ಹಾವೇರಿ(ಹಾನಗಲ್ಲ): ಮಾವಿನತೋಟದಲ್ಲಿ ಮೇಯುತ್ತಿದ್ದ ಎಮ್ಮೆಗಳ ಮೇಲೆ ವಿದ್ಯುತ್ ತಂತಿ ಬಿದ್ದು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗಿರಿಸಿನಕೊಪ್ಪ ಗ್ರಾಮದಲ್ಲಿ ನಡೆದಿದೆ.
ತಾಲೂಕಿನ ಡೊಳ್ಳೇಶ್ವರ ಗ್ರಾಮದ ರೈತ ಸಿದ್ದಲಿಂಗಪ್ಪ ಸಿದ್ದಪ್ಪ ಬಾಳೂರ ಅವರಿಗೆ ಸೇರಿದ ಮೂರು ಎಮ್ಮೆಗಳು ಸಾವನ್ನಪ್ಪಿವೆ. ಸಿದ್ದಲಿಂಗಪ್ಪನ ಸಹೋದರ ಶಂಭುಲಿಂಗಪ್ಪ ತಮ್ಮ ಗಿರಿಸಿನಕೊಪ್ಪದ ಮಾವಿನ ತೋಟದಲ್ಲಿ ಜಾನುವಾರುಗಳನ್ನು ಮೇಯಿಸುತ್ತಿದ್ದಾಗ, ತೋಟದ ಮಧ್ಯ ಭಾಗದಲ್ಲಿ ಹಾಯ್ದು ಹೋಗಿದ್ದ ವಿದ್ಯುತ್ ಕಂಬದ ತಂತಿಗಳು ಒಂದಕ್ಕೊಂದು ತಾಗಿ ವಿದ್ಯುತ್ ಪ್ರವಹಿಸಿದೆ. ಆಗ ತಂತಿ ತುಂಡಾಗಿ ತೋಟದಲ್ಲಿ ಮೇಯುತ್ತಿದ್ದ ಎಮ್ಮೆಗಳ ಮೇಲೆ ಬಿದ್ದಿದೆ. ಹೀಗಾಗಿ ಸ್ಥಳದಲ್ಲಿಯೇ ಮೂರೂ ಎಮ್ಮೆಗಳು ಸಾವನ್ನಪ್ಪಿವೆ ಎಂದು ಸಿದ್ದಲಿಂಗಪ್ಪ ಬಾಳೂರ ಹಾನಗಲ್ಲ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಪಶು ವೈದ್ಯಾಧಿಕಾರಿ ಗಿರೀಶ ರೆಡ್ಡೇರ ಎಮ್ಮೆಗಳ ಮರಣೋತ್ತರ ಪರೀಕ್ಷೆ ಕೈಗೊಂಡಿದ್ದಾರೆ.