ಕಾಂಗ್ರೆಸ್‌ನಿಂದ ಮತ್ತೆರಡು ಗ್ಯಾರಂಟಿಗಳ ಘೋಷಣೆ

0
7

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮತದಾರರನ್ನು ಸೆಳೆಯಲು ಭರ್ಜರಿ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್ ಬೆಂಗಳೂರಿನಿಂದ ಶನಿವಾರ ಶ್ರಮಿಕ್ ನ್ಯಾಯ್ ಹಾಗೂ ಹಿಸ್ಸೇದಾರಿ ನ್ಯಾಯ್ ಎಂಬ ಎರಡು ಹೊಸ ಗ್ಯಾರಂಟಿಗಳನ್ನು ಘೋಷಿಸಿತು.
ಖಾಸಗಿ ಹೋಟೆಲ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಸುದ್ದಿಗೋಷ್ಠಿಯಲ್ಲಿ ಎರಡು ಹೊಸ ಗ್ಯಾರಂಟಿಗಳನ್ನು ಘೋಷಿಸಿದರು.
ದೆಹಲಿಯಿಂದ ಘೋಷಣೆಗಳನ್ನು ಮಾಡಬೇಕಿತ್ತು. ಅದರೆ ಇಂದು ಲೋಕಸಭೆ ಚುನಾವಣೆ ದಿನ ಘೋಷಣೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರಿನಿಂದಲೇ ಘೋಷಣೆ ಮಾಡುತ್ತಿದ್ದೇನೆ. ಮುಂಬೈನಲ್ಲಿ ನಾವು ೧೫ ಅಂಶಗಳ ಕಾರ್ಯಕ್ರಮ ಘೋಷಿಸಿದ್ದೇವೆ. ಈಗ ಶ್ರಮಿಕರಿಗೆ, ಬಡವರು, ಹಿಂದುಳಿದವರು ಹಾಗೂ ಅಸಂಘಟಿತ ವಲಯದ ಕಾರ್ಮಿಕರಿಗೆ ಸಾಮಾಜಿಕ, ಅರ್ಥಿಕ, ರಾಜಕೀಯ ಸಮಾನತೆ ಒದಗಿಸಲು ಶ್ರಮಿಕ್ ನ್ಯಾಯ್ ಹಾಗೂ ಹಿಸ್ಸೇದಾರ್ ನ್ಯಾಯ್ ಘೋಷಣೆ ಮಾಡುತ್ತಿದ್ದೇವೆ ಎಂದರು.
ಸಂಘಟಿತ, ಅಸಂಘಟಿತ ಕಾರ್ಮಿಕರಿಗೆ ವಿವಿಧ ಕಾರ್ಯಕ್ರಮ, ಸಾಮಾಜಿಕ ನ್ಯಾಯ, ಕನಿಷ್ಠ ವೇತನ ಕಾಯ್ದೆ. ಭವಿಷ್ಯ ನಿಧಿ ಕಾಯ್ದೆ, ಆರೋಗ್ಯ ವಿಮೆ ಕಾಯ್ದೆ ಹೊಸ ಗ್ಯಾರಂಟಿಯಲ್ಲಿ ಇರಲಿದೆ. ಕೇಂದ್ರದಲ್ಲಿ ನಮ್ಮ ಸರ್ಕಾರ ಬಂದರೆ ಇವುಗಳನ್ನು ಜಾರಿಗೆ ತರುತ್ತೇವೆ ಎಂದು ಅವರು ಭರವಸೆ ನೀಡಿದರು.
ಯುಪಿಎ ಸರ್ಕಾರ ಜಾರಿಗೆ ತಂದಿದ್ದ ಅನೇಕ ಜನಪರ ಕಾರ್ಯಕ್ರಮ ಹಾಗೂ ಕಾನೂನುಗಳನ್ನು ಬಿಜೆಪಿ ಸರ್ಕಾರ ೧೦ ವರ್ಷಗಳಲ್ಲಿ ದುರ್ಬಲ ಮಾಡಿದೆ. ನರೇಗಾ ಯೋಜನೆ ಅಡಿ ಕಾರ್ಮಿಕರಿಗೆ ಹಣ ಪಾವತಿಯಾಗುತ್ತಿಲ್ಲ. ಬಿಜೆಪಿ ಈ ಯೋಜನೆಯನ್ನು ದುರ್ಬಲಗೊಳಿಸಿದೆ. ಕಾಂಗ್ರೆಸ್ ಒಕ್ಕೂಟ ವ್ಯವಸ್ಥೆಯನ್ನು ಗೌರವಿಸುತ್ತದೆ. ಕೇಂದ್ರ ಸರ್ಕಾರ ರಾಜ್ಯಗಳಿಗೆ ಸರಿಯಾದ ಸಮಯಕ್ಕೆ ಅನುದಾನ ನೀಡಿದರೆ ಯೋಜನೆಗಳು ಸರಿಯಾದ ಸಮಯಕ್ಕೆ ಜಾರಿಯಾಗಿ ಜನರಿಗೆ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರ ಕರ್ನಾಟಕ ರಾಜ್ಯಕ್ಕೆ ಅನುದಾನ ಬಿಡುಗಡೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಪತ್ರ ಬರೆದರೆ ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸುತ್ತಿಲ್ಲ ಎಂದು ಮಲ್ಲಿಕಾರ್ಜುನ ಖರ್ಗೆ ದೂರಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಇಂಧನ ಸಚಿವ ಕೆ.ಜೆ.ಜಾರ್ಜ್, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಹಾಗೂ ಇತರರು ಇದ್ದರು.

Previous articleಸಂಸದೆ ಸುಮಲತಾ ಮೌನಕ್ಕೆ ಶರಣು
Next articleನಾನೂರು ಗಡಿ ದಾಟಲು ನಿಮ್ಮೂರ ಗ್ಯಾರಂಟಿ ಕೊಡಿ