ತಿರುಪತಿ: ತಿರುಪತಿಯ ತಿರುಮಲ ದೇವಸ್ಥಾನಕ್ಕೆ ಕಲಬೆರೆಕೆಯ ತುಪ್ಪ ಪೂರೈಸಿದ ದಿಂಡಿಗಲ್‌ನ ಎಆರ್ ಡೇರಿ ವಿರುದ್ಧ ದೇವಸ್ಥಾನದ ಆಡಳಿತ ಮಂಡಳಿ(ಟಿಟಿಡಿ) ದೂರು ನೀಡಿದೆ. ಲಡ್ಡುಗಳನ್ನು ತಯಾರಿಸಲು ಹಾಗೂ ಪೂಜೆಗೆ ಬಳಸಲು ದಿನನಿತ್ಯ ದೇವಸ್ಥಾನ ೧೫ ಸಾವಿರ ಕಿಲೋ ತುಪ್ಪ ಬಳಸುತ್ತಿದೆ. ಹೀಗಾಗಿ ದೇವಸ್ಥಾನವು ವಿವಿಧ ಡೇರಿಗಳ ಜೊತೆ ಒಪ್ಪಂದ ಮಾಡಿಕೊಂಡಿದೆ. ದಿಂಡಿಗಲ್‌ನ ಎಆರ್ ಡೇರಿ ಜೊತೆ ಕಳೆದ ಮೇ ತಿಂಗಳಲ್ಲಿ ಗುತ್ತಿಗೆ ಮಾಡಿಕೊಳ್ಳಲಾಗಿತ್ತು. ಅದರಂತೆ ಜೂನ್ ಮತ್ತು ಜುಲೈ ತಿಂಗಳಲ್ಲಿ ಈ ಡೇರಿ ಆರು ಟ್ಯಾಂಕರ್ ತುಪ್ಪ ಪೂರೈಸಿದೆ. ಆದರೆ ಆಗಸ್ಟ್ ೪ರಂದು ಕಳುಹಿಸಿದ ತುಪ್ಪ ಗುಣಮಟ್ಟದಿಂದ ಕೂಡಿಲ್ಲ ಎಂಬುದು ಪ್ರಯೋಗಾಲಯದ ಪರೀಕ್ಷೆಯಲ್ಲಿ ದೃಢಪಟ್ಟಿತ್ತು. ಈ ವಿಚಾರ ಬೆಳಕಿಗೆ ಬಂದ ನಂತರ ದೇಶದಾದ್ಯಂತ ಅದು ಚರ್ಚೆಗೆ ಗ್ರಾಸವಾಗಿದೆ.
























