ಮಥುರಾ: ಮಥುರಾದ ಬಂಕೆ ಬಿಹಾರ ಮಂದಿರದಲ್ಲಿ ಆನೆಯ ಶಿಲ್ಪದಿಂದ ತೊಟ್ಟುಕ್ಕುತ್ತಿದ್ದ ನೀರನ್ನೇ ಶ್ರೀ ಕೃಷ್ಣ ದೇವರ ಚರಣಾಮೃತ ಎಂದು ತಪ್ಪಾಗಿ ಗ್ರಹಿಸಿ ಭಕ್ತರು ಸೇವನೆ ಮಾಡಿದ್ದಾರೆ. ಈ ನೀರನ್ನು ಭಕ್ತರು ಕಪ್ ಅಥವಾ ಕೈಯಲ್ಲಿ ಸಂಗ್ರಹಿಸುತ್ತಿದ್ದ ವಿಡಿಯೋ ಎಕ್ಸ್ ತಾಣದಲ್ಲಿ ವೈರಲ್ ಆಗುತ್ತಿದ್ದಂತೆಯೇ ಅದನ್ನು ೨೮ ಲಕ್ಷಕ್ಕೂ ಹೆಚ್ಚು ಜನರು ಗಮನಿಸಿದ್ದಾರೆ.
ವಾಸ್ತವವಾಗಿ ದೇವಾಲಯದ ವಾಸ್ತುಶಿಲ್ಪದ ಭಾಗವಾಗಿ ಆನೆಯಂತೆ ವಿನ್ಯಾಸಗೊಳಿಸಲಾದ ಶಿಲ್ಪದ ಬಾಯಿಯಿಂದ ಎಸಿ ನೀರನ್ನು ಟ್ಯೂಬ್ ಮೂಲಕ ಹೊರಬಿಡಲಾಗುತ್ತಿದೆ. ಆದರೆ ಇದೊಂದು ದೇವರ ಆಶೀರ್ವಾದ ಎಂದು ಜನರು ಸೇವನೆ ಮಾಡುತ್ತಿದ್ದಾರೆ. ಇಂತಹ ನೀರಿನಲ್ಲಿ ಹಾನಿಕಾರಕ ಶಿಲೀಂದ್ರ ಸೇರಿದಂತೆ ಸಂಭಾವ್ಯ ಸೋಂಕು ತಗಲುವ ಅಪಾಯವಿದೆ. ಹೀಗಾಗಿ ಹವಾನಿಯಂತ್ರಿತ ನೀರನ್ನು ಸೇವಿಸುವುದರ ವಿರುದ್ಧ ವೈದ್ಯರು ಎಚ್ಚರಿಕೆ ನೀಡಿದರೂ ಭಕ್ತರು ಅದನ್ನು ಪರಿಗಣನೆಗೆ ತೆಗೆದುಕೊಳ್ಳಲಿಲ್ಲ. ಅದೇನಿದ್ದರೂ ಮೂಢನಂಬಿಕೆ ಹಾಗೂ ವೈಜ್ಞಾನಿಕ ಜಾಗೃತಿಯ ಅಗತ್ಯ ಬಗ್ಗೆ ಆನ್‌ಲೈನ್ ಚರ್ಚೆಯನ್ನು ಹುಟ್ಟುಹಾಕಿದೆ.