ಕೊಪ್ಪಳ: ಯಾದಗಿರಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಅನುಮಾನಾಸ್ಪದವಾಗಿ ಮೃತಪಟ್ಟಿದ್ದ ಪಿಎಸ್ಐ ಪರಶುರಾಮ ಅವರ ಮನೆಗೆ ಗೃಹ ಸಚಿವ ಜಿ. ಪರಮೇಶ್ವರ್ ಭೇಟಿ ನೀಡಿದ್ದಾರೆ.
ಪಿಎಸ್ಐ ಪರಶುರಾಮ ಅವರ ಕುಟುಂಬಕ್ಕೆ 50 ಲಕ್ಷ ರೂ. ನೀಡುವುದಾಗಿ ಜಿ ಪರಮೇಶ್ವರ್ ಘೋಷಣೆ ಮಾಡಿದ್ದು, ಪರಶುರಾಮ ಪತ್ನಿಗೆ ಇಲಾಖೆಯಲ್ಲಿ ಸೂಕ್ತವಾದ ಕೆಲಸ ಕೊಡುವವುದಾಗಿ ತಿಳಿಸಿದ್ದಾರೆ. ಕಾರಟಗಿ ತಾಲೂಕಿನ ಸೋಮನಾಳ ಗ್ರಾಮದಲ್ಲಿನ ಪರಶುರಾಮ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವಾನ ಹೇಳಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಶಾಸಕ ಮತ್ತು ಅವರ ಪುತ್ರನ ಮೇಲೆ ಆರೋಪ ಮಾಡಿದ್ದಾರೆ. ತನಿಖೆಗೆ ಆದೇಶ ಮಾಡಿದ್ದೇನೆ. ಸ್ಥಳೀಯ ಅಧಿಕಾರಿಗಳಿಂದ ನ್ಯಾಯ ಸಿಗುವುದಿಲ್ಲ ಎಂದು ಅವರ ಕುಟುಂಬದವರು ಅನುಮಾನಿಸಿದ ಕಾರಣ ಆರೋಪ ಕೇಳಿಬಂದ ದಿನವೇ ಸಿಐಡಿ ತನಿಖೆಗೆ ಪ್ರಕರಣವನ್ನು ನೀಡಿದ್ದೇವೆ. ಅದರ ಬಗ್ಗೆ ತನಿಖೆ ನಡೆಯುತ್ತಿದೆ. ಯಾರು ಕೂಡ ಹಣ ತೆಗೆದುಕೊಂಡು ವರ್ಗಾವಣೆ ಮಾಡಲ್ಲ. ವರ್ಗಾವಣೆಗೆ ಎರಡು ವರ್ಷ ನಿಗದಿ ಮಾಡಿದ್ದೇವೆ ಎಂದು ತಿಳಿಸಿದರು.