ಪಾಕ್ ಅಕ್ರಮ ವಲಸಿಗರಿಗೆ ಆಶ್ರಯ ಅಪಾಯಕಾರಿ

ಬೆಂಗಳೂರಿನಲ್ಲಿ ಕಳೆದ ೧೦ ವರ್ಷಗಳಿಂದ ಹಿಂದೂ ಹೆಸರಿನಲ್ಲಿ ನಾಲ್ವರು ಪಾಕ್ ನಿವಾಸಿಗಳು ಜೀವನ ನಡೆಸಿದ್ದರು ಎಂದರೆ ಇದು ನಮ್ಮ ಉದಾರತೆ ಎನ್ನಬೇಕೋ ಅಥವಾ ಉದಾಸೀನ ಎನ್ನಬೇಕೋ ತಿಳಿಯದು. ನಾವು ನಮ್ಮ ರಾಜ್ಯಕ್ಕೆ ಬಂದವರನ್ನು ಈ ರೀತಿ ಸ್ವಾಗತಿಸುತ್ತ ಹೋದಲ್ಲಿ ವಿಶ್ವದ ಉಗ್ರವಾದಿಗಳು ನಮ್ಮಲ್ಲಿ ಆಶ್ರಯ ಪಡೆದು ಬೇರೆ ಕಡೆಗೆ ಹೋಗುತ್ತಾರೆ. ಜಗತ್ತಿನ ಶಾಂತಿ ಕದಡುವ ಜನರಿಗೆ ಆಶ್ರಯ ನೀಡುತ್ತಿದ್ದೇವೆ ಎಂಬ ಪರಿಜ್ಞಾನವಾದರೂ ಬೇಕು. ಬೇರೆ ರಾಜ್ಯಗಳಲ್ಲಿ ಈ ರೀತಿ ಸುಲಭವಾಗಿ ಬದುಕಲು ಸಾಧ್ಯವಾಗುವುದಿಲ್ಲ. ತಮಿಳುನಾಡಿಗೆ ಹೋದರೆ ತಮಿಳು ಬರಬೇಕು. ಕೇರಳಕ್ಕೆ ಹೋಗಬೇಕು ಎಂದರೆ ಮಲಯಾಳಂ ಬರಬೇಕು. ನಮ್ಮಲ್ಲಿ ಇರಬೇಕು ಎಂದರೆ ಕನ್ನಡ ಬರಬೇಕೆಂಬ ಕಡ್ಡಾಯವೇನೂ ಇಲ್ಲ. ನಮ್ಮ ಪಕ್ಕದ ಮನೆಯಲ್ಲಿ ಯಾರಿದ್ದಾರೆ ಎಂದು ಕೇಳಲು ಹೋಗುವುದಿಲ್ಲ. ಒಂದು ಹಳ್ಳಿಗೆ ಹೋದರೆ ಅಲ್ಲಿಯ ಜನ ನೂರೆಂಟು ಪ್ರಶ್ನೆಗಳನ್ನು ಕೇಳುತ್ತಾರೆ. ಬೆಂಗಳೂರಿನಲ್ಲಿ ಯಾರೂ ಕೇಳುವುದಿಲ್ಲ. ಇಂಥ ವಾತಾವರಣವನ್ನು ಬಹಳ ಚೆನ್ನಾಗಿ ಬಳಸಿಕೊಳ್ಳುತ್ತಿರುವವರು ಬಾಂಗ್ಲಾ ನಿವಾಸಿಗಳು ಹಾಗೂ ಪಾಕ್ ವಲಸಿಗರು.
ಅವರು ನೇರವಾಗಿ ಪಾಕ್‌ನಿಂದ ಭಾರತಕ್ಕೆ ಬರಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅವರು ಬಾಂಗ್ಲಾಗೆ ಹೋಗಿ ಅಲ್ಲಿಂದ ಭಾರತದ ಗಡಿ ದಾಟಿ ಬರುತ್ತಾರೆ. ಬೆಂಗಳೂರು ಜಿಗಣಿ ಸಮೀಪ ರಾಜಾಪುರದಲ್ಲಿ ಸಿಕ್ಕಿಬಿದ್ದ ನಾಲ್ವರೂ ಮೂಲತಃ ಪಾಕ್‌ನವರು. ಅವರು ಬಾಂಗ್ಲಾಗೆ ಹೋಗಿ ಮಲ್ಡಾ ಮೂಲಕ ದೆಹಲಿಗೆ ಹೋಗಿ ಅಲ್ಲಿ ತಮ್ಮ ಹೆಸರುಗಳನ್ನು ಬದಲಿಸಿಕೊಂಡು ಹಿಂದೂಗಳಾಗಿ ನಕಲಿ ಪಾರ್ಸ್ ಪೋರ್ಟ್, ನಕಲಿ ಆಧಾರ್ ಕಾರ್ಡ್ ಪಡೆದು ಬೆಂಗಳೂರಿಗೆ ಬಂದು ನೆಲೆಸಿದ್ದರು. ಅವರು ಗ್ಯಾರೇಜ್‌ಗಳಿಗೆ ತೈಲ ಸರಬರಾಜು ಮಾಡುವ ಕೆಲಸವನ್ನು ೧೦ ವರ್ಷದಿಂದ ಕೈಗೊಂಡಿದ್ದರು ಎಂದರೆ ಸ್ಥಳೀಯರಿಗೆ ಅನುಮಾನ ಬಂದಿರಲಿಲ್ಲವೆ? ಅನುಮಾನ ಬಂದರೂ ಸುಮ್ಮನಿದ್ದರೆ? ಹಣ ಬಾಯಿ ಮುಚ್ಚಿಸಿತ್ತೇ ತಿಳಿಯದು. ಚೆನ್ನೈ ವಿಮಾನ ನಿಲ್ದಾಣದಲ್ಲಿ ನಕಲಿ ಪಾಸ್‌ಪೋರ್ಟ್ನಿಂದ ಸಿಕ್ಕಿಬಿದ್ದ. ಅವನಿಂದ ಬೆಂಗಳೂರಿನಲ್ಲಿ ೪ ಜನ ಇರುವುದು ತಿಳಿಯಿತು. ಬೆಂಗಳೂರಿನಲ್ಲಿದ್ದವರು ಶರ್ಮ ಎಂದು ಹೆಸರು ಬದಲಿಸಿಕೊಂಡಿದ್ದರು. ನಮ್ಮ ನಂಟ ಚೆನ್ನೈನಲ್ಲಿ ಸಿಕ್ಕಿಬಿದ್ದಿರುವುದು ತಿಳಿದು ಮನೆ ಖಾಲಿ ಮಾಡಲು ಸಿದ್ಧರಿದ್ದರು. ಅಷ್ಟರಲ್ಲಿ ಜಿಗಣಿ ಪೊಲೀಸರು ಹಿಡಿದರು.
ಇಂಥ ಕುಟುಂಬಗಳು ಎಷ್ಟಿವೆ ಯಾರಿಗೂ ತಿಳಿಯದು. ಹೊರಗಿನಿಂದ ಬಂದವರಿಗೆ ಮನೆ ಬಾಡಿಗೆ ಕೊಡಬೇಕು ಎಂದರೆ ಸಮೀಪದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂಬ ನಿಯಮ ಇದೆ. ಇದನ್ನು ಯಾರೂ ಪಾಲಿಸುತ್ತಿಲ್ಲ. ಮನೆ ಬಾಡಿಗೆ ಕೊಡುವವರು ಹಣದಾಸೆಗೆ ಯಾವುದನ್ನೂ ಕೇಳದೆ ಕೊಟ್ಟು ಬಿಡುತ್ತಾರೆ. ಈ ರೀತಿ ಬರುವವರು ಇಡೀ ವರ್ಷದ ಬಾಡಿಗೆಯನ್ನು ಒಂದೇ ಬಾರಿ ಕೊಡಲು ಸಿದ್ಧವಿರುತ್ತಾರೆ. ಈ ರೀತಿ ಒಮ್ಮೆ ಸೇರಿಕೊಂಡವರು ಯಾರಿಗೂ ತಿಳಿಯದಂತೆ ಜೀವನ ಮಾಡುತ್ತಾರೆ. ಅವರಿಗೆ ಸುಲಭವಾಗಿ ಆಧಾರ್, ರೇಷನ್ ಕಾರ್ಡ್ ಎಲ್ಲವೂ ಸಿಗುತ್ತದೆ. ಅವರ ಪಕ್ಕದಲ್ಲೇ ಸ್ಥಳೀಯ ವಾಸಿಸುವ ಜನರಿಗೆ ಆಧಾರ್, ರೇಷನ್ ಕಾರ್ಡ್ ಸಿಗುವುದಿಲ್ಲ. ವಲಸೆ ಬಂದವರೇ ಈಗ ಸ್ಥಳೀಯ ಮೇಲೆ ದಬ್ಬಾಳಿಕೆ ನಡೆಸುವ ಕಾಲ ಬಂದಿದೆ. ವೈಟ್‌ಫೀಲ್ಡ್, ರಾಮಮೂರ್ತಿ ನಗರ, ಹೂಡಿ ಮತ್ತಿತರ ಪ್ರದೇಶಗಳಲ್ಲಿ ಅಕ್ರಮವಾಗಿ ಬಂದು ಸೇರಿಕೊಂಡಿರುವ ವಲಸಿಗರ ಸಂಖ್ಯೆ ಎಷ್ಟು ಎಂಬುದೇ ತಿಳಿಯದು. ಪೊಲೀಸರಿಗೂ ಇದು ತಿಳಿದಿಲ್ಲ. ಏನಾದರೂ ಕಾನೂನು ಉಲ್ಲಂಘನೆಯಾಯಿತು ಎಂದರೆ ಅವರು ನಾಪತ್ತೆಯಾಗಿ ಬಿಡುತ್ತಾರೆ. ರೈಲಿನಲ್ಲಿ ಬರುವ ಅಕ್ರಮ ವಲಸಿಗರನ್ನು ಪರಿಶೀಲಿಸುವ ಯಾವ ವ್ಯವಸ್ಥೆಯೂ ಇಲ್ಲ. ಅದರಲ್ಲೂ ಮಾದಕ ವಸ್ತುಗಳ ದಂಧೆಯಲ್ಲಿರುವವರಿಗೆ ಬೆಂಗಳೂರು ಸ್ವರ್ಗವಾಗಿದೆ. ಹಿಂದೆ ಪ್ರತಿ ವಾರ್ಡ್ನಲ್ಲಿ ವಾರ್ಡ್ ಸಮಿತಿ ಇತ್ತು. ಅವರು ತಮ್ಮ ವಾರ್ಡ್ನಲ್ಲಿ ಹೊಸಬರು ಬಂದರೆ ಅವರ ಪೂರ್ವಾಪರಗಳನ್ನು ವಿಚಾರಿಸುತ್ತಿದ್ದರು. ಈಗ ಎಲ್ಲರೂ ಸ್ವತಂತ್ರ ಜೀವನ ನಡೆಸಲು ಬಯಸುವವರು. ಅವರ ಪಕ್ಕದಲ್ಲಿ ಉಗ್ರವಾದಿ ಇದ್ದರೆ ಇವರಿಗೆ ತಿಳಿಯುವುದಿಲ್ಲ. ದೂರದ ದೆಹಲಿಯಿಂದ ಎನ್‌ಐಎ ಬಂದವರು ಹಿಡಿದಾಗ ಇವರ ಕಣ್ಣು ಕಣ್ಣು ಬಿಡುತ್ತಾರೆ. ಇಂಥ ಉದಾಸೀನ ಮನೋಭಾವವೇ ಈಗ ಉಗ್ರವಾದಕ್ಕೆ ಕಾರಣವಾಗುತ್ತಿದೆ. ಮೊದಲು ಸ್ಥಳೀಯರು ಎಚ್ಚೆತ್ತರೆ ಪೊಲೀಸರು ಮತ್ತು ಪಾಲಿಕೆ ಅಧಿಕಾರಿಗಳು ಚುರುಕಾಗುತ್ತಾರೆ. ಈಗಲೂ ಕಾಲ ಮಿಂಚಿಲ್ಲ. ಸ್ಥಳೀಯರು ಅಕ್ಕಪಕ್ಕದವರ ಮೇಲೆ ನಿಗಾವಹಿಸಿದರೆ ಸಮಸ್ಯೆ ಬಗೆಹರಿಸಬಹುದು. ಕಾಸ್ಮೋಪಾಲಿಟನ್ ನಗರ ಎಂದರೆ ಸಮಾಜ ವಿದ್ರೋಹಿಗಳಿಗೆ ತವರೂರು ಆಗಬಾರದು. ನಮ್ಮ ಔದಾರ್ಯದ ಉರುಳಲ್ಲಿ ಸಿಕ್ಕಿಹಾಕಿಕೊಳ್ಳುವುದು ಬೇಡ. ಪ್ರತಿಭಾವಂತ ಯುವ ಪೀಳಿಗೆಗೆ ಆಶ್ರಯ ನೀಡೋಣ. ಅದರಿಂದ ಆರ್ಥಿಕ ಬೆಳವಣಿಗೆ ಆಗುತ್ತದೆ. ಸಮಾಜ ವಿದ್ರೋಹಿಗಳಿಗೆ ಆಸರೆ ನೀಡಿದರೆ ನಮ್ಮ ಅಸ್ತಿತ್ವಕ್ಕೆ ಸಂಚಕಾರ ಬರುವುದಂತೂ ಖಚಿತ. ದುಡಿಯುವ ಕೈಗಳಿಗೆ ಆಶ್ರಯ ನೀಡೋಣ. ಬಾಂಬ್ ಇಡುವವರಿಗೆ ಅಲ್ಲ.