ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತಿಮ ಹಂತ ತಲುಪಿದ್ದು, ಇನ್ನೇರಡು ದಿನದಲ್ಲಿ ಕಾಮಾಕ್ಷಿಪಾಳ್ಯ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ಕೊಲೆ ಪ್ರಕರಣದ ಆರೋಪಿ ನಟ ದರ್ಶನ್ ಸೇರಿದಂತೆ ೧೭ ಜನರ ವಿರುದ್ಧ ಪ್ರಕರಣ ದಾಖಲಾಗಿ ಇಂದಿಗೆ ಬರೋಬ್ಬರಿ ೮೬ ದಿನ ಕಳೆದಿವೆ. ನಿಯಮಾನುಸಾರ ಎಫ್‌ಐಆರ್ ದಾಖಲಾದ ೯೦ ದಿನ ಒಳಗಾಗಿ ತನಿಖಾಧಿಕಾರಿಗಳು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಬೇಕು. ನಗರದ ಸಮ್ಮನಹಳ್ಳಿಯಲ್ಲಿನ ಶೆಡ್‌ವೊಂದರಲ್ಲಿ ಜೂನ್ ೮ ರಂದು ರಾತ್ರಿ ರೇಣುಕಾಸ್ವಾಮಿಯನ್ನು ಅಮಾನವೀಯವಾಗಿ ಕೊಲೆ ಮಾಡಿ, ಮೃತ ದೇಹವನ್ನು ರಾಜಕಾಲುವೆಗೆ ಎಸೆಯಲಾಗಿತ್ತು. ಜೂ.೯ ರಂದು ನಟ ದರ್ಶನ್ ಅವರ ಗೆಳತಿ ಪವಿತ್ರಾಗೌಡ ಸೇರಿದಂತೆ ಇತರ ೧೫ ಜನ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಬಂಧಿಸಿದ್ದರು.
ಎಫ್‌ಸಿಎಲ್ ವರದಿ: ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರೋಪಿಗಳ ವಿರುದ್ಧ ಸುಮಾರು ೨೫೦ಕ್ಕೂ ಹೆಚ್ಚು ಸಾಕ್ಷಾಧಾರಗಳನ್ನು ಸಂಗ್ರಹಿಸಿದ್ದಾರೆ. ಹೈದರಾಬಾದ್ ಎಫ್‌ಸಿಎಲ್‌ಗೆ ಮೊಬೈಲ್ ನೆಟವರ್ಕ್, ರಿಟ್ರೀವ್ ಸೇರಿದಂತೆ ಕೆಲವು ತಾಂತ್ರಿಕ ವರದಿಗಳು ಈಗಾಗಲೇ ಪೊಲೀಸರ ಕೈ ಸೇರಿವೆ. ಅವುಗಳಿಗೆ ಸಂಬಂಧಿಸಿದಂತೆ ಪೂರಕ ತನಿಖೆ ಕೈಗೊಂಡಿರುವ ಪೊಲೀಸರು ಇಂದು ಅಥವಾ ನಾಳೆ ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಕೆ ಮಾಡಲಿದ್ದಾರೆ.
ಅತಿ ಹೆಚ್ಚು ಸಾಕ್ಷಿಗಳನ್ನು ಕಲೆ ಹಾಕಿದ ಪ್ರಕರಣವಾಗಿದ್ದು, ಈಗಾಗಲೇ ಸಾಬೀತಾಗಿರುವ ಸಾಕ್ಷಾಧಾರಗಳು ಹಾಗೂ ಆರೋಪಿಗಳ ಪರ ವಹಿಸಿ ಬಂದ ಹೇಳಿಕೆಗಳೇ ದರ್ಶನ್‌ಗೆ ಕಂಟಕವಾಗಲಿದೆ.
ಪ್ರಕರಣದ ನೇತೃತ್ವ ವಹಿಸಿರುವ ಎಸಿಪಿ ಚಂದನ್ ನೇತೃತ್ವದ ತಂಡ ಈ ಪ್ರಕರಣವನ್ನು ಗಂಭೀರವಾಗಿ ಪಡೆದಿದ್ದಾರೆ. ಅಲ್ಲದೇ ದರ್ಶನ್ ಮನೆಯ ಸಿಸಿಟಿವಿ ರಿಟ್ರೀವ್ ಸಹ ಒಂದು ಮಹತ್ವದ ಸಾಕ್ಷಿಯಾಗಿದೆ. ಮೊಬೈಲ್, ಸಿಸಿಟಿವಿ ವಿಡಿಯೊಗಳನ್ನು ಡಿಲೀಟ್ ಮಾಡಿರುವ ದೃಶ್ಯಗಳು ಪೊಲೀಸರ ಕೈ ಸೇರಿವೆ.
ಮೂರು ತಿಂಗಳ ನಿರಂತರ ತನಿಖೆ: ಕಳೆದ ಮೂರು ತಿಂಗಳಿಂದ ನಡೆಸುತ್ತಿರುವ ತನಿಖೆ ಹತ್ತಾರು ಪೊಲೀಸರ ಶ್ರಮ, ಅನೇಕ ಸಾಕ್ಷಿಗಳ ಕಲೆ ಸೇರಿದಂತೆ ಪೊಲೀಸರ ಚಾರ್ಜ್ಶೀಟರ್ ತೀವ್ರ ಕುತೂಹಲ ಮೂಡಿಸಿದೆ. ದರ್ಶನ್ ವಿರುದ್ಧ ದೊರತೆ ಸಾಕ್ಷಿ,ಪುರಾವೆಗಳ ಆಧಾರದ ಮೇಲೆ ಎ-೨ ಆರೋಪಿಯಾಗಿದ್ದ ದರ್ಶನ್ ಅವರನ್ನು ಎ-೧ ಮಾಡುವ ಸಾಧ್ಯತೆ ಇದೆ ಎನ್ನಲಾಗಿದೆ. ಒಂದು ವೇಳೆ ಎ೧ ಆರೋಪಿಯನ್ನಾಗಿ ಮಾಡಿದರೆ ದರ್ಶನ್‌ಗೆ ಬಳ್ಳಾರಿ ಕೇಂದ್ರ ಕಾರಾಗೃಹವೇ ಖಾಯಂ ಆಗಲಿದೆ ಎನ್ನಲಾಗಿದೆ.