ಬೆಂಗಳೂರು: ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದಗಳನ್ನ ತ್ವರಿತವಾಗಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಆಗ್ರಹಿಸಿದ್ದಾರೆ.
ತಿರುಪತಿ ಪ್ರಸಾದ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ಹಿಂದುಗಳ ಪವಿತ್ರ ಕ್ಷೇತ್ರವಾದ ತಿರುಮಲ ತಿರುಪತಿಯಲ್ಲಿ ಪ್ರಸಾದಗಳಿಗೆ ಪ್ರಾಣಿಗಳ ಕೊಬ್ಬು ಮತ್ತು ಮೀನಿನ ಎಣ್ಣೆ ಬಳಸುತ್ತಿದ್ದರು ಎಂಬುದು ಹಿಂದೂ ಸಮಾಜವನ್ನು ಚಿಂತೆಗೀಡು ಮಾಡಿದೆ. ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಈ ರೀತಿಯ ಹಲವಾರು ಹಿಂದೂ ವಿರೋಧಿ ಹೆಜ್ಜೆಗಳಿಗೆ ಜೊತೆ ನಿಂತಿದ್ದರು. ಅಷ್ಟೇ ಅಲ್ಲ ತಿರುಮಲ ತಿರುಪತಿಯ ಟ್ರಸ್ಟ್ ನಲ್ಲಿ ಹಿಂದೂಯೇತರರನ್ನು ಟ್ರಸ್ಟ್ ಸದಸ್ಯರನ್ನಾಗಿ ಮಾಡಿದ್ದರು. ಈ ರೀತಿಯ ವಿಚಾರಗಳು ಮತ್ತೆ ಮರುಕಳಿಸದಂತೆ ನೂತನ ಆಂಧ್ರ ಸರ್ಕಾರ ಎಚ್ಚರ ವಹಿಸಬೇಕು. ಹಾಗೂ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೂ ಎಲ್ಲಾ ಪವಿತ್ರ ಕ್ಷೇತ್ರಗಳ ಪ್ರಸಾದಗಳನ್ನ ತ್ವರಿತವಾಗಿ ಪರೀಕ್ಷೆಗೆ ಒಳಪಡಿಸಬೇಕು ಹಾಗೂ ಹಿಂದೂ ಧಾರ್ಮಿಕ ಟ್ರಸ್ಟ್ ಗಳಲ್ಲಿ ಹಿಂದೂಯೇತರರನ್ನು ನೇಮಕ ಮಾಡಬಾರದೆಂದು ಸರ್ಕಾರಕ್ಕೆ ಆಗ್ರಹಿಸುತ್ತೇನೆ ಎಂದಿದ್ದಾರೆ
                























