ಗದಗ: ಗದಗ ನಗರದಿಂದ ಕೈದಿಯೋರ್ವನನ್ನು ಧಾರವಾಡ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯುವಾಗ ಗದಗ ಸಶಸ್ತ್ರ ಮೀಸಲು ಪಡೆ ಪೇದೆಯೋರ್ವ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.
ಹೃದಯಾಘಾತದಿಂದ ಸಾವನ್ನಪ್ಪಿದ ಪೇದೆಯನ್ನು ಮೀಸಲು ಪೊಲೀಸ್ ಪಡೆಯ ವಾಹನ ಚಾಲಕ ಬಸವರಾಜ ವಿಠ್ಠಲಾಪುರ ಎಂದು ಗುರುತಿಸಲಾಗಿದೆ. ಗದಗ ಉಪಕಾರಾಗೃಹದಿಂದ ಧಾರವಾಡ ಜಿಲ್ಲಾ ಕಾರಾಗೃಹಕ್ಕೆ ಕೈದಿ ಕರೆದೊಯ್ಯುವಾಗ ಧಾರವಾಡದ ನ್ಯಾಯಾಲಯದ ಬಳಿ ಚಾಲಕನಿಗೆ ತೀವ್ರ ಎದೆ ನೋವು ಕಾಣಿಸಿದೆ. ಎದೆ ನೋವು ಕಾಣಿಸಿಕೊಂಡ ಕೂಡಲೇ ವಾಹನ ಚಾಲಕ ತಕ್ಷಣವೇ ವಾಹನ ರಸ್ತೆಯ ಪಕ್ಕಕ್ಕೆ ತೆಗೆದುಕೊಂಡು ನಿಲ್ಲಿಸಿದ್ದಾನೆ. ವಾಹನ ನಿಲ್ಲಿಸಿದ ಮರುಕ್ಷಣವೇ ಬಸವರಾಜ ಸಾವನ್ನಪ್ಪಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.