ಭಾರತ – ಬಾಂಗ್ಲಾ ಟೆಸ್ಟ್: ಐತಿಹಾಸಿಕ ಜಯ ದಾಖಲಿಸಿದ ಭಾರತ

ಪ್ರತಿಕೂಲ ಹವಾಮಾನದ ನಡುವೆಯೂ ಟೀಂ ಇಂಡಿಯಾ ಭರ್ಜರಿ ಜಯ ಸಾಧಿಸಿದೆ.
ಮಳೆಯಿಂದಾಗಿ ಸುಮಾರು ಒಂದೂವರೆ ದಿನ ಆಟ ನಡೆಯಲಿಲ್ಲ. ಆದರೆ, ರೋಹಿತ್ ತಂಡ ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಅನ್ನು ಕೇವಲ 2 ದಿನಗಳಲ್ಲಿ ಮುಗಿಸಿತು. ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಯನ್ನು 2-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡುವ ಮೂಲಕ ಭಾರತ ಇತಿಹಾಸ ನಿರ್ಮಿಸಿದೆ. ಇದು ಭಾರತದ ನೆಲದಲ್ಲಿ ತಂಡದ ಸತತ 18ನೇ ಗೆಲುವಾಗಿದೆ. ಅದೇ ರೀತಿ ಸತತ ಆರನೇ ಬಾರಿಗೆ ತಂಡ ತವರು ನೆಲದಲ್ಲಿ ಟೆಸ್ಟ್ ಸರಣಿ ಗೆಲುವು ದಾಖಲಿಸಿದೆ. ಪಂದ್ಯದ ಎರಡನೇ ಮತ್ತು ಮೂರನೇ ದಿನ ಸತತ ಮಳೆಯಿಂದಾಗಿ ಒಂದೇ ಒಂದು ಎಸೆತವೂ ಬೀಳಲಿಲ್ಲ. ಮೊದಲ ದಿನ 35 ಓವರ್‌ಗಳು ಮಾತ್ರ ನಡೆದವು. ಅಷ್ಟರಲ್ಲಿ ಬಾಂಗ್ಲಾದೇಶ 3 ವಿಕೆಟ್ ಕಳೆದುಕೊಂಡು 107 ರನ್ ಗಳಿಸಿತು. 4ನೇ ದಿನದಾಟ ಆರಂಭವಾಗುತ್ತಿದ್ದಂತೆ ಪಂದ್ಯ ಡ್ರಾ ಆಗಲಿದೆ ಎಂದು ಎಲ್ಲರೂ ನಿರೀಕ್ಷಿಸಿದ್ದರು. 5ನೇ ದಿನದಾಟದ ಟೀ ವಿರಾಮಕ್ಕೂ ಮುನ್ನ ಭಾರತ ಎಲ್ಲರಿಗೂ ಆಘಾತ ನೀಡಿ ಪಂದ್ಯ ಗೆದ್ದುಕೊಂಡಿತು.