ಇಸ್ರೇಲ್ ದಾಳಿಗೆ ೧೮೨ ಜನ ಬಲಿ

0
124

ಜರುಸಲೇಂ: ಹೆಜ್ಬೊಲ್ಲಾ ಪಡೆಗಳು ಭಾನುವಾರ ಇಸ್ರೇಲ್ ಮೇಲೆ ನೂರಾರು ರಾಕೆಟ್ ಹಾರಿಸಿ ಹೈಫಾ ನಗರಕ್ಕೆ ಭಾರಿ ಧಕ್ಕೆ ಉಂಟು ಮಾಡಿದ ಬೆನ್ನಲ್ಲೇ ಇದೀಗ ಲೆಬನಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ದಾಳಿಯಲ್ಲಿ ೧೮೨ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ ಮತ್ತು ೭೨೫ ಮಂದಿಗೆ ಗಾಯಗಳಾಗಿವೆ ಎಂದು ಲೆಬನಾನ್ ಆರೋಗ್ಯ ಸಚಿವಾಲಯ ಹೇಳಿದೆ.
ಬೆಳ್ಳಂಬೆಳಗ್ಗೆಯೇ ದಕ್ಷಿಣ ಲೆಬನಾನ್‌ನ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ಮಾಡಿದೆ. ಹೆಜ್ಬೊಲ್ಲಾ ಉಗ್ರ ನೆಲೆಗಳನ್ನು ಗುರಿಯಾಗಿಟ್ಟುಕೊಂಡು ದಾಳಿ ಮಾಡಲು ಮುಂದಾಗಿದ್ದ ಇಸ್ರೇಲ್ ಮುಂಚೆಯೇ ಲೆಬನಾನ್‌ನ ನಾಗರಿಕರಿಗೆ ಅಟೋಮೆಟೆಡ್ ಫೋನ್ ಕರೆ ಹಾಗೂ ಲೆಬನಾನ್ ರೆಡಿಯೋ ಸ್ಟೇಷನ್‌ಗಳನ್ನು ಹ್ಯಾಕ್ ಮಾಡಿ ದಾಳಿಯ ಮುನ್ನೆಚ್ಚರಿಕೆ ನೀಡಿತ್ತು. ಹೆಜ್ಬೊಲ್ಲಾ ಉಗ್ರರು ವಾಸವಿರುವ ಹಾಗೂ ಅವರು ಬಳಸಿಕೊಳ್ಳುತ್ತಿರುವ ಕಟ್ಟಡಗಳಿಂದ ದೂರ ತೆರಳಲು ಇಸ್ರೇಲ್ ಸೇನೆ ಸಂದೇಶ ಕೊಟ್ಟಿತ್ತು. ಆನಂತರವೇ ಇಸ್ರೇಲ್ ಲೆಬನಾನ್‌ನ ಮೇಲೆ ಕ್ಷಿಪಣಿ ದಾಳಿ ಮಾಡಿದೆ. ಮೃತಪಟ್ಟ ೧೮೨ಕ್ಕೂ ಹೆಚ್ಚು ಜನರ ಪೈಕಿ ಎಷ್ಟು ಉಗ್ರರಿದ್ದಾರೆ ಎನ್ನುವುದನ್ನು ಲೆಬನಾನ್ ಸ್ಪಷ್ಟಪಡಸಿಲ್ಲ. ಆದರೆ ಸತ್ತವರ ಪೈಕಿ ಮಕ್ಕಳು, ಮಹಿಳೆಯರೇ ಇದ್ದಾರೆ ಎಂದು ಹೇಳಿಕೊಂಡಿದೆ.
ಲೆಬನಾನ್‌ನಿಂದ ಪ್ರತಿ ದಾಳಿ: ಲೆಬನಾನ್ ಕೂಡ ಇಸ್ರೇಲ್ ಮೇಲೆ ರಾಕೆಟ್ ಹಾಗೂ ಡ್ರೋನ್ ಮೂಲಕ ಪ್ರತಿದಾಳಿ ಮಾಡಿದೆ. ೩೫ ರಾಕೆಟ್ ಹಾಗೂ ಡ್ರೋನ್ ಮೂಲಕ ಲೆಬನಾನ್ ಉತ್ತರ ಇಸ್ರೇಲ್ ಮೇಲೆ ದಾಳಿ ಮಾಡಿದೆ ಎಂದು ಇಸ್ರೇಲ್ ಸೇನೆ ಹೇಳಿದೆ. ಬಹುತೇಕ ರಾಕೆಟ್‌ಗಳು ಖಾಲಿ ಜಾಗದಲ್ಲಿ ಬಂದು ಬಿದ್ದಿದ್ದರಿಂದ ಅಷ್ಟಾಗಿ ಪ್ರಾಣ ಹಾನಿ ಆಗಿಲ್ಲ. ಆದರೆ ಇಸ್ರೇಲಿ ಮಾಧ್ಯಮ ಸಂಸ್ಥೆಗಳ ಪ್ರಕಾರ ಒಬ್ಬನಿಗೆ ದಾಳಿಯಲ್ಲಿ ಗಾಯವಾಗಿದೆ.

Previous articleದ್ವೇಷ ಬಿತ್ತುತ್ತಿರುವ ಬಿಜೆಪಿ: ರಾಹುಲ್ ಗಾಂಧಿ ಟೀಕೆ
Next articleಮಕ್ಕಳ ಅಶ್ಲೀಲ ಚಿತ್ರ ವೀಕ್ಷಣೆ ಅಪರಾಧ