ಬೆಳಗಾವಿ: ಐದು ತಿಂಗಳ ಗರ್ಭಿಣಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತಿಯ ಮನೆಯಲ್ಲಿ ಪತ್ತೆಯಾಗಿದ್ದು, ಸಾವಿನ ಹಿಂದೆ ಪತಿ ಮನೆಯವರ ಷಡ್ಯಂತ್ರ ಇದೆ ಎಂದು ಆರೋಪಿಸಿ ಆಕೆಯ ಪೋಷಕರು ಪೊಲೀಸರಿಗೆ ದೂರು ನೀಡಿದ್ದಾರೆ.
ರಾಯಬಾಗ ತಾಲೂಕಿನ ಭೆಂಡವಾಡ ಗ್ರಾಮದ ಲಲಿತಾ ಸದಾನಂದ ಕರಜಗಿ(೨೪) ಎಂಬುವಳೇ ಮೃತಳಾಗಿದ್ದು, ಈಕೆ ಐದು ತಿಂಗಳ ಗರ್ಭಿಣಿ ಎಂದು ಗೊತ್ತಾಗಿದೆ. ತಮ್ಮ ಮಗಳಿಗೆ ಗಂಡನ ಮನೆಯಲ್ಲಿ ಕಿರುಕುಳ ನೀಡಲಾಗುತ್ತಿತ್ತು. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಕೊಂದು ನೇಣು ಬಿಗಿಯಲಾಗಿದೆ ಎಂದು ಆಕೆಯ ಪೋಷಕರು ಆರೋಪಿಸಿದ್ದಾರೆ.
ರಾಯಬಾಗ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮಹಜರು ನಡೆಸಿದ್ದಾರೆ. ಆದರೆ ಘಟನೆಯ ನಂತರ ಪತಿಯ ಮನೆಯವರು ತಲೆ ಮರೆಸಿಕೊಂಡಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ರಾಯಬಾಗ ಠಾಣೆಯಲ್ಲಿ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಯ ವರದಿ ಕೈ ಸೇರಿದ ನಂತರವಷ್ಟೇ ಹೆಚ್ಚಿನ ಸಂಗತಿ ತಿಳಿಯಲಿದೆ.