ಕಿಶೋರ್ ಕುಮಾರ್ ಗೆಲುವು ನಿಶ್ಚಿತ: ನಳಿನ್‌ಕುಮಾರ್ ಕಟೀಲ್ ವಿಶ್ವಾಸ

ಮಂಗಳೂರು : ವಿಧಾನ ಪರಿಷತ್‌ನ ದಕ್ಷಿಣ ಕನ್ನಡ ಸ್ಥಳೀಯಾಡಳಿತ ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಅಭ್ಯರ್ಥಿಯಾಗಿ ಪಕ್ಷದ ಜಿಲ್ಲಾ ಪ್ರಧಾನ ಕಾರ್ಯದರ್ಶಿ , ಯುವ ನಾಯಕ ಕಿಶೋರ್ ಕುಮಾರ್ ಪುತ್ತೂರು ಸ್ಪರ್ಧಿಸಲಿದ್ದು , ಅವಿಭಜಿತ ದ.ಕ.ಜಿಲ್ಲೆಯ ಚುನಾಯಿತ
ಪ್ರತಿನಿಧಿಗಳು ಅಭೂತಪೂರ್ವ ಗೆಲುವಿಗೆ ಸಹಕರಿಸಬೇಕೆಂದು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್‌ಕುಮಾರ್ ಕಟೀಲ್ ವಿನಂತಿಸಿದ್ದಾರೆ.
ಪಕ್ಷ ಯುವಕರಿಗೆ ಆದ್ಯತೆ ನೀಡಿದ್ದು, ಆರ್‌ಎಸ್‌ಎಸ್ ಸ್ವಯಂಸೇವಕ ಕಿಶೋರ್ ಕುಮಾರ್ ಪುತ್ತೂರು ಅವರು ಅಭಾವಿಪ ನಾಯಕನಾಗಿ, ಯುವ ಮೋರ್ಚಾದ ಜಿಲ್ಲಾಧ್ಯಕ್ಷರಾಗಿ ಪಕ್ಷ ಸಂಘಟನೆಗೆ ದುಡಿದವರು. ಬಿಜೆಪಿಯ ರಾಜ್ಯ, ರಾಷ್ಟ್ರ ಮಟ್ಗಟದ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಂಡವರು. ದ.ಕ.ಮತ್ತು ಉಡುಪಿ ಜಿಲ್ಲೆಯ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಬಿಜೆಪಿ ಪ್ರಾಬಲ್ಯವಿದ್ದು, ಕಿಶೋರ್ ಕುಮಾರ್ ಅವರು ಅತ್ಯಧಿಕ ಮತಗಳಿಂದ ಜಯ ಸಾಧಿಸುವುದು ನಿಶ್ಚಿತ ಎಂದು ನಳಿನ್‌ಕುಮಾರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.