ಬೆಂಗಳೂರು : ತಪ್ಪೇ ಮಾಡುತ್ತಿಲ್ಲ ಎನ್ನುತ್ತಿದ್ದವರು ಈಗ ತಮ್ಮ ತಪ್ಪು ಒಪ್ಪಿಕೊಂಡು ಸತ್ಯಕ್ಕೆ ಶರಣಾಗಿರುವುದು ನಮ್ಮ ಹೋರಾಟಕ್ಕೆ ಸಿಕ್ಕ ಮತ್ತೊಂದು ಜಯ ಎಂದು ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಪಾರ್ವತಿ ಅವರು ಅವರಾಗಿಯೇ ಪತ್ರ ಬರೆದಿದ್ದಾರೋ ಅಥವಾ ಬಲವಂತವಾಗಿ ಬರೆದಿದ್ದಾರೋ ಗೊತ್ತಿಲ್ಲ. ನಾನು ಜಗ್ಗಲ್ಲ, ಬಗ್ಗಲ್ಲ ಅಂತಾ ಸಿದ್ದರಾಮಯ್ಯ ಆರ್ಭಟ ಮಾಡುತ್ತಿದ್ದರು. ನಾನ್ಯಾಕೆ ಸೈಟ್ ವಾಪಸ್ ಕೊಡಬೇಕು, ನನಗೆ 62 ಕೋಟಿ ಕೊಡುತ್ತಾರಾ ಅಂತಾ ಸಿದ್ದರಾಮಯ್ಯ ಹೇಳಿದ್ದರು. ಸಾಮಾಜಿಕ ಕಾರ್ಯಕರ್ತರು ಕೊಟ್ಟ ದೂರು, ಅದರ ಆಧಾರದಲ್ಲಿ ರಾಜ್ಯಪಾಲರು ಕೊಟ್ಟ ಅನುಮತಿ, ಕೋರ್ಟ್ ಆದೇಶ ಎಲ್ಲವೂ ಆಗಿದೆ. ಸಿದ್ದರಾಮಯ್ಯ ಸೈಟ್ ವಾಪಸ್ ಕೊಡುವ ನಿರ್ಧಾರ ಕೈಗೊಂಡಿದ್ದಾರೆ ಎಂದರೆ ಕಾನೂನಿನ ಕುಣಿಕೆಯಿಂದ ಪಾರಾಗಬೇಕು, ರಾಜಕೀಯ ಅನುಕಂಪ ಪಡೆಯಬೇಕು, ಸ್ವಪಕ್ಷದಲ್ಲೇ ತಡೆ ತಟ್ಟುವವರನ್ನು ಎದುರಿಸಬೇಕು ಅಂತಾ ಅಷ್ಟೇ. ಸೈಟ್ ವಾಪಸ್ ಕೊಟ್ಟಿರೋದು ಪೊಲಟಿಕಲ್ ಡ್ರಾಮಾ ಎಂದರು. ಈ ಹಿಂದೆ ಸಿದ್ಧರಾಮಯ್ಯ ಅವರು ಮಾತನಾಡಿದ್ದ ವಿಡಿಯೋವೊಂದನ್ನು ಬಿಡುಗಡೆ ಮಾಡಿದ್ದು. ಈ ವಿಡಿಯೋದಲ್ಲಿ ಸಿದ್ದರಾಮಯ್ಯ, ಬಿಜೆಪಿ ನಾಯಕ ಬಿ ಎಸ್ ವೈ ಅವರ ವಿರುದ್ಧ ಹರಿಹಾಯ್ದಿದ್ದಾರೆ. ತಪ್ಪು ಮಾಡಿದ್ದಕ್ಕೇ ಅಲ್ವಾ ಸೈಟು ಮರಳಿಸಿದ್ದು. ತಪ್ಪು ಮಾಡಿಲ್ಲ ಅಂದಾದರೆ ಸೈಟು ಕೊಟ್ಟಿದ್ಯಾಕೆ ಎಂದು ಮಾಧ್ಯಮಗಳ ಮುಂದೆ ಪ್ರಶ್ನೆ ಮಾಡಿದ್ದು, ಹಾಗಿದ್ದರೆ ನೀವೂ ಕೂಡಾ ಈಗ ತಪ್ಪು ಮಾಡಿದ್ದೀರಿ ಎಂದಿದ್ದಕ್ಕೆ ಸೈಟು ಹಿಂದಿರುಗಿಸಿದ್ದೀರಾ ಎಂದು ಸಿದ್ದರಾಮಯ್ಯನವರಿಗೆ ಪ್ರಶ್ನೆ ಮಾಡಿದ್ದಾರೆ.