ವಂದೇ ಭಾರತ್ ಟಿಕೆಟ್ ದರ ಪರಿಷ್ಕರಣೆ

0
16

ಬೆಂಗಳೂರು: ವಂದೇ ಭಾರತ್ ರೈಲಿನಲ್ಲಿ ಬಡವರು ಮಧ್ಯಮ ವರ್ಗದವರೂ ಪ್ರಯಾಣ ಮಾಡಲು ಅನುಕೂಲವಾಗುವಂತೆ ಟಿಕೆಟ್ ದರ ಪರಿಷ್ಕರಣೆ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ವಂದೇ ಭಾರತ್ ಸೇರಿದಂತೆ ಎಲ್ಲಾ ರೈಲುಗಳ ಟಿಕೆಟ್ ದರ ಪರಿಷ್ಕರಣೆ ಅಗತ್ಯವಿದೆ. ಬಡ, ಮಧ್ಯಮ ವರ್ಗದ ಜನ ವಂದೇ ಭಾರತ್ ರೈಲಿನಲ್ಲಿ ಓಡಾಡುವಂತೆ ಟಿಕೆಟ್ ದರ ಪರಿಷ್ಕರಣೆ ಮಾಡುತ್ತೇವೆ. ರೈಲು ಟಿಕೆಟ್ ದರ ಪರಿಷ್ಕರಣೆ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಜೊತೆ ಚರ್ಚೆ ಮಾಡಿದ್ದೇವೆ ಎಂದರು.
ಬೆಂಗಳೂರು ಜನ ಪ್ರತಿನಿಧಿಗಳು ಹಾಗೂ ರಾಜ್ಯ ರೈಲ್ವೆ ಇಲಾಖೆಯ ಮುಖ್ಯಸ್ಥರ ಜೊತೆಗೆ ಸಭೆ ಮಾಡಿದ್ದೇನೆ. ರೈಲ್ವೆ ಮಂತ್ರಿಗಳಾದ ಅಶ್ವಿನಿ ವೈಷ್ಣವ್ ಅವರ ಅನುಭವ ಇನ್ನಷ್ಟು ಹುಮ್ಮಸ್ಸು ಕೊಡುತ್ತಿದೆ. ರೈಲ್ವೆ ಇಲಾಖೆಯ ಕಾರ್ಯವೈಖರಿ ಒಂದು ರೀತಿಯ ಮಿಲಿಟರಿ ಇದ್ದಂತೆ. ದೇಶದಲ್ಲಿ ಮೊದಲು ಮಿಲಿಟರಿ ಪಡೆ ಆದರೆ, ಎರಡನೇ ಹಂತದಲ್ಲಿ ರೈಲ್ವೆ ಇಲಾಖೆ ಇದೆ. ಅದೇ ರೀತಿಯಲ್ಲಿ ಕೆಲಸ ಮಾಡಬೇಕಾಗುತ್ತದೆ ಎಂದರು.
ರೈಲ್ವೆ ಯೋಜನೆಗಳ ಕುರಿತು ರಾಜ್ಯ, ಕೇಂದ್ರಸರ್ಕಾರಗಳು ಒಗ್ಗಟ್ಟಿನಲ್ಲಿ, ಸಹಕಾರದಿಂದ ಕೆಲಸ ಮಾಡಬೇಕಿದೆ. ರೈಲ್ವೆ ಅಂಡರ್‌ಪಾಸ್, ಮೇಲ್ಸೇತುವೆ ಕಾಮಗಾರಿಗೆ ಹಣ ಕೊಡಬೇಕು. ಕೇಂದ್ರ ಸರ್ಕಾರ, ರಾಜ್ಯ ಸರ್ಕಾರ ಸಮಪಾಲು ಹಣ ನೀಡಬೇಕಾಗುತ್ತದೆ.
ಬೆಂಗಳೂರು ಕಂಟೋನ್ಮೆಂಟ್ ನಿಲ್ದಾಣದ ಯೋಜನಾ ಮೊತ್ತ ೪೮೫ ಕೋಟಿ ರೂ. ಯಶವಂತಪುರ ನಿಲ್ದಾಣದ ಯೋಜನಾ ಮೊತ್ತ ೩೮೭ ಕೋಟಿ ರೂ. ನಿಗದಿಯಾಗಿದೆ ಎಂದರು.

ವಿಭಿನ್ನ ರೀತಿಯಲ್ಲಿ ಅಭಿವೃದ್ಧಿ
ಯಶವಂತಪುರ-ಚನ್ನಸಂದ್ರ ನಡುವೆ ೨೫ ಕಿ.ಮೀ ಮತ್ತು ಬೈಯ್ಯಪ್ಪನಹಳ್ಳಿ-ಹೊಸೂರು ನಡುವೆ ೪೮ ಕಿ.ಮೀ. ಹಳಿ ಡಬ್ಲಿಂಗ್ ಯೋಜನೆಗೆ ೮೧೪ ಕೋಟಿ ರೂಪಾಯಿ ವೆಚ್ಚವಾಗಲಿದೆ. ರೈಲ್ವೆ ಓವರ್ ಬ್ರಿಡ್ಜ್, ಅಂಡರ್‌ಪಾಸ್‌ನಲ್ಲಿ ತೊಂದರೆ ಆಗಲು ಬಿಡಲ್ಲ. ಕರ್ನಾಟಕದಲ್ಲಿ ವಿಭಿನ್ನ ರೀತಿಯಲ್ಲಿ ರೈಲ್ವೆ ವಿಭಾಗ ಅಭಿವೃದ್ಧಿಯಾಗಲಿದೆ. ಇನ್ನೆರಡು ವರ್ಷಗಳಲ್ಲಿ ಕರ್ನಾಟಕ ವಿಭಿನ್ನ ರೀತಿಯಲ್ಲಿ ರೈಲ್ವೆ ವಿಭಾಗದಲ್ಲಿ ಅಭಿವೃದ್ಧಿ ಹೊಂದಲಿದೆ. ಹಿಂದೆ ರೈಲ್ವೆ ಅಂಡರ್ ಪಾಸ್ ಮತ್ತು ಮೇಲ್ಸೇತುವೆಗಳಿಗೆ ಕೇಂದ್ರ ಮತ್ತು ರಾಜ್ಯ ಸಹಯೋಗ ಇರುತ್ತಿತ್ತು. ಇದು ಎಷ್ಟರ ಮಟ್ಟಿಗೆ ಕಾರ್ಯೋನ್ಮುಖ ಆಗುತ್ತಿತ್ತೋ ಗೊತ್ತಿಲ್ಲ. ರೈಲುಗಳು ಬಂದಾಗ ಜನ, ಜಾನುವಾರುಗಳು ಪ್ರಾಣ ಕಳೆದುಕೊಳ್ಳುತ್ತಿದ್ದವು. ಇನ್ನು ಮುಂದೆ ಆ ರೀತಿ ಆಗದಂತೆ ಕಾಮಗಾರಿ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.

ರಾಜ್ಯ ಸರ್ಕಾರ ೫ ಕೋಟಿ ರೂ. ಬಾಕಿ
ತುಮಕೂರು-ಚಿತ್ರದುರ್ಗ-ದಾವಣಗೆರೆ ಮಾರ್ಗಕ್ಕೆ ೩ ಡಿಸಿ ನೇಮಕಾತಿ ಬಗ್ಗೆ ಈಗಾಗಲೇ ಸಿಎಂ ಸಿದ್ದರಾಮಯ್ಯ ಜೊತೆ ಮಾತನಾಡಿದ್ದೇನೆ. ೪೦ ತಿಂಗಳಲ್ಲಿ ಸಬ್‌ಅರ್ಬನ್ ಯೋಜನೆ ಮುಗಿಸುವುದಾಗಿ ಹೇಳಲಾಗಿತ್ತು. ೨೦೨೨ರಲ್ಲಿ ಮೋದಿ ಚಾಲನೆ ಕೊಟ್ಟಾಗ ೪೦ ತಿಂಗಳು ಎಂದು ಹೇಳಲಾಗಿತ್ತು. ನಮ್ಮ ನಿರೀಕ್ಷೆಯಂತೆ ಸಬ್‌ಅರ್ಬನ್ ರೈಲು ಯೋಜನೆ ಕೆಲಸ ನಡೀತಿಲ್ಲ. ಮುಂದಿನ ತಿಂಗಳು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಬಂದು ಪರಿಶೀಲಿಸುತ್ತಾರೆ. ೧೧,೮೦೦ ಕೋಟಿ ರೂ. ಪೈಕಿ ರಾಜ್ಯ ಸರ್ಕಾರ ಇನ್ನೂ ೫ ಕೋಟಿ ರೂ. ಕೊಡಬೇಕು ರೈಲ್ವೆ ಯೋಜನೆಗಳಿಗೆ ರಾಜ್ಯ ಸರ್ಕಾರ ೫ ಕೋಟಿ ರೂ. ಬಾಕಿ ಕೊಡಬೇಕಿದೆ ಎಂದು ತಿಳಿಸಿದ್ದಾರೆ.

ವರ್ತುಲ ರೈಲಿನ ಬಗ್ಗೆ ಗಮನ
ಬೆಂಗಳೂರಿಗೆ ಸಬರ್ಬನ್ ರೈಲು ವ್ಯವಸ್ಥೆ ಬರಲಿದ್ದು, ಇದರಿಂದ ರಾಜಧಾನಿಯ ಸಂಚಾರ ವ್ಯವಸ್ಥೆ ಸುಧಾರಿಸಲಿದೆ. ಹಾಗೆಯೇ ಬೆಂಗಳೂರಿನಲ್ಲಿ ಸಾರಿಗೆ ವ್ಯವಸ್ಥೆಯನ್ನು ಮತ್ತಷ್ಟೂ ಉತ್ತಮವಾಗಿಸಲು ಈಗಾಗಲೇ ವರ್ತುಲ ರೈಲು ವ್ಯವಸ್ಥೆಗೆ ನೀಲನಕ್ಷೆ ಸಿದ್ಧಪಡಿಸಲಾಗಿದೆ. ೨೮೭ ಕಿ.ಮೀ. ಉದ್ದದ ವರ್ತುಲ ರೈಲು ಯೋಜನೆ ಇದಾಗಿದ್ದು, ಈ ಸಂಬಂಧ ಕೇಂದ್ರ ೨೩ ಸಾವಿರ ಕೋಟಿ ರೂಪಾಯಿ ವೆಚ್ಚ ಮಾಡಲಿದೆ ಎಂದು ಮಾಹಿತಿ ನೀಡಿದರು.

Previous articleಬಾಯಿಗೆ ಬೀಗ ಹಾಕಿ ಇಲ್ಲದಿದ್ದರೆ ನೋಟಿಸ್
Next articleಮೂರು ಜಿಲ್ಲೆಗಳಲ್ಲಿ ಮ್ಯಾನುಫ್ಯಾಕ್ಟರ್ ಕ್ಲಸ್ಟರ್