ಹುಬ್ಬಳ್ಳಿ: ದೇಶದಲ್ಲಿ ಸಾಂಕ್ರಾಮಿಕ ರೋಗಬಾಧೆ ಕಡಿಮೆಯಾಗುತ್ತಿದ್ದು, ಸಾಂಕ್ರಾಮಿಕೇತರ, ಜೀವನಶೈಲಿ ರೋಗಗಳು ಹೆಚ್ಚಾಗುತ್ತಿವೆ ಎಂದು ಬೆಂಗಳೂರಿನ ಆರ್.ಆರ್.ಸಮೂಹ ಸಂಸ್ಥೆಗಳ ಶ್ರೀ ಚಾಮುಂಡೇಶ್ವರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ತಜ್ಞ ವೈದ್ಯರಾದ ಡಾ.ಯೋಗೇಶ್ ಹೇಳಿದರು.
ಸಂಯುಕ್ತ ಕರ್ನಾಟಕದ ವತಿಯಿಂದ ವಿದ್ಯಾನಗರದ ಸ್ಟೆಲ್ಲರ್ ಮಾಲ್‌ದಲ್ಲಿ ಏರ್ಪಡಿಸಲಾದ ಆರೋಗ್ಯ ಹಬ್ಬದಲ್ಲಿ ರವಿವಾರ ವಿವಿಧ ರೋಗಗಳಿಗೆ ಚಿಕಿತ್ಸೆ ಮತ್ತು ಸಂರಕ್ಷಣೆ ವಿಷಯದ ಕುರಿತು ಉಪನ್ಯಾಸ ನೀಡಿ, ಕೋವಿಡ್, ಶೀತ, ಕೆಮ್ಮು, ಎಚ್೧ಎನ್೧, ಡೆಂಗ್ಯು ಮುಂತಾದವುಗಳು ಸಾಂಕ್ರಾಮಿಕ ರೋಗಗಳಾಗಿದ್ದು, ಡಯಾಬಿಟೀಸ್, ಬಿಪಿ, ಹೈಪರ್‌ಟೆನ್ಶನ್, ಹೃದ್ರೋಗ, ಕಿಡ್ನಿ ರೋಗ ಸಾಂಕ್ರಾಮಿಕೇತರ, ಜೀವನಶೈಲಿ ರೋಗಗಳಾಗಿವೆ. ಇತ್ತೀಚೆಗೆ ಸಾಂಕ್ರಾಮಿಕ ರೋಗಗಳಿಗಿಂತ ಸಾಂಕ್ರಾಮಿಕೇತರ, ಜೀವನಶೈಲಿ ರೋಗಗಳು ಹೆಚ್ಚಾಗುತ್ತಿವೆ. ೨೦೧೬ರಲ್ಲಿ ಸಾಂಕ್ರಾಮಿಕ ರೋಗಗಳಿಂದ ಶೇ.೨೭.೫ರಷ್ಟು ಸಾವು ಸಂಭವಿಸಿದ್ದರೆ, ಡಯಾಬಿಟೀಸ್ ಮುಂತಾದ ಜೀವನಶೈಲಿ ರೋಗಗಳಿಂದ ಶೇ.೬೧.೮ರಷ್ಟು ಸಂಭವಿಸಿವೆ ಎಂದು ಹೇಳಿದರು.
ಇಂಟರ್ನ್ಯಾಶನಲ್ ಡಯಾಬಿಟಿಕ್ ಫೆಡರೇಶನ್ ಪ್ರಕಾರ, ೨೦೧೯ರಲ್ಲಿ ಭಾರತದಲ್ಲಿ ೭೭ ದಶಲಕ್ಷ ಜನ ಡಯಾಬಿಟೀಸ್‌ನಿಂದ ಬಳಲಿದ್ದು, ೨೦೩೦ರ ಹೊತ್ತಿಗೆ ೧೦೦.೯೫ ದಶಲಕ್ಷ ಜನರಿಗೆ ಡಯಾಬಿಟೀಸ್ ಬರುವ ಸಂಭವ ಇದೆ. ೪೩.೯ ದಶಲಕ್ಷ ಜನರಿಗೆ ಡಯಾಬಿಟೀಸ್ ಇರುವುದೇ ತಿಳಿದಿಲ್ಲ. ಡಯಾಬಿಟೀಸ್ ಚಿಕಿತ್ಸೆಗೆ ನಗರಪ್ರದೇಶಗಳಲ್ಲಿ ವಾರ್ಷಿಕವಾಗಿ ಸರಾಸರಿ ೫೦,೦೦೦ ರೂಗಿಂತ ಜಾಸ್ತಿಯಾಗಿದೆ. ಬಡವರು ಮತ್ತು ಮಧ್ಯಮವರ್ಗದವರಿಗೆ ಹೊರೆಯಾಗುತ್ತಿದೆ ಎಂದು ಹೇಳಿದರು.
ಬದಲಾದ ಜೀವನಶೈಲಿಯಿಂದಾಗಿ ಮಕ್ಕಳು, ಯುವಕರು, ಮಧ್ಯವಯಸ್ಸಿನ ಪುರುಷರು ಮತ್ತು ಮಹಿಳೆಯರಲ್ಲಿ ಬೊಜ್ಜು ಹೆಚ್ಚುತ್ತಿದೆ. ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ ದೇಹದ ತೂಕ ೩೦ ಕೆಜಿಗಿಂತ ಜಾಸ್ತಿ ಇದ್ದರೆ ಅದನ್ನು ಬೊಜ್ಜು ಎನ್ನಲಾಗುತ್ತಿದೆ. ಯಾವುದೇ ದೈಹಿಕ ಶ್ರಮ ಇಲ್ಲದಿರುವುದು, ಎಲ್ಲದಕ್ಕೂ ಯಂತ್ರಗಳನ್ನು ಅವಲಂಬಿಸಿ ಸೋಮಾರಿತನ ಮೈಗೂಡಿಸಿಕೊಂಡಿರುವುದು ಮುಂತಾದ ಕಾರಣಗಳಿಂದಾಗಿ ಇತ್ತೀಚೆಗೆ ಜನರಲ್ಲಿ ಬೊಜ್ಜು ಹೆಚ್ಚಾಗುತ್ತಿದೆ. ಇದರಿಂದಾಗಿ ಡಯಾಬಿಟೀಸ್, ಬಿಪಿ, ಕ್ಯಾನ್ಸರ್ ಮುಂತಾದ ರೋಗಗಳು ಉದ್ಭವಿಸುತ್ತಿವೆ. ಹೀಗಾಗಿ ತೂಕ ಇಳಿಸಲು ಹೈ ಕ್ಯಾಲರಿ ಆಹಾರವನ್ನು ತೆಗೆದುಕೊಳ್ಳಬಾರದು. ವಾರಕ್ಕೆ ೧೫೦ ರಿಂದ ೩೦೦ ನಿಮಿಷ ವಾಕಿಂಗ್ ಮಾಡಬೇಕು. ದಿನಕ್ಕೆ ೩೨ ನಿಮಿಷ ವಾಕಿಂಗ್ ಮಾಡಬೇಕು. ವರ್ಷಕ್ಕೆ ಕನಿಷ್ಠ ಶೇ.೮-೧೦ರಷ್ಟು ತೂಕ ಇಳಿಸಿಕೊಳ್ಳಬೇಕು ಎಂದು ಹೇಳಿದರು.
ಡಯಾಬಿಟೀಸ್‌ನಲ್ಲಿ ಮೊದಲ ಮೂರು ಹಂತ ಅತ್ಯಂತ ನಿರ್ಣಾಯಕ. ಈ ಹಂತದಲ್ಲಿ ಸಮರ್ಪಕವಾಗಿ ಚಿಕಿತ್ಸೆ ದೊರೆತರೆ ಡಯಾಬಿಟೀಸ್ ಬರುವದನ್ನು ಕನಿಷ್ಠ ಹತ್ತು ವರ್ಷ ಮುಂದೂಡಬಹುದು. ನಿಯಮಿತವಾಗಿ ಚೆಕ್ ಅಪ್ ಮಾಡಿಸಿಕೊಳ್ಳಲೇಬೇಕು. ನಾಲ್ಕನೇ ಹಂತವನ್ನು ದಾಟಿದರೆ ಶಾಶ್ವತವಾಗಿ ಡಯಾಬಿಟೀಸ್ ಅಂಟಿಕೊAಡಿತು ಎಂದೇ ಅರ್ಥ. ಡಯಾಬಿಟೀಸ್ ಹೆಚ್ಚಾದರೆ ಹೃದಯಾಘಾತ, ಅಂಧತ್ವ, ಕಿಡ್ನಿ ವೈಫಲ್ಯ, ಗ್ಯಾಂಗ್ರೀನ್ ಮುಂತಾದ ತೊಂದರೆಗಳು ಉದ್ಭವಿಸುತ್ತವೆ ಎಂದು ಹೇಳಿದರು.
ಬಿಪಿ ಇರುವ ಪೇಶೆಂಟ್ ಉಪ್ಪಿನಕಾಯಿ ತಿನ್ನಬಾರದು. ಉಪ್ಪು ತಿನ್ನುವುದು ಕಡಿಮೆ ಮಾಡಬೇಕು. ಔಷಧ, ಮಾತ್ರೆಯನ್ನು ನಿರಂತರವಾಗಿ ತೆಗೆದುಕೊಳ್ಳಬೇಕು. ಆಗಾಗ ಔಷಧ, ಮಾತ್ರೆ ತೆಗೆದುಕೊಳ್ಳುವುದು ಸರಿಯಲ್ಲ. ಫಾಸ್ಟ್ ಬ್ರೀದಿಂಗ್(ತೀವ್ರ ಉಸಿರು ಎಳೆದುಕೊಳ್ಳುವ) ಪ್ರಾಣಾಯಾಮ ಮಾಡಬಾರದು. ಸಮತೋಲಿತ ಆಹಾರ ಸೇವಿಸಬೇಕು. ನಿಯಮಿತವಾಗಿ ಚೆಕ್ ಅಪ್ ಮಾಡಿಸಬೇಕು ಎಂದು ಹೇಳಿದರು.