ಬೃಹತ್ ಗಾತ್ರದ ಹೆಬ್ಬಾವು ಸೆರೆ

ಧಾರವಾಡ: ತಾಲೂಕಿನ ನಿಗದಿ ಗ್ರಾಮದ ರೈತರ ಕಬ್ಬಿನ ಗದ್ದೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವು ಪತ್ತೆಯಾಗಿದ್ದು, ಅದನ್ನು ರಕ್ಷಣೆ ಮಾಡಿ ಸುರಕ್ಷಿತವಾಗಿ ಮರಳಿ ಕಾಡಿಗೆ ಬಿಡಲಾಗಿದೆ.
ನಿಗದಿ ಗ್ರಾಮದ ರೈತ ಸಿದ್ಧಬಸಪ್ಪ ಹಳಿಯಾಳ ಎಂಬ ರೈತ ಅಂಬ್ಲಿಕೊಪ್ಪ ಗ್ರಾಮದ ಹದ್ದಿನಲ್ಲಿ ಕಬ್ಬಿನ ಜಮೀನು ಹೊಂದಿದ್ದು, ಕಬ್ಬು ಸುಲಿಯುವ ಸಂದರ್ಭದಲ್ಲಿ ಈ ಹೆಬ್ಬಾವು ರೈತನ ಕಣ್ಣಿಗೆ ಬಿದ್ದಿದೆ. ಕೂಡಲೇ ಈ ಮಾಹಿತಿಯನ್ನು ಉರಗ ರಕ್ಷಕ ಯಲ್ಲಪ್ಪ ಜೋಡಳ್ಳಿ ಅವರ ಗಮನಕ್ಕೆ ತಂದಾಗ ಯಲ್ಲಪ್ಪ ಮತ್ತು ಆತನ ಸಂಗಡಿಗರು ಸ್ಥಳಕ್ಕೆ ಹೋಗಿ ಆ ಹೆಬ್ಬಾವನ್ನು ರಕ್ಷಣೆ ಮಾಡಿದ್ದಾರೆ.
ಅಂದಾಜು ೪ ವರ್ಷದ ಹೆಣ್ಣು ಹೆಬ್ಬಾವು ಇದಾಗಿದ್ದು, ಸುಮಾರು ೨೦-೨೫ ಕೆಜಿ ತೂಕದ ಜೊತೆಗೆ ಆರು ಅಡಿ ಉದ್ದವಿದೆ. ಕಬ್ಬಿನ ಗದ್ದೆಯಲ್ಲಿ ಕಾರ್ಯಾಚರಣೆ ನಡೆಸಿದ ಯಲ್ಲಪ್ಪ ಅವರು, ಆ ಹೆಬ್ಬಾವನ್ನು ರಕ್ಷಣೆ ಮಾಡಿ ಧಾರವಾಡದ ಅರಣ್ಯ ಇಲಾಖೆಗೆ ತಂದಿದ್ದರು. ಅಲ್ಲಿ ಅರಣ್ಯ ಇಲಾಖೆಯವರ ಆದೇಶದಂತೆ ಹಾವನ್ನು ಮರಳಿ ಅರಣ್ಯಕ್ಕೆ ಬಿಟ್ಟಿದ್ದಾರೆ.