ರತನ್ ಟಾಟಾ ಒಬ್ಬ ಜಗದ್ವಿಖ್ಯಾತ ಉದ್ಯಮಿ ಅಷ್ಟೇ ಅಲ್ಲ. ಅವರೊಳಗೊಬ್ಬ ಕರುಣಾಮೂರ್ತಿಯೂ ಇದ್ದ ಎನ್ನುವುದಕ್ಕೆ ಹಲವಾರು ಘಟನೆಗಳು ಸಾಕ್ಷಿ. ಟಾಟಾ ಗ್ರೂಪ್‌ನ ತಾಜ್ ಹೊಟೇಲ್ ಮೇಲೆ ಉಗ್ರರು ದಾಳಿ ಮಾಡಿದ್ದು, ಆ ಐಶಾರಾಮಿ ಹೊಟೇಲ್‌ನ್ನು ಹೊಕ್ಕು ನರಮೇಧ ಮಾಡಿದ್ದು ಎಲ್ಲರಿಗೂ ಗೊತ್ತಿರುವ ವಿಷಯವೇ. ಆ ಸಂದರ್ಭದಲ್ಲಿ ಖುದ್ದು ರತನ್ ಟಾಟಾ ಮೂರು ಹಗಲು ಮೂರು ರಾತ್ರಿ ಹೊಟೇಲ್ ಮುಂದೆ ನಿಂತು ಆಗು ಹೋಗುಗಳನ್ನೆಲ್ಲ ಗಮನಿಸುತ್ತಿದ್ದರು. ನಂತರ ಉಗ್ರ ದಾಳಿಯಲ್ಲಿ ಮೃತಪಟ್ಟ ಹೊಟೇಲ್ ಸಿಬ್ಬಂದಿಯ ಕುಟುಂಬದ ಜವಾಬ್ದಾರಿಯನ್ನು ನೋಡಿಕೊಳ್ಳುವ ಪಣ ತೊಡುತ್ತಾರೆ ರತನ್ ಟಾಟಾ. ಜೊತೆಗೆ ದಾಳಿಯಲ್ಲಿ ಮೃತಪಟ್ಟವರ ಕುಟುಂಬಗಳನ್ನೂ ಭೇಟಿ ಮಾಡಿ ಟಾಟಾ ಸಹಾಯಹಸ್ತ ಚಾಚಿದ್ದರು. ಎಲ್ಲಕ್ಕಿಂತ ಅಚ್ಚರಿಯ ಸಂಗತಿ ಎಂದರೆ ಕೇವಲ ೨೧ ತಿಂಗಳಲ್ಲಿ ಸುಮಾರು ೮೩ ಕೋಟಿ ಖರ್ಚು ಮಾಡಿ ತಾಜ್ ಹೊಟೇಲ್‌ನ್ನು ಮತ್ತೆ ಮೊದಲಿನಂತೆ ಕಟ್ಟಿ ನಿಲ್ಲಿಸಿದ್ದು.