ಹುಬ್ಬಳ್ಳಿ: ಒಂದು ತಪ್ಪು ಮುಚ್ಚಿಕೊಳ್ಳಲು ಹೋಗಿ ೫೦ ತಪ್ಪುಗಳನ್ನು ಮಾಡುವ ಬದಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿ ತಮ್ಮತನ ಉಳಿಸಿಕೊಳ್ಳಬೇಕು ಎಂದು ರೈಲ್ವೆ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ ಆಗ್ರಹಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ನಡೆದು ಬಂದ ದಾರಿಯನ್ನ ನೆನಪು ಮಾಡಿಕೊಳ್ಳಬೇಕು. ಅವರ ಇತಿಹಾಸವನ್ನ ಮುಂದಿನ ಪೀಳಿಗೆಗೆ ಕೊಡಬೇಕು ಎನ್ನುವುದಾದರೆ ರಾಜೀನಾಮೆಯೊಂದೇ ದಾರಿ. ಮುಡಾ ವಿಚಾರದಲ್ಲಿ ತಪ್ಪು ಆಗಿದೆ ಎಂದು ಅವರೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ರಾಜೀನಾಮೆ ನೀಡಿ ವಿಚಾರಣೆಗೆ ಸಹಕರಿಸಬೇಕು. ವಿಚಾರಣೆಯಲ್ಲಿ ತಪ್ಪು ನಡೆದಿಲ್ಲ ಎಂದು ಸಾಬೀತಾದರೆ ಮತ್ತೆ ಅವರೇ ಮುಖ್ಯಮಂತ್ರಿ ಆಗಲು ಅವಕಾಶವಿದೆ. ಆಗ ನಾವೇ ಅವರ ಮನೆಗೆ ಹೋಗಿ ಸನ್ಮಾನ ಮಾಡಿ ಅಭಿನಂದಿಸುತ್ತೇವೆ ಎಂದರು.

























