹುಜನರ ಆಹಾರ ಸಂಸ್ಕೃತಿಯನ್ನು ಎತ್ತಿ ಹಿಡಿಯುವುದಕ್ಕಾಗಿ ಎಂಬುದನ್ನು ಸಾಹಿತ್ಯ ಸಮ್ಮೇಳನದ ಸಂಘಟಕರು ಅರ್ಥ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಇದುವರೆಗೆ ನಡೆದ ೮೬ ಸಮ್ಮೇಳನದಲ್ಲಿ ಮಾಂಸಾಹಾರವನ್ನು ನೀಡದೇ ಬಹುಜನರ ಆಹಾರ ಸಂಸ್ಕೃತಿಯನ್ನು ಅವಮಾನಿಸಲಾಗಿದೆ. ಹಾಗಾಗಿ ಮಾಂಸಾಹಾರ ನಿಷೇಧವನ್ನು ವಾಪಸ್ ಪಡೆದು, ಮಾಂಸಾಹಾರ ಆಹಾರ ಸಂಸ್ಕೃತಿಯನ್ನು ಗೌರಿಸಬೇಕೆಂದು ಒತ್ತಾಯಿಸಿದರು. ಮನೆಗೊಂದು ಕೋಳಿ ಸಂಗ್ರಹಿಸಿ ಮಾಂಸದೂಟ: ಸಮ್ಮೇಳನದಲ್ಲಿ ಬಾಡೂಟ ನೀಡದಿದ್ದರೆ, ಮನೆಗೊಂದು ಕೋಳಿ ಸಂಗ್ರಹಿಸಿ ಮಾಂಸದೂಟ ಹಾಕಿಸುತ್ತೇವೆ ಎಂದು ಮಂಡ್ಯದ ಬಾಡೂಟ ಬಳಗದವರು ಎಚ್ಚರಿಕೆ ನೀಡಿದ್ದಾರೆ.