ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಆಗಿದೆ. ದೀಪಾವಳಿ ಒಳಗಾಗಿ ಸಿದ್ದರಾಮಯ್ಯ ಸರ್ಕಾರ ಅಸ್ಥಿರವಾಗಲಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಹುಬ್ಬಳ್ಳಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ರಾಜೀನಾಮೆಗೆ ಕಾಂಗ್ರೆಸ್ ಹೈಕಮಾಂಡ್ ಮೂಹೂರ್ತ ನಿಗದಿ ಮಾಡಿದೆ. ಸಿದ್ದರಾಮಯ್ಯ ಅವರ ಹಿಂದೆ ಬಂಡೆಯಂತೆ ನಿಂತಿದ್ದೇವೆ ಎನ್ನುವವರಿಂದಲೇ ಕಾಂಪಿಟೇಶನ್ ಶುರುವಾಗಿದೆ. ಸಿಎಂ ರೇಸ್‌ನಲ್ಲಿ ಡಜನ್‌ಗೂ ಅಧಿಕ ಆಕಾಂಕ್ಷಿಗಳಾಗಿದ್ದಾರೆ ಎಂದರು.
ಕಾಂಗ್ರೆಸ್ ಸರ್ಕಾರದಲ್ಲಿ ಬರೀ ಹಗರಣಗಳೇ ಸುದ್ದಿ. ಇದು ಭ್ರಷ್ಟಾಚಾರದ ಸರ್ಕಾರ. ಉಪ್ಪು ತಿಂದವರು ನೀರು ಕುಡಿಯಲೇಬೇಕು. ಅವರ ಹಗರಣಗಳನ್ನು ಮರೆಮಾಚಲು ಇನ್ನೊಬ್ಬರ ಕಡೆ ಬೊಟ್ಟು ಮಾಡುತ್ತಿದ್ದಾರೆ. ಆದರೆ, ಭ್ರಷ್ಟಾಚಾರವನ್ನು ಮುಚ್ಚಿ ಹಾಕಲು ಸಾಧ್ಯವಿಲ್ಲ. ಸತ್ಯ ಯಾವತ್ತಾದರೂ ಹೊರಬರಲೇಬೇಕು ಎಂದು ಹೇಳಿದರು.