ಇಸಿದುಕೊಳ್ಳುವುದು-ವಾಪಸ್ ಕೊಡು ವುದು, ಕಂಪ್ಲೇಂಟ್ ಆಗುವುದು… ಆಗದೇ ಇರುವುದು… ಇವುಗಳ ಬಗ್ಗೆ ಅವರನ್ನೇ ಸಂದರ್ಶನ ಮಾಡಿದರೆ ಹೇಗೆ? ಎಂದು ಮನಸ್ಸಿನಲ್ಲಿ ಬಂದದ್ದೇ ತಡ ಕಿವುಡನುಮಿ ಮೇಕಪ್ ಮಾಡಿಕೊಂಡು ಕ್ಯಾಮರಾ ಹೆಗಲೇರಿಸಿಕೊಂಡು ಅವರ ಮನೆಗೆ ಹೋಗಿಯೇ ಬಿಟ್ಟಳು. ಮೊದ ಮೊದಲು ಸೆಕ್ಯುರಿಟಿಗಳು ಯಾರನ್ನೂ ಬಿಡಬೇಡ ಅಂದಿದ್ದಾರೆ… ಸಾಹೇಬರಿಲ್ಲ ಎಂದು ನೆಪ ಹೇಳಿದರು. ಕೊನೆಗೆ ಕಿವುಡನುಮಿ ಬಂದಿದ್ದಾಳೆ ಎಂದು ಹೇಳಪ್ಪ ಎಂದು ಜೋರು ಮಾಡಿದಾಗ..ಅವರು ಹೋಗಿ ಸಾಹೇಬರಿಗೆ ತಿಳಿಸಿದರು. ಅದೇ ಸ್ನಾನ ಮಾಡಿ ಬಂದ ಸಾಹೇಬರು… ಯಾರಂತೆ…ಓ…ಕಿವುಡನುಮವ್ವನಾ ಕರೀರಿ..ಕರೀರಿ ಎಂದು ಶರ್ಟ್ ಹಾಕಿಕೊಂಡು ಲುಂಗಿ ಉಟ್ಟುಕೊಂಡು ರೆಡಿ ಆದರು. ಕಿವುಡನುಮಿ ಒಳಗೆ ಬಂದು ಏನ್ಸಾರ್ ಅಂದಳು… ಓಓಓ ಬನ್ನಿ ಬನ್ನಿ ನೀವು ಬರುತ್ತೀರಿ ಎಂದು ನನಗೆ ತಿಳಿದಿತ್ತು.. ಏನ್ಸಮಾಚಾರ? ಅಂದಾಗ ಸರ್ ಅದೇ…ಅಂದಳು…ಊಂ ಆಗ್ಲಿ ಕೇಳಿ ಅಂದರು ಸಾಹೇಬರು.
ಕಿವುಡನುಮಿ; ಏನ್ಸಾರ್ ಇದೂ ಇಸಕಳ್ಳಾದು-ವಾಪಸ್ ಕೊಡೋದು..
ಸಾಹೇಬರು; ಅದೇ ಗಾದೆ..ಗಾದೆ ಅದೇ ಅಲ್ವ?
ಕಿವುಡನುಮಿ; ಹಾಂ…ಕೊಟ್ಟವ ಕೋಡಂಗಿ ಇಸಗೊಂಡವ ಇರಭದ್ರ…
ಸಾಹೇಬರು; ನಾವೇನು ಕೊಡು, ಕೊಡು ಅಂತ ಗಂಟು ಬಿದ್ದಿದ್ದಿಲ್ಲ.
ಅವರೇ ಬಂದರು. ಇಂಗಿಂಗೆ ಅಂದರು…ಸ್ವಾಮೇರು ಬಂದರು…ತಗಳವಾ ತಂಗೀ
ಅಂದರು…ನಾವು ತಗಂಡೀವಿ….ಅಷ್ಟೇ..
ಕಿವುಡನುಮಿ; ಹೌದು ಸಾರ್…ಆದರೆ ಈ ಮಂದಿ ಹಿಂಗ್ಯಾಕೆ ?
ಸಾಹೇಬರು; ಏನ್ಮಾಡೋದು ಮಂದಿ ಹಂಗೆ ಅಂತಾರೆ….ಹಂಗಂತ?
ಕಿವುಡನುಮಿ; ಅಲ್ಲ ಸಾರ್…ಏನು ನಿಮ್ಮ ಮಾತಿನ ಅರ್ಥ?