ಮಧುಗಿರಿಯಲ್ಲಿಯೂ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ

0
16

ತುಮಕೂರು: ಪಾವಗಡದಂತೆಯೇ ಮಧುಗಿರಿಯಲ್ಲಿಯೂ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಿದ್ದೇವೆ ಎಂದು ಇಂಧನ ಸಚಿವ ಕೆ.ಜೆ.ಜಾರ್ಜ್ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿ,
ಮಹತ್ವಕಾಂಕ್ಷೆಯ ಕುಸುಮ್ ಬಿ ಅಂಡ್ ಸಿ ಯೋಜನೆಗೆ ಚಾಲನೆ ಸಿಕ್ಕಿದ್ದು ಕ್ಯಾಬಿನೇಟ್‌ನಲ್ಲಿ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಸೋಲಾರ್ ಸಬ್ ಸ್ಟೇಷನ್‌ಗಳಿದ್ದು ೩ ಸಾವಿರ ಮೆಗಾವ್ಯಾಟ್ ಉತ್ಪಾದನೆ ಮಾಡಿ ರೈತರಿಗೆ ಕೊಡಲಾಗುವುದು. ಎಲ್ಲೆಲ್ಲಿ ಸರ್ಕಾರಿ ಜಾಗ ಇದೆ. ಅದನ್ನು ಉಚಿತವಾಗಿ ಕೊಡಬೇಕು ಎಂತಾ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸಲಾಗಿದೆ. ಉಚಿತವಾಗಿ ಜಮೀನು ಸಿಕ್ಕರೂ ಕೂಡ ಗುತ್ತಿಗೆದಾರರು ಪಾವಗಡದಲ್ಲಿ ರೈತರಿಗೆ ಹೇಗೆ ಎಕರೆಗೆ ೨೫ ಸಾವಿರ ರೂ. ನೀಡಲಾಗುತ್ತಿದೆಯೋ ಅದೇರೀತಿ ಗುತ್ತಿಗೆದಾರರು ಪ್ರತಿ ಎಕರೆಗೆ ಹಣ ನೀಡಬೇಕು. ಆ ಹಣವನ್ನು ಜಿಲ್ಲಾಧಿಕಾರಿ ಖಾತೆಯಲ್ಲಿ ಡೆಪಾಸಿಟ್ ಮಾಡಲಾಗುತ್ತೆ. ಆ ಹಣದಲ್ಲಿ ಯಾವ ಪ್ರದೇಶದಲ್ಲಿ ಜಮೀನು ಪಡೆಯುತ್ತೇವೋ, ಆ ಪ್ರದೇಶದ ಸುತ್ತಮುತ್ತಲಿನ ಊರುಗಳಲ್ಲಿ ಮೂಲ ಸೌಕರ್ಯ ಅಭಿವೃದ್ಧಿಪಡಿಸಲಾಗುವುದು. ಈಗಾಗಲೇ ೭೩೫ ಮೆಗಾವ್ಯಾಟ್ ಸೋಲಾರ್ ವಿದ್ಯುತ್ ಉತ್ಪಾದನೆಗೆ ಟೆಂಡರ್ ಕರೆದು ಗುತ್ತಿಗೆದಾರರಿಗೆ ಕೊಡಲಾಗಿದೆ ಎಂದರು. ಪಾವಗಡ ಸೋಲಾರ್ ಪಾರ್ಕ್ ವಿಸ್ತರಣೆ ಮಾಡುವ ವಿಚಾರ ಸಂಬAಧ ಮಾತನಾಡಿ, ಪಾವಗಡ ಸೋಲಾರ್ ಪಾರ್ಕ್ನಲ್ಲಿ ೨೦೦೦ ಮೆಗಾ ವ್ಯಾಟ್ ಉತ್ಪಾದನೆ ಮಾಡಲಾಗುತ್ತಿದೆ. ನಮಗೆ ಬೇಡಿಕೆ ಕಡಿಮೆ ಇತ್ತು, ಹೀಗಾಗಿ ವಿಸ್ತರಣೆ ಆಗಿರಲಿಲ್ಲ. ಆದರೆ ಇದೀಗ ಬೇಡಿಕೆ ಬಂದಿದೆ. ಜೊತೆಗೆ ನಾನು ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅಲ್ಲಿ ಹೋದಾಗ,ನಾವು ಇನ್ನೂ ೧೦ ಸಾವಿರ ಎಕರೆ ಕೊಡುತ್ತೇವೆ ಎಂದು ರೈತರು ಹೇಳಿದ್ದಾರೆ. ಹೀಗಾಗಿ ವಿಸ್ತರಣೆ ಮಾಡುವ ಪ್ರಕ್ರಿಯೆ ಶುರು ಮಾಡಿದ್ದೇವೆ ಎಂದರು. ಪಾವಗಡದಂತೆಯೇ ಮಧುಗಿರಿಯಲ್ಲಿಯೂ ದೊಡ್ಡ ಸೋಲಾರ್ ಪಾರ್ಕ್ ನಿರ್ಮಾಣ ಮಾಡಲಾಗುವುದು. ಕೇಂದ್ರ ಸರ್ಕಾರದ ಒಂದು ಏಜೆನ್ಸಿ ಜೊತೆ ಸೇರಿ ನಿರ್ಮಾಣ ಮಾಡಲಿದ್ದೇವೆ. ಅವರು ಈ ಸೋಲಾರ್ ಪಾರ್ಕ್ಗೆ ಬಂಡವಾಳ ಹೂಡುತ್ತಾರೆ. ನಾವು ಜಮೀನು ಕೊಟ್ಟರೆ ರೈತರಿಗೆ ೩ ರೂಪಾಯಿ ೧೭ ಪೈಸೆಗಿಂತ ಕಡಿಮೆ ಹಣದಲ್ಲಿ ಗುತ್ತಿಗೆದಾರರು ವಿದ್ಯುತ್ ಕೊಡುತ್ತಾರೆ. ಒಂದು ಮೆಗಾವ್ಯಾಟ್‌ಗೆ ನಾಲ್ಕು ಎಕರೆಯಿಂದ ಐದು ಜಮೀನು ಬೇಕು. ಮಧುಗಿರಿಯಲ್ಲಿ ೫೦೦ ಮೆಗಾವ್ಯಾಟ್ ಉತ್ಪಾದನೆ ಮಾಡುವ ಉದ್ದೇಶವಿದ್ದು ಹೀಗಾಗಿ ೨೦೦೦-೨೫೦೦ ಎಕರೆ ಜಮೀನಿನ ಅಗತ್ಯವಿದೆ. ಇದಕ್ಕೆ ಸಚಿವ ರಾಜಣ್ಣ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದರು.

Previous articleಲೋಕಸಭೆಯಲ್ಲಿ ನೀಟ್ ವಿಚಾರ ಪ್ರಸ್ತಾಪಿಸಿದ ರಾಹುಲ್ ಗಾಂಧಿ
Next articleಹೇಮಾವತಿ ಎಕ್ಸ್ಪ್ರೆಸ್ ಲಿಂಕ್‌ಕೆನಾಲ್ ಕಾಮಗಾರಿ: ಟೆಕ್ನಿಕಲ್ ಟೀಮ್ ವರದಿ ಆಧಾರದ ಮೇಲೆ ತೀರ್ಮಾನ