ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್‌ಗೆ

0
8

ಬೆಂಗಳೂರು: ಜೆಡಿಎಸ್‌ನ ಇಬ್ಬರು ಮಾಜಿ ಶಾಸಕರು ಕಾಂಗ್ರೆಸ್‌ ಸೇರ್ಪಡೆಯಾಗಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಮತ್ತು ಕೆಪಿಸಿಸಿ ಅಧ್ಯಕ್ಷರಾದ ಡಿ ಕೆ ಶಿವಕುಮಾರ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡರು. ಇನ್ನೂ ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ,
ತುಮಕೂರು ಗ್ರಾಮಾಂತರ ಕ್ಷೇತ್ರದ ಗೌರಿಶಂಕರ್ ಮತ್ತು ದಾಸರಹಳ್ಳಿ ಮಂಜುನಾಥ್ ಅವರು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರುವ ಮೂಲಕ ಜಾತ್ಯತೀತ ಮತ್ತು ಸಂವಿಧಾನದ ಮೌಲ್ಯಗಳನ್ನು ಕಾಪಾಡಿಕೊಂಡಿದ್ದಾರೆ.
ನಾವಿದ್ದಾಗ ಜನತಾದಳ ಸೆಕ್ಯುಲರ್ ಆಗಿತ್ತು. ಈಗ “ಎಸ್” ಕಿತ್ತೋಗಿ ಕೇವಲ ಜನತಾದಳ ಆಗಿ ಉಳಿದಿದೆ. ಹಿಂದೆಯೂ ಬಿಜೆಪಿ ಜತೆ ಕೈ ಜೋಡಿಸಿದ್ದ ಕಾರಣಕ್ಕೆ ಜನತಾ ಪರಿವಾರದಲ್ಲಿ ಸೆಕ್ಯುಲರ್ ಸಿದ್ದಾಂತದವರೆಲ್ಲಾ ಪ್ರತ್ಯೇಕವಾಗಿ ಉಳಿದೆವು. ಈಗ ಜೆಡಿಎಸ್ ಮತ್ತೆ ಬಿಜೆಪಿ ಜೊತೆ ಬೆರೆಯುತ್ತಿದೆ. ನಾನು ಈ ಜೆಡಿಎಸ್ ಅನ್ನು ಬಿಜೆಪಿಯ “ಬಿ” ಟೀಮ್ ಅಂದಿದ್ದಕ್ಕೆ ಸಿಟ್ಟಾಗಿದ್ದರು. ಅಂದು ನಾನು ಹೇಳಿದ್ದನ್ನು ಇಂದು ಅವರೇ ಸಾಬೀತುಪಡಿಸಿದ್ದಾರೆ.
ಜೆಡಿಎಸ್ ಈಗ ತನ್ನ ಸ್ವರೂಪದಲ್ಲಿ ಜನಸಮುದಾಯದ ರಾಜಕೀಯ ಪಕ್ಷ ಆಗಿ ಉಳಿದಿಲ್ಲ. ಕೇವಲ ಕುಟುಂಬದ ಪಕ್ಷ ಆಗಿಯಷ್ಟೆ ಸೀಮಿತವಾಗಿದೆ. ಜೆಡಿಎಸ್‌ನ ಡಬ್ಬಲ್ ಗೇಮ್ ಅನ್ನು ಸರಿಯಾಗಿ ಅರ್ಥ ಮಾಡಿಕೊಂಡಿರುವ ಗೌರಿಶಂಕರ್ ಮತ್ತು ಮಂಜುನಾಥ್ ಜೊತೆಗೆ ಇನ್ನೂ ಬಹಳ ಮಂದಿ ಕಾಂಗ್ರೆಸ್ ಸೇರುತ್ತಿದ್ದಾರೆ. ಆ ಮೂಲಕ ತಮ್ಮ ರಾಜಕೀಯ ಜೀವನವನ್ನು ಭದ್ರ ಮಾಡಿಕೊಳ್ಳುತ್ತಿದ್ದಾರೆ.
ನಾವು ಗ್ಯಾರಂಟಿ ಕಾರ್ಯಕ್ರಮಗಳನ್ನು ಕೊಟ್ಟಾಗ ಅದನ್ನು ಟೀಕಿಸಿದ್ದ ಪ್ರಧಾನಿಗಳು ಈಗ “ಮೋದಿ ಗ್ಯಾರಂಟಿ” ಹೆಸರಿನಲ್ಲಿ ಪ್ರಚಾರ ಮಾಡುತ್ತಿದ್ದಾರೆ. ಪ್ರಧಾನಿ ಮೋದಿಯವರೇ, ನಿಮಗೆ ನಾಚಿಕೆ ಆಗತ್ತೋ ಇಲ್ಲವೋ? ರಾಜ್ಯದ, ಕನ್ನಡ ನಾಡಿನ ಜನತೆಯ ಹಣ ಇರುವ ಸರ್ಕಾರದ ಕಾರ್ಯಕ್ರಮಗಳನ್ನು ಪ್ರಧಾನಿ ಮೋದಿಯವರು ತಮ್ಮ ಕಾರ್ಯಕ್ರಮ ಎಂದು ಬಿಂಬಿಸಿ ಪ್ರಚಾರ ಪಡೆಯುತ್ತಿರುವುದು ನಾಚಿಕೆಗೇಡಿನ ಸಂಗತಿ. ಇದಕ್ಕೆ ರಾಜ್ಯದ ಜನತೆಯ ಮತ್ತು ನಮ್ಮಗಳ ಬೆಂಬಲ ಇಲ್ಲ ಎಂದಿದ್ದಾರೆ.

ಇನ್ನೂ ಈ ವೇಳೆ ಉಪಮುಖ್ಯಮಂತ್ರಿ ಡಿ. ಕೆ. ಶಿವಕುಮಾರ ಮಾತನಾಡಿ, ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ಮೌಲ್ಯಗಳ ಆಧಾರದಲ್ಲಿ ಸ್ಥಾಪಿತವಾದ ಕಾಂಗ್ರೆಸ್ ಪಕ್ಷಕ್ಕೆ ಬಹುದೊಡ್ಡ ಇತಿಹಾಸವಿದ್ದು, ಜನರ ನಂಬಿಕೆ ಉಳಿಸಿಕೊಂಡಿದೆ. ಇಂದು ಅನೇಕರು ಜೆಡಿಎಸ್ ತೊರೆದು ಪಕ್ಷ ಸೇರ್ಪಡೆಯಾಗಿದ್ದು, ಪಕ್ಷದ ಬಲವನ್ನು ಇನ್ನಷ್ಟು ಹೆಚ್ಚಿಸಿದೆ. ನಮ್ಮ ಪಕ್ಷದಲ್ಲಿ ಯಾವುದೇ ತಾರತಮ್ಯವಿಲ್ಲದೆ ಕಾರ್ಯಕರ್ತರಿಗೆ ಸೂಕ್ತ ಸ್ಥಾನಮಾನಗಳನ್ನು ನೀಡಲಾಗುತ್ತಿದ್ದು, ಎಲ್ಲರೂ ಒಂದೇ ಎನ್ನುವ ಧ್ಯೇಯದೊಂದಿಗೆ ಪಕ್ಷದ ಬೆಳವಣಿಗೆಗೆ ಶ್ರಮಿಸೋಣ ಎಂದು ತಿಳಿಸಿದ್ದಾರೆ.

Previous articleಪಟಾಕಿ ಸಿಡಿದು ವ್ಯಕ್ತಿಸಾವು
Next articleವಿಶ್ವಕಪ್‌ ಕ್ರಿಕೆಟ್: ಭಾರತ ಫೈನಲ್‌ಗೆ