ಕಳಪೆ ಬಿತ್ತನೆ ಬೀಜ ಗೊಬ್ಬರಕ್ಕೆ ಶಿಕ್ಷೆ ಎಲ್ಲಿದೆ?

0
28

ರಾಜ್ಯದ ಹಲವೆಡೆ ವಿತರಣೆಯಾಗುತ್ತಿರುವ ಬಿತ್ತನೆ ಬೀಜ ಕಳಪೆ ಗುಣಮಟ್ಟದ್ದಾಗಿರುವುದು ಭಯಾನಕ ಹಾಗೂ ಆಘಾತಕಾರಿ ವಿಷಯವಾಗಿದೆ. ಮಳೆ ಬಂದು ರೈತರು ಬಿತ್ತನೆಗೆ ಕೈಹಾಕಿದ ಕೂಡಲೇ ಅವರನ್ನು ಮೊದಲು ಕಾಡುವುದು ಕಳಪೆ ಬೀಜ ಮತ್ತು ರಸಗೊಬ್ಬರ. ಕೊಪ್ಪಳ ಜಿಲ್ಲೆ ಗಂಗಾವತಿಯಲ್ಲಿರುವ ಸರ್ಕಾರಿ ಬಿತ್ತನೆ ಬೀಜ ಪರೀಕ್ಷಣಾಲಯದಲ್ಲಿ `ಕಳಪೆ ಬೀಜಗಳು’ ಎಷ್ಟಿವೆ ಎಂಬ ಅಂಕಿ-ಅಂಶ ಇಡೀ ರಾಜ್ಯದ ಜನರನ್ನು ಬಡಿದೆಬ್ಬಿಸಿದೆ. ಅಮಾಯಕ ರೈತ ಒಂದು ವರ್ಷದ ದುಡಿಮೆ, ಆದಾಯವನ್ನು ಕಳೆದುಕೊಂಡಿದ್ದಲ್ಲದೇ ಸಾಲ ಸೋಲ ಕೂಡ ಅನುಭವವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಬೀಜ ಮತ್ತು ರಸಗೊಬ್ಬರ ರಕ್ಷಣೆಗೆ ಕಾಯ್ದೆ ರಚಿಸಿ ನಕಲಿ ವಿರುದ್ಧ ಯಾವ ಕ್ರಮವನ್ನೂ ಕೈಗೊಳ್ಳದೆ ಕೈಚೆಲ್ಲಿ ಕುಳಿತಿವೆ. ಹಣ ಕಳೆದುಕೊಂಡ ರೈತ ದಾರಿಕಾಣದೆ ತನ್ನ ಹಣೆಬರಹವನ್ನು ದೂಷಿಸಿಕೊಂಡು ಬದುಕಬೇಕಾಗಿ ಬಂದಿದೆ. ಸಾಲದ ಹೊರೆ ಭರಿಸಲಾಗದೆ ರೈತರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಸಾವೊಂದೇ ಅವರಿಗೆ ಗ್ಯಾರಂಟಿ.
ಉತ್ತರ ಕರ್ನಾಟಕ ಅದರಲ್ಲೂ ಕಲ್ಯಾಣ ಕರ್ನಾಟಕದಲ್ಲಿ ಕಳಪೆ ಬಿತ್ತನೆ ಬೀಜ ಮತ್ತು ಕಳಪೆ ರಸಗೊಬ್ಬರ ಮಾರಾಟ ನಿರಂತರ ನಡೆಯುತ್ತ ಬಂದಿದೆ. ಇದನ್ನು ಹತ್ತಿಕ್ಕಲು ಕೇಂದ್ರ ಮತ್ತು ರಾಜ್ಯ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಬಹುತೇಕ ಕಳಪೆ ಬೀಜ ಮತ್ತು ರಸಗೊಬ್ಬರ ನೆರೆ ರಾಜ್ಯಗಳಿಂದಲೇ ಬರುತ್ತದೆ. ವರ್ತಕರು ಇದನ್ನು ರೈತರಿಗೆ ಮಾರಾಟ ಮಾಡುತ್ತಾರೆ. ಇವುಗಳು ನಕಲಿ ಆಗಿರುವುದರಿಂದ ಇದಕ್ಕೆ ಯಾವುದೇ ರೀತಿಯ ಪ್ರಮಾಣೀಕರಣ ಇರುವುದಿಲ್ಲ. ರೈತರಿಗೆ ಯಾವುದೇ ರೀತಿಯಲ್ಲೂ ವಿಮಾ ಸವಲತ್ತು ಇರುವುದಿಲ್ಲ. ರೈತರು ಸಾಲಸೋಲ ಮಾಡಿ ಬಿತ್ತನೆ ಮಾಡುತ್ತಾರೆ. ಮಳೆ ಮುಂದುವರಿದಂತೆ ರಸಗೊಬ್ಬರ ತಂದು ಹಾಕುತ್ತಾರೆ. ಆದರೆ ನಕಲಿ ಬೀಜ ಮತ್ತು ಗೊಬ್ಬರ ಏನೂ ಕೊಡುವುದಿಲ್ಲ. ಬಡ ರೈತ ಏನು ಮಾಡಬೇಕು. ಇದಕ್ಕೆ ಯಾರು ಹೊಣೆ. ಕಾಯ್ದೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬೇಕಾದಷ್ಟು ಮಾಡಿವೆ. ಆದರೆ ತಪ್ಪಿತಸ್ಥರಿಗೆ ಉಗ್ರ ಶಿಕ್ಷೆ ಆಗಿಲ್ಲ. ಎಲ್ಲ ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ಕಳಪೆ ಬಿತ್ತನೆ ಬೀಜ ಮತ್ತು ರಸಗೊಬ್ಬರ ತಯಾರಾಗುವುದು ಎಲ್ಲಿ ಎಂಬುದು ಗೊತ್ತಿದೆ. ಆ ಕಾರ್ಖಾನೆಗಳನ್ನು ಮುಚ್ಚಿಸಲು ಯಾವ ಸರ್ಕಾರವೂ ಕ್ರಮ ಕೈಗೊಳ್ಳುವುದಿಲ್ಲ. ಪ್ರತಿವರ್ಷ ಸಾವಿರಾರು ಕೋಟಿ ರೂ. ನಷ್ಟವನ್ನು ರೈತರು ಅನುಭವಿಸುತ್ತಿದ್ದರೂ ಯಾರೂ ಕೇಳುವವರೇ ಇಲ್ಲ.
ಕಲ್ಯಾಣ ಕರ್ನಾಟಕದಲ್ಲಿ ರೈತರು ಹೆಚ್ಚಾಗಿ ಹತ್ತಿ, ಬತ್ತ, ಮೆಕ್ಕೆಜೋಳ, ಜೋಳ ಬೆಳೆಯುತ್ತಾರೆ. ಇದಕ್ಕಾಗಿ ಅವರು ಬಳಸುವ ಬಿತ್ತನೆ ಬೀಜ ಎಷ್ಟು ನಕಲಿ-ಎಷ್ಟು ಅಸಲಿ ಎಂದು ಹೇಳುವುದೇ ಕಷ್ಟ. ಇಡೀ ಕಲ್ಯಾಣ ಕರ್ನಾಟಕದಲ್ಲಿ ಸರ್ಕಾರದ ಬೀಜ ಗುಣಮಟ್ಟ ಪರೀಕ್ಷಾ ಪ್ರಯೋಗಾಲಯ ಒಂದೇ ಒಂದು ಇದೆ. ಖಾಸಗಿ ರಂಗದಲ್ಲಿ ಬಹಳ ಕಂಪನಿಗಳು ತಲೆ ಎತ್ತಿವೆ. ಕಾನೂನು ರೀತ್ಯ ಸರ್ಕಾರಿ ಸಂಸ್ಥೆಯ ದಾಖಲೆಗೆ ಮಾತ್ರ ಬೆಲೆ. ಹೀಗಿರುವಾಗ ರೈತರ ರಕ್ಷಣೆಗೆ ಯಾರೂ ಇಲ್ಲ. ಬಹುತೇಕ ನಕಲಿ ಬಿತ್ತನೆ ಬೀಜಗಳು ನೆರೆಯ ಆಂಧ್ರ, ತೆಲಂಗಾಣದಿಂದ ಬರುತ್ತವೆ. ಆ ರಾಜ್ಯದವರು ಕರ್ನಾಟಕದವರನ್ನು ದೂಷಿಸುತ್ತಾರೆ. ಅಂದರೆ ನಕಲಿ ಬಿತ್ತನೆ ಬೀಜ ಎಲ್ಲ ಕಡೆ ತಯಾರಾಗುತ್ತಿದೆ ಎಂಬುದು ಸ್ಪಷ್ಟ. ನಕಲಿ ಬಿತ್ತನೆ ಬೀಜ ತಯಾರಿಸುವ ಕಂಪನಿಗಳಿಗೆ ನೋಟಿಸ್ ನೀಡಿ ನಂತರ ಅವರನ್ನು ಕಪ್ಪುಪಟ್ಟಿಗೆ ಸೇರಿಸುತ್ತೇವೆ ಎಂದು ಕೃಷಿ ಇಲಾಖೆ ಹೇಳುತ್ತದೆ. ಇದರಿಂದ ರೈತರಿಗೆ ಆಗುವ ಲಾಭವೇನು ಎಂಬ ಪ್ರಶ್ನೆಗೆ ಉತ್ತರವಿಲ್ಲ. ಕೃಷಿ ಇಲಾಖೆಗೆ ತಪ್ಪಿತಸ್ಥರನ್ನು ಶಿಕ್ಷಿಸುವ ಅಧಿಕಾರವಿಲ್ಲ. ಅದಕ್ಕೆ ಅವರು ಪೊಲೀಸ್ ಇಲಾಖೆಯನ್ನು ಆಶ್ರಯಿಸಬೇಕು. ರೈತರು ಕಳಪೆ ಬೀಜ ಮತ್ತು ರಸಗೊಬ್ಬರ ಬಾರದಂತೆ ಮಾಡಿ ಎಂದು ಸರ್ಕಾರವನ್ನು ಕೇಳುತ್ತಾರೆಯೇ ಹೊರತು ಬಡಪಾಯಿಗಳನ್ನು ಹಿಡಿದು ಜೈಲಿಗೆ ಹಾಕಿ ಎಂದು ಹೇಳುವುದಿಲ್ಲ. ಎಲ್ಲ ರಾಜ್ಯ ಸರ್ಕಾರಗಳು ಮನಸ್ಸು ಮಾಡಿದರೆ ಕಳಪೆ ಬೀಜ ತಯಾರಿಕೆಯನ್ನು ಒಂದೇ ಬಾರಿ ಇಲ್ಲದಂತೆ ಮಾಡಲು ಅವಕಾಶವಿದೆ. ಕಳಪೆ ಬೀಜ ಮತ್ತು ಗೊಬ್ಬರ ತಯಾರಿಸುವ ಕಾರ್ಖಾನೆಗಳನ್ನು ಆಯಾ ರಾಜ್ಯದವರು ಮುಚ್ಚಿಸಿದರೆ ಸಮಸ್ಯೆ ಇರುವುದಿಲ್ಲ. ಈಗ ಮೆಡಿಕಲ್ ಸ್ಟೋರ್‌ಗಳಲ್ಲಿ ಒಂದೂ ಕಳಪೆ ಔಷಧ ಮಾರಾಟವಾಗುತ್ತಿಲ್ಲ. ಏಕೆ? ಔಷಧ ನಿಯಂತ್ರಣ ಕಾಯ್ದೆ ಬಹಳ ಕಟ್ಟುನಿಟ್ಟಾಗಿ ಜಾರಿಗೆ ಬರುತ್ತದೆ. ಔಷಧ ಅಂಗಡಿಯವರು ಅನಧಿಕೃತವಾಗಿ ಯಾವುದೇ ಔಷಧ ಮಾರಿದರೆ ಜೈಲಿಗೆ ಹೋಗಬೇಕಾಗುತ್ತದೆ. ಅದೇ ನಿಯಮ ಬಿತ್ತನೆ ಬೀಜ ಮತ್ತು ರಸಗೊಬ್ಬರ ಮಾರಾಟ ಮಾಡುವ ವರ್ತಕರಿಗೆ ಏಕೆ ಅನ್ವಯಿಸುವುದಿಲ್ಲ. ಪ್ರಮಾಣೀಕೃತ ಮತ್ತು ಕಾನೂನುಬದ್ಧವಾಗಿ ಬೀಜ ಮತ್ತು ಗೊಬ್ಬರ ಮಾರಾಟ ಮಾಡಬೇಕೆಂಬ ನಿಯಮ ಇದೆ. ಇದನ್ನು ಉಲ್ಲಂಘಿಸಿದವರಿಗೆ ಇರುವುದು ದಂಡ ಮಾತ್ರ. ಆಹಾರ ಮತ್ತು ಔಷಧ ಕಲಬೆರಕೆಗೆ ಇರುವ ಶಿಕ್ಷೆ ಇದಕ್ಕೂ ವಿಧಿಸಬೇಕು. ಸಂಘಟಿತ ಅಪರಾಧಗಳಿಗೆ ವಿಧಿಸುವ ಕಾಯ್ದೆಗಳನ್ನು ಇದಕ್ಕೂ ಅನ್ವಯಿಸಬೇಕು. ಆಗ ರೈತ ನೆಮ್ಮದಿ ಕಾಣಬಹುದು.

Previous articleಎಂಟು ತಿಂಗಳಲ್ಲಿ ೨೮ ಬಾಣಂತಿಯರ ಸಾವು
Next articleಬಾಣಂತಿಯರ ಸಾವಿನ ಹಿಂದೆ ಮೆಡಿಕಲ್ ಮಾಫಿಯಾ