ಬೆಳಗಾವಿ: ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸುಗಿದ ಆರೋಪಿತನಿಗೆ ೨೦ ವರ್ಷಗಳ ಕಠಿಣ ಶಿಕ್ಷೆಯನ್ನು ಜಿಲ್ಲಾ ಪೋಕ್ಸೊ ನ್ಯಾಯಾಲಯ ತೀರ್ಪು ನೀಡಿದೆ.
೨೦೧೯ರಲ್ಲಿ ಪ್ರಕರಣ ನಡೆದಿದ್ದು, ಆರೋಪಿ ಸವದತ್ತಿ ತಾಲೂಕಿನ ಬಸರಗಿ ಗವಟಿನ ಹನುಮಂತ ಪುಂಡಲೀಕ ಚಿಪ್ಪಲಕಟ್ಟಿ(೨೧) ಇವನು ಅಪ್ರಾಪ್ತ ಬಾಲಕಿಯನ್ನು ೨೦೧೯ರ ನವೆಂಬರ್ ೭ರಂದು ಅತ್ಯಾಚಾರ ಮಾಡುವ ಉದ್ದೇಶದಿಂದ ಅಪಹರಣ ಮಾಡಿಕೊಂಡು ಗೋನಗನೂರ ಗ್ರಾಮದ ದೊಡ್ಡಗುಡ್ಡದಲ್ಲಿ ಕರೆದುಕೊಂಡು ಹೋಗಿ ಒತ್ತಾಯದಿಂದ ಬಲಾತ್ಕಾರ ಮಾಡಿ, ಈ ವಿಚಾರ ಯಾರಿಗಾದರು ಹೇಳಿದರೆ ಜೀವ ಸಹಿತ ಬಿಡುವುದಿಲ್ಲಾ ಎಮದು ದಮ್ಕಿ ಹಾಕಿದ್ದಾಗಿ ದೂರಿನಲ್ಲಿ ದಾಖಲಾಗಿತ್ತು.
ಅಂದಿನ ತನಿಖಾಧಿಕಾರಿರವರಾದ ಎಂ.ಐ. ನಡುವಿನಮನಿ ಅವರು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶರಾದ ಸಿ.ಎಂ. ಪುಷ್ಪಲತಾ ಇವರು ಪ್ರಕರಣವನ್ನು ವಿಚಾರಣೆ ಮಾಡಿ, ಒಟ್ಟು ೨೦ ಸಾಕ್ಷಿಗಳ ವಿಚಾರಣೆ ಮಾಡಿ ಆರೋಪಿ ಹನುಮಂತ ಪುಂಡಲೀಕ ಚಿಪ್ಪಲಕಟ್ಟಿ ಎಂಬುವನ ಮೇಲಿನ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತನಿಗೆ ೨೦ ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಮತ್ತು ೧೦.೦೦೦ ರೂ. ದಂಡ ವಿಧಿಸಿ ತೀರ್ಪು ನೀಡಿದ್ದಾರೆ.
ನೊಂದ ಬಾಲಕಿಗೆ ಜಿಲ್ಲಾ ಕಾನೂನು ಪ್ರಾಧಿಕಾರದಿಂದ ಒಂದು ಲಕ್ಷ ರೂ. ಪರಿಹಾರ ಧನವನ್ನು ಪಡೆಯಲು ನ್ಯಾಯಾಲಯ ಆದೇಶಿಸಿದೆ. ಈ ಪ್ರಕರಣದಲ್ಲಿ ಸರಕಾರದ ಪರವಾಗಿ ವಿಶೇಷ ಸರ್ಕಾರಿ ಅಭಿಯೋಜಕರಾದ ಎಲ್.ವಿ. ಪಾಟೀಲ ವಾದ ಮಂಡಿಸಿದ್ದರು.