ಮುಂಬಯಿ: ಮಾಹಾರಾಷ್ಟ್ರದಲ್ಲಿ ಕುತೂಹಲವಾಗಿ ಉಳಿದಿದ್ದ ಮಾಹಾಯುತಿ ಮೈತ್ರಿಕೂಟದ ನಾಯಕನ ಆಯ್ಕೆ ಕಗ್ಗಂಟು ಬುಧವಾರ ಬಗೆ ಹರಿದಿದ್ದು, ಬಿಜೆಪಿ ಶಾಸಕಾಂಗ ಪಕ್ಷದ ನಾಯಕನನ್ನಾಗಿ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದಲ್ಲಿ ನಡೆದ ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ದೇವೇಂದ್ರ ಫಡ್ನವೀಸ್ ಹೆಸರು ಅಂತಿಮಗೊಳಿಸಲಾಗಿದೆ. ಕೇಂದ್ರದಿಂದ ವೀಕ್ಷಕರಾಗಿ ಬಂದಿದ್ದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಗುಜರಾತ್ ಮಾಜಿ ಸಿಎಂ ವಿಜಯ್ ರೂಪಾನಿ ನೇತೃತ್ವದಲ್ಲಿ ಈ ಸಭೆ ನಡೆಯಿತು. ಶಾಸಕಾಂಗ ಪಕ್ಷದ ಸಭೆಯಲ್ಲಿ ಕೋರ್ ಕಮಿಟಿ ಸಭೆಯ ತೀರ್ಮಾನವನ್ನು ಅಧಿಕೃತವಾಗಿ ಘೋಷಣೆ ಮಾಡಿ ಬಳಿಕ ಮಹಾಯತಿ ಮೈತ್ರಿಕೂಟದ ನಾಯಕರು ರಾಜ್ಯಪಾಲರನ್ನು ಭೇಟಿ ಮಾಡಿ ಹೊಸ ಸರ್ಕಾರ ರಚನೆ ಮಾಡುವ ಹಕ್ಕು ಮಂಡಿಸಲಿದ್ದಾರೆ. ಈ ಮೂಲಕ ನವೆಂಬರ್ 23ರ ಬಳಿಕ ರಾಜ್ಯದ ಮುಖ್ಯಮಂತ್ರಿ ಯಾರು? ಎಂದು ಎದ್ದಿದ್ದ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಏಕನಾಥ್ ಶಿಂಧೆ, ಅಜಿತ್ ಪವಾರ್ ಉಪ ಮುಖ್ಯಮಂತ್ರಿಯಾಗಲಿದ್ದಾರೆ.