ಅರ್ಜಂಟ್ ಬೇಕಾಗಿದ್ದಾರೆ

0
14

ಅಖಿಲ ಭಾರತ ತಿಗಡೇಸಿ ಪಕ್ಷವು ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಿಕೊಳ್ಳುವ ಸಂಕಲ್ಪ ಮಾಡಿದ್ದು, ದೊಡ್ಡ ಬಾಯಿ ಮಾಡುವ, ಬಾಯಿಗೆ ಬಂದಂತೆ ಬೈಯ್ದಾಡುವ ದೊಡ್ಡ ಮನುಷ್ಯರು ಅರ್ಜಂಟ್ ಬೇಕಾಗಿದ್ದಾರೆ ಎಂಬ ಜಾಹಿರಾತು ಹೊರಡಿಸಿದ್ದು ಮೂಲೆ ಮೂಲೆಗಳಿಂದ ಅರ್ಜಿಗಳು ಬಂದಿವೆ. ಅವುಗಳನ್ನು ಪರಿಶೀಲಿಸುವುದೇ ಆ ಪಕ್ಷಕ್ಕೆ ದೊಡ್ಡ ಸಮಸ್ಯೆಯಾಗಿದೆ. ಅನುಭವ ಇದ್ದವರಿಗೆ ಆದ್ಯತೆ ಎಂದು ತಿಳಿಸಿರುವುದರಿಂದ ಬೇರೆ ಬೇರೆ ಪಕ್ಷದ ಅರ್ಹ ಅಭ್ಯರ್ಥಿಗಳೂ ಸಹ ಅರ್ಜಿ ಸಲ್ಲಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಎಲ್ಲ ಪಕ್ಷಗಳಲ್ಲಿ ಬೈಯ್ದಾಡುವುದು ಹೆಚ್ಚಿಗೆ ಆಗಿದೆ. ಬೈಯ್ದಾಡುವವರು ರಾತ್ರೋ ರಾತ್ರಿ ಹೀರೋ ಆಗುತ್ತಿದ್ದಾರೆ. ಪಕ್ಷದಲ್ಲಿಯೂ ಅವರಿಗೆ ಅಂತಹ ಗೌರವ ಇದೆ. ಬೆಳಗ್ಗೆ ಬಯ್ದಾಡು-ಮರುದಿನ ಹೀರೋ ಆಗು ಎಂಬ ತತ್ವದಡಿಯಲ್ಲಿ ಪಕ್ಷ ಸಾಗುತ್ತಿವೆ. ಇಂತಹ ಸಂದರ್ಭದಲ್ಲಿ ನಮ್ಮ ಪಕ್ಷ ಮೊದಲೇ ಅಂಥವರನ್ನು ಆಯ್ಕೆ ಮಾಡಿ ಇಟ್ಟುಕೊಂಡರೆ ಮುಂದೆ ಯಾವುದೇ ಸಮಸ್ಯೆ ಆಗಲಾರದು ಎಂದು ತಿಗಡೇಸಿ ಪಕ್ಷ ಸ್ಪಷ್ಟನೆ ನೀಡಿದೆ. ಒಂದು ವೇಳೆ ಬಯ್ಯದೇ ಸುಮ್ಮನೇ ಹೋಗಿ ಭಾಷಣ ಮಾಡಿ ಬಂದರೆ ಏನೂ ಪ್ರಯೋಜನವಾಗದು. ನಿಮಗೆ ಅದು ಕೊಡುತ್ತೇನೆ-ಇದು ಕೊಡುತ್ತೇನೆ ಎಂಬ ಭರವಸೆ ನೀಡಿದರೂ ಸಹ ಉಪಯೋಗಕ್ಕೆ ಬರುವುದಿಲ್ಲ. ಈಗ ಏನಿದ್ದರೂ ಬಯ್ಯಬೇಕು…. ಬಯ್ಯಿಸಿಕೊಳ್ಳಬೇಕು ಅಂದಾಗ ಮಾತ್ರ ರಾಜಕೀಯದಲ್ಲಿ ಬೆಳೆಯಲು ಸಾಧ್ಯ. ಇದು ಎಲ್ಲರಿಗೂ ಗೊತ್ತಿರುವ ವಿಷಯವಾಗಿರುವುದರಿಂದ ಹೆಚ್ಚು ಅನ್ನುವಷ್ಟು ಅರ್ಜಿಗಳು ಬಂದಿವೆ. ಕೆಲವರು ಪೆನ್‌ಡ್ರೈವ್-ಸಿಡಿಗಳಲ್ಲಿ ತಾವು ಬೈಯ್ದ ಸಾಲುಗಳನ್ನು ಕಳುಹಿಸಿದ್ದಾರೆ. ನಮ್ಮ ಪಕ್ಷದ ಆಯ್ಕೆ ಸಮಿತಿಗೆ ಸುಮಾರು ಹತ್ತುವರ್ಷಕ್ಕಿಂತ ಹೆಚ್ಚು ಬೈಯ್ದಾಡಿ ನುರಿತವರನ್ನೇ ನೇಮಿಸಲಾಗಿದೆ ಹೀಗಾಗಿ ಈಗ ಹೊಸದಾಗಿ ನೇಮಕ ಮಾಡುವ ಪ್ರಕ್ರಿಯೆ ಪಾರದರ್ಶಕವಾಗಿಯೇ ನಡೆಯುತ್ತದೆ ಎಂಬ ಭರವಸೆಯನ್ನು ಈ ಮೂಲಕ ಕೊಡಲಾಗುತ್ತಿದೆ ಎಂದೂ ಸಹ ಅರ್ಜಿ ನಮೂನೆ ೭ರಲ್ಲಿ ತಿಳಿಸಲಾಗಿದೆ. ಇದನ್ನು ನೋಡಿದ ಕೆಲವರು ಯಬರೇಸಿಗೆ ಗಂಟು ಬಿದ್ದು ಅರ್ಜಿ ಹಾಕಿಸುತ್ತಿದ್ದಾರೆ. ಯಬರೇಸಿಯೇ ಯಾಕೆ ಅಂದರೆ… ಅವನು ತಮ್ಮ ಅಪ್ಪ-ಅಮ್ಮ, ಮನೆಯಲ್ಲಿರುವವರು, ಹೊರಗಿನವರು, ಗೆಳೆಯರು, ಗೆಳತಿಯರು, ದಿನಾಲೂ ಚಹ ಕುಡಿಸುವವರು ಸೇರಿದಂತೆ ಯಾರನ್ನೂ ಬಿಡದೇ ಬಯ್ಯುತ್ತಾನೆ. ನಾಳೆ ಸಂದರ್ಶನ ನಡೆದು ಹೊರಗೆ ಬಂದಕೂಡಲೇ ಅವರನ್ನೂ ಬಯ್ಯುತ್ತಾನೆ. ಈತನೇ ಆ ಹುದ್ದೆಗೆ ಆಯ್ಕೆಯಾಗುತ್ತಾನೆ ಎಂಬ ಭರವಸೆಯೊಂದಿಗೆ…

Previous articleಅನಾವರಣಗೊಳ್ಳಲಿದೆ ಸಾಂಸ್ಕೃತಿಕ ಸೊಬಗು…
Next articleಸತ್ಯವನ್ನು ಅನಾವರಣಗೊಳಿಸುವ ದೇಹಭಾಷೆ