ಇದು ಪೂರ್ವ ನಿಯೋಜಿತ ಘಟನೆ

0
16

ನಾಗಮಂಗಲ: ಗಣಪತಿ ವಿಜಸರ್ಜನೆ ಮೆರವಣಿಗೆಯ ವೇಳೆ ನಡೆದಿರುವ ಈ ದುಷ್ಕೃತ್ಯ ಆಕಸ್ಮಿಕವಾಗಿ ನಡೆದಿರುವುದಲ್ಲ, ಇದು ಪೂರ್ವ ನಿಯೋಜಿತ ಘಟನೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣದಲ್ಲಿ ಬುಧವಾರ ರಾತ್ರಿ ನಡೆದಿರುವ ಕೋಮು ಗಲಭೆಯಲ್ಲಿ ಬೆಂಕಿಗಾಹುತಿಯಾಗಿರುವ ಅಂಗಡಿಗಳಿಗೆ ಭೇಟಿ ನೀಡುವ ಮೂಲಕ ಸ್ಥಳ ಪರಿಶೀಲನೆ ನಡೆಸಿದ ಅವರು ಮಾತನಾಡಿದರು.
ಪೊಲೀಸರ ಎದುರೇ ತಲ್ವಾರ್‌ಗಳು ಝಳಪಳಿಸುವುದಲ್ಲದೆ ಪೆಟ್ರೋಲ್ ಬಾಂಬ್ ದಾಳಿ ನಡೆಯುತ್ತದೆ ಎಂದರೆ ನಾವು ಎಲ್ಲಿದ್ದೇವೆ ಎಂಬುದು ಪ್ರಶ್ನೆಯಾಗಿದೆ. ಪೊಲೀಸ್ ಇಲಾಖೆಯ ನಿರ್ಲಕ್ಷ್ಯ ಮತ್ತು ಏಕ ಪಕ್ಷೀಯ ಧೋರಣೆಯಿಂದ ಹಿಂದುಗಳ ಮೇಲೆ ಇಂತಹ ಹಲ್ಲೆಯಾಗುತ್ತಿವೆ. ಇದೇ ಕಳೆದ ವರ್ಷ ಗಣಪತಿ ವಿಷಯವಾಗಿ ಗಲಾಟೆಯಾಗಿದ್ದ ಸ್ಥಳದಲ್ಲಿಯೇ ಈಗಲೂ ಆಗಿದೆ ಎಂದರೆ ಇದು ಪೂರ್ವ ನಿಯೋಜಿತವಲ್ಲದೆ ಮತ್ತೇನು?. ಪ್ರಕರಣ ಸಂಬಂಧ ಸೂಕ್ತ ತನಿಖೆಯಾಗುವ ಜೊತೆಗೆ ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮವಾಗಬೇಕು. ದುಷ್ಕರ್ಮಿಗಳ ದುಷ್ಕೃತ್ಯದಿಂದ ಬೆಂಕಿಗಾಹುತಿಯಾಗಿರುವ ಅಂಗಡಿ ಮಾಲೀಕರಿಗೆ ಸೂಕ್ತ ಪರಿಹಾರ ನೀಡಬೇಕು. ಕೇವಲ ಲೆಕ್ಕಕ್ಕಾಗಿ ವಶಕ್ಕೆ ಪಡೆದಿರುವ ಗಣಪತಿ ಸೇವಾ ಸಮಿತಿಯ ಅಮಾಯಕ ಯುವಕರನ್ನು ಬಿಡುಗಡೆ ಮಾಡಬೇಕು. ಪ್ರಕರಣದ ನೈಜತೆ ತನಿಖೆಯಾಗಬೇಕು ಎಂದು ಆಗ್ರಹಿಸಿದರು. ಬೆಂಕಿಗಾಹುತಿಯಾಗಿದ್ದ ಸಾಧನಾ ಟೇಕ್ಸ್ ಟೈಲ್ಸ್ ಬಟ್ಟೆ ಅಂಗಡಿ ಹಾಗೂ ಮೈಸೂರು ರಸ್ತೆಯ ಬಜಾಜ್ ಶೋ ರೂಂಗೆ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜೆಯೇಂದ್ರ ಹಾಗೂ ಎಂಎಲ್ಸಿ ಸಿಟಿ ರವಿ ಇದ್ದರು.

Previous articleಮುಡಾ ಹಗರಣ: ಸಿಎಂ ಅರ್ಜಿ ತೀರ್ಪು ಕಾಯ್ದಿರಿಸಿದ ಹೈಕೋರ್ಟ್​
Next articleಅಂಗನವಾಡಿ ಮಕ್ಕಳ ಆಹಾರ ಪೂರೈಕೆಯಲ್ಲೂ ಅವ್ಯವಹಾರ