ಬಸವಕಲ್ಯಾಣ(ಬೀದರ್): ರಾತ್ರಿ ವೇಳೆ ಮಣ್ಣಲ್ಲಿ ಹೂತಿದ್ದ ಮಗು ಬೆಳಗಾಗುವಷ್ಟರಲ್ಲಿ ಮರಕ್ಕೆ ಕಟ್ಟಿದ ಜೋಕಾಲಿಯಲ್ಲಿ ಪ್ರತ್ಯಕ್ಷಗೊಂಡ ತಾಲ್ಲೂಕಿನ ಮಂಠಾಳ ಗ್ರಾಮದಲ್ಲಿ ಭಾನುವಾರ ಬೆಳಿಗ್ಗೆ ಜರುಗಿದೆ.
ಮಂಠಾಳ ಗ್ರಾಮದ ನಿವಾಸಿ ಅಂಬಯ್ಯ ಸ್ವಾಮಿ ಅವರ ಒಂದೂವರೆ ವರ್ಷದ ಹೆಣ್ಣು ಮಗು ಶನಿವಾರ ಸಂಜೆ ಅನಾರೋಗ್ಯದಿಂದ ಮೃತಪಟ್ಟಿತ್ತು. ಮಗು ಮೃತಪಟ್ಟ ನಂತರ ತಡರಾತ್ರಿ ೧೨ರ ಸುಮಾರಿಗೆ ಕುಟುಂಬಸ್ಥರು ಹಾಗೂ ಸಂಬಂಧಿಕರು ಕೂಡಿ ಮಗುವಿಗೆ ಗ್ರಾಮದ ಪಕ್ಕದ ಜಮೀನಿನಲ್ಲಿ ಅಂತ್ಯಸಂಸ್ಕಾರ ನೆರವೇರಿಸಿ ಮನೆಗೆ ಬಂದಿದ್ದಾರೆ. ಮಗು ಮಣ್ಣಲ್ಲಿ ಹೂತು ಮನೆಗೆ ಬಂದ ಪಾಲಕರು ಹಾಗೂ ಗ್ರಾಮಸ್ಥರಿಗೆ ಬೆಳಗಾಗುವಷ್ಟರಲ್ಲಿ ಆಶ್ಚರ್ಯ ಕಾದಿತ್ತು. ರಾತ್ರಿ ಸಮಯದಲ್ಲಿ ಮಣ್ಣಲ್ಲಿ ಹೂತಿದ್ದ ಮಗು ಬೆಳಿಗ್ಗೆ ಮರಕ್ಕೆ ಬಟ್ಟೆಯಿಂದ ಕಟ್ಟಿದ ಜೋಕಾಲಿಯಲ್ಲಿ ಮಲಗಿದ ಸ್ಥಿತಿಯಲ್ಲಿ ಪ್ರತ್ಯಕ್ಷಗೊಂಡಿದೆ.