ಹೊನ್ನಾವರ: ಅಣ್ಣನೇ ತಮ್ಮನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ತಾಲೂಕಿನ ಗುಂಡಬಾಳದ ಹೆಬ್ಬೈಲ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ನಾಗೇಶ ಹನುಮಂತ ನಾಯ್ಕ(೪೮) ಕೊಲೆಯಾದ ದುರ್ದೈವಿ. ಸುಬ್ರಾಯ ನಾಯ್ಕ ಕೊಲೆ ಮಾಡಿದ ಆರೋಪಿ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಮೃತ ನಾಗೇಶ ಅವರ ಪತ್ನಿ ಮಂಗಲಾ ನಾಯ್ಕ್ ಅವರು ದೂರು ದಾಖಲಿಸಿದ್ದಾರೆ.
ಕೆಲವು ತಿಂಗಳ ಹಿಂದೆ ನಾಗೇಶ ಹನುಮಂತ ನಾಯ್ಕ ಅವರು ಸಹೋದರ ಸುಬ್ರಾಯ ನಾಯ್ಕಗೆ ಯಾವುದೋ ಕಾರಣಕ್ಕೆ ಹೊಡೆದು ಕಾಲಿಗೆ ತೀವ್ರ ಗಾಯ ಮಾಡಿದ್ದರು. ಅದೇ ಸಿಟ್ಟಿನಲ್ಲಿದ್ದ ಸುಬ್ರಾಯ ನಾಯ್ಕ, ಮಂಗಳವಾರ ರಾತ್ರಿ ಮನೆಯಲ್ಲಿ ಇರುವಾಗ ಜಗಳ ತೆಗೆದು ನಾಗೇಶ್ ಅವರ ಅವರ ಎದೆ, ಹೊಟ್ಟೆ ಹಾಗೂ ಬಲಗಣ್ಣಿನ ಹತ್ತಿರ ಚಾಕುವಿನಿಂದ ಇರಿದು ಗಂಭೀರ ಗಾಯ ಮಾಡಿ ಕೊಲೆ ಮಾಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಆರೋಪಿ ಸುಬ್ರಾಯ ನಾಯ್ಕನನ್ನು ಪೊಲೀಸರು ಬಂಧಿಸಿದ್ದಾರೆ.