ರಾಹುಲ್ ಸೂಚನೆ ಮೇರೆಗೆ ಸಿದ್ದು ಸೇಡಿನ ರಾಜಕಾರಣ

0
15

ಹುಬ್ಬಳ್ಳಿ: ಮುಖ್ಯಮಂತ್ರಿ ಸ್ಥಾನವನ್ನು ಭದ್ರವಾಗಿಟ್ಟುಕೊಳ್ಳಲು ಮತ್ತು ರಾಹುಲ್ ಗಾಂಧಿ ಸೂಚನೆಯ ಮೇರೆಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಮೇಲೆ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಪ್ರಲ್ಹಾದ ಜೋಶಿ ಆರೋಪಿಸಿದರು.
ಶನಿವಾರ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಬಿಜೆಪಿಯ ಅತ್ಯಂತ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರನ್ನು ಇಲ್ಲ ಸಲ್ಲದ ಪ್ರಕರಣದಲ್ಲಿ ಬಂಧಿಸಲು ಮುಂದಾದ ಕಾಂಗ್ರೆಸ್ ಪಕ್ಷದ ಸರ್ಕಾರಕ್ಕೆ ನ್ಯಾಯಾಲಯ ನೀಡಿದ ಆದೇಶ ಕಪಾಳಮೋಕ್ಷ ಮಾಡಿದಂತಾಗಿದೆ ಎಂದರು.
ಲೋಕಸಭಾ ಚುನಾವಣೆ ಮುಗಿಯುವವರೆಗೂ ರಾಜ್ಯ ಸರ್ಕಾರ ಸುಮ್ಮನಿತ್ತು. ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ರಚನೆಯಾಗುತ್ತಿದ್ದಂತೆಯೇ ಹತಾಶೆಗೊಂಡು ಸೇಡಿನ ರಾಜಕಾರಣ ಶುರು ಮಾಡಿಕೊಂಡಿದೆ. ನಮ್ಮ ಪಕ್ಷದ ಹಿರಿಯ ನಾಯಕರು, ಸಂಸದೀಯ ಮಂಡಳಿಯ ಸದಸ್ಯರಾದ ಬಿ.ಎಸ್ ಯಡಿಯೂರಪ್ಪ ಅವರನ್ನು ಗುರಿಯಾಗಿಸಿಕೊಂಡಿದೆ. ಅವರ ಮೇಲೆ ಜಾಮೀನು ರಹಿತ ವಾರೆಂಟ್ ಹೊರಡಿಸಿ ತಪ್ಪು ಮಾಡಿದೆ ಎಂದು ಹೇಳಿದರು.

Previous articleರಾಜ್ಯದ ಪದವಿಪೂರ್ವ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆ
Next articleರಾಜ್ಯದಲ್ಲಿ ಪೆಟ್ರೋಲ್‌, ಡೀಸೆಲ್‌ ದರ ಹೆಚ್ಚಳ