ಮಾದಕ ವಸ್ತು ಸಾಗಾಟ ಮತ್ತು ಮಾರಾಟ ಪ್ರಕರಣದಲ್ಲಿ ಅಂತರ್ ರಾಜ್ಯ ಆರೋಪಿಗಳ ಸೆರೆ


ಮಂಗಳೂರು: ಮಂಗಳೂರು ನಗರದ ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಣಿಜ್ಯ ಪ್ರಮಾಣದ ಎಲ್‌ಎಸ್‌ಡಿ ಮಾದಕ ವಸ್ತುವನ್ನು ಮಾರಾಟ ಮತ್ತು ಸಾಗಾಟ ಮಾಡಿದ ಆರೋಪಿತರನ್ನು ಮೂಲ್ಕಿ ಪೊಲೀಸರು ದಸ್ತಗಿರಿ ಮಾಡಿ ಮಾದಕ ವಸ್ತುಗಳನ್ನು ಮತ್ತು ಕಾರನ್ನು ಸ್ವಾಧೀನಪಡಸಿಕೊಂಡಿದ್ದಾರೆ.
ಬಂಧಿತರನ್ನು ಮುಕ್ಕ ಶ್ರೀನಿವಾಸ ಪ್ಯಾರಮೆಡಿಕಲ್ ಕಾಲೇಜಿನ ವಿದ್ಯಾರ್ಥಿಗಳಾದ ಆದಿಲ್ ಮತ್ತು ಮಹಮ್ಮದ್ ನಿಹಾಲ್ ಎಂ.ಪಿ. ಎಂದು ಗುರುತಿಸಲಾಗಿದೆ.
ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ಯುವಕರು ತಮ್ಮಲ್ಲಿ ಮಾದಕ ವಸ್ತುವಾದ ಎಲ್‌ಎಸ್‌ಡಿಯನ್ನು ಇರಿಸಿಕೊಂಡು ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಮಾರಾಟ ಮಾಡಲು ಪ್ರಯತ್ನಿಸುತ್ತಾ ಕಾರಿನಲ್ಲಿ ಸುತ್ತಾಡುತ್ತಿದ್ದಾರೆಂದು ಮೂಲ್ಕಿ ಪೊಲೀಸ್ ಠಾಣೆಯಗೆ ದೊರೆತ ಖಚಿತ ಮಾಹಿತಿಯಂತೆ ಅ.೫ ರಂದು ಬೆಳಿಗ್ಗೆ ೯.೧೫ಕ್ಕೆ ಹಳೆಯಂಗಡಿ ಗ್ರಾಮದ ಕೊಪ್ಪಳ ಸೇತುವೆ ಬಳಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತರಿಂದ ವಾಣಿಜ್ಯ ಪ್ರಮಾಣದ ಸುಮಾರು ೭೮ ಸಾವಿರ ಮೌಲ್ಯದ ಒಟ್ಟು ೨೬ ಎಲ್‌ಎಸ್‌ಡಿ ಸ್ಟಾರ್ ಸ್ಟ್ರಿಪ್ಸ್ ಮಾದಕ ವಸ್ತು, ಮಾದಕ ವಸ್ತು ಸಾಗಾಟಕ್ಕೆ ಬಳಸಿದ ಕಾರು, ೨ ಆಪಲ್ ಐ ಫೋನ್ ಮೊಬೈಲ್‌ನ್ನು ವಶಪಡಿಸಿಕೊಂಡಿದ್ದಾರೆ.
ಆರೋಪಿಗಳು ಕೇರಳ ರಾಜ್ಯದವರಾಗಿದ್ದು, ಪ್ರಸ್ತುತ ಮಂಗಳೂರಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಅರೋಪಿತರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.
ಪತ್ತೆ ಕಾರ್ಯಚರಣೆಯಲ್ಲಿ ಮಂಗಳೂರು ನಗರ ಪೊಲೀಸ್ ಆಯುಕ್ತ ಅನುಪಮ್ ಅಗರವಾಲ್ ಅವರ ಮಾರ್ಗದರ್ಶನಂದಂತೆ ಡಿಸಿಪಿಗಳಾದ ಸಿದ್ದಾರ್ಥ ಗೋಯಲ್, ದಿನೇಶ್ ಕುಮಾರ್ ಅವರ ನಿರ್ದೇಶನದಂತೆ, ಮಂಗಳೂರು ಉತ್ತರ ವಿಭಾಗದ ಎ.ಸಿ.ಪಿ. ಶ್ರೀಕಾಂತ್ ಕೆ. ಅವರ ಮಾರ್ಗದರ್ಶನದಲ್ಲಿ ಮೂಲ್ಕಿ ಠಾಣಾ ಉಪ ನಿರೀಕ್ಷಕಿ ಅನಿತಾ ಹೆಚ್.ಬಿ. ಅವರ ನೇತೃತ್ವದಲ್ಲಿ ಮೂಲ್ಕಿ ಪೊಲೀಸ್ ಠಾಣೆಯ ಎ.ಎಸ್.ಐ ಉಮೇಶ್, ಹೆಚ್.ಸಿ. ಚಂದ್ರಶೇಖರ್, ಯೋಗೀಶ್, ಪಿಸಿಗಳಾದ ವಿನಾಯಕ, ಸುನಿಲ್ ಟಿ. ಪಡನಡ, ಶಂಕರ ಜಡೇದರ್, ಬಸವರಾಜ್, ಸಂದೀಪ್ ಮತ್ತು ಮೊಹಮ್ಮದ್ ಶಾದಾಬ್ ಅವರು ಹಾಗೂ ಮಂಗಳೂರು ನಗರ ಉತ್ತರ ಉಪ ವಿಭಾಗದ ಆಂಟಿ ಡ್ರಗ್‌ಸ್ಕ್ವಾಡ್‌ನ ಅದಿಕಾರಿ ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದರು.